ಮುಂಬೈನಿಂದ ಬಂದಿದ್ದ 8 ವರ್ಷದ ಬಾಲಕಿಗೆ ಕೋವಿಡ್ ದೃಢಪಟ್ಟಿದೆ. ಕಳೆದ ಒಂದು ವರ್ಷದ ಬಳಿಕ ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿದೆ.
ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ಬಾಲಕಿ ಕ್ಷಯರೋಗ (ಟಿಬಿ) ಚಿಕಿತ್ಸೆಗಾಗಿ ಡಿ.23ರಂದು ಜಿಮ್ಸ್‌ಗೆ ದಾಖಲಾಗಿದ್ದಳು. ಆಕೆಯಲ್ಲಿ ನಿರಂತರ ಜ್ವರ ಇರುವುದು ಕಂಡು ಬಂದಿದ್ದು, ಇನ್ನೂ ಕೆಲವು ರೋಗ ಲಕ್ಷಣಗಳು ಕಂಡು ಬಂದಿದ್ದವು. ಸೋಮವಾರ ಪರೀಕ್ಷೆ ಮಾಡಿದಾಗ ಕೋವಿಡ್ ದೃಢ ಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದ್ದಾರೆ.
ಸೋಂಕಿತ ಬಾಲಕಿಗೆ ಕೋವಿಡ್ ಹಾಗೂ ಕ್ಷಯರೋಗ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಸಂಪರ್ಕಕ್ಕೆ ಬಂದವರನ್ನು ಐಸೊಲೇಷನ್ ಮಾಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ ಸಂಶಯಾಸ್ಪದ 23 ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಾಸ್ಕ ಧರಿಸಿ
ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಕೋವಿಡ್-19ರ ಉಪತಳಿ ಜೆ.ಎನ್-1 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವಿಕೆ, ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಸೇರಿದಂತೆ ಕೋವಿಡ್ ಸುರಕ್ಷಾ ನಿಯಮ ಪಾಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.