ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಮಾನ ನಿಲ್ದಾಣದ ಸಾದಹಳ್ಳಿ ಗೇಟ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ ಹಲವು ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿರುವ ಬಹುತೇಕ ವಾಣಿಜ್ಯ ಅಂಗಡಿಗಳ ನಾಮಫಲಕ ಅನ್ಯ ಭಾಷೆಗಳಲಿದ್ದು, ಕನ್ನಡ ಕಣ್ಮರೆಯಾಗಿದೆ. ಈ ಹಿನ್ನೆಲೆ, ಕನ್ನಡಕ್ಕೆ ಶೇ.60 ರಷ್ಟು ಆದ್ಯತೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗಡುವು ನೀಡಿತ್ತು. ಆದರೆ, ನಗರದ ಬಹುತೇಕ ವ್ಯಾಪಾರ, ಉದ್ಯಮಗಳ ನಾಮಫಲಕಗಳಲ್ಲಿ ಅನ್ಯ ಭಾಷೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆ, ಬೆಂಗಳೂರಿನಲ್ಲಿ ಕರವೇ ಬೃಹತ್ ರ‍್ಯಾಲಿ ಆರಂಭಿಸಿದ್ದರು.
ಈ ರ‍್ಯಾಲಿ ಬೆಂಗಳೂರು ವಿಮಾನ ನಿಲ್ದಾಣದ ಸಾದಹಳ್ಳಿ ಗೇಟ್ ಬಳಿಯ ಟೋಲ್ ಪ್ಲಾಜಾದಿಂದ ಆರಂಭವಾಗಿ ಕಬ್ಬನ್ ಪಾರ್ಕ್ ವರೆಗೆ ಸಾಗಿದೆ. ಈ ನಡುವೆಯೇ ಪೊಲೀಸರು ಪ್ರತಿಭಟನಾನಿರತ ಮಹಿಳೆಯರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಕೆ.ಆರ್.ಪುರಂ, ಹೆಬ್ಬಾಳ, ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ನಗರದ ಯುಬಿ ಸಿಟಿಯಲ್ಲಿ ಕರವೇ ಕಾರ್ಯಕರ್ತರು ಅಂಗಡಿಗಳಿಗೆ ಹಾಕಿದ್ದ ಇಂಗ್ಲಿಷ್ ನಾಮಫಲಕಗಳನ್ನು ಒಡೆದು ಹಾಕುತ್ತಿದ್ದು, ಬೋರ್ಡ್‌ಗಳಿಗೆ ಮಸಿ ಬಳಿಯುತ್ತಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಬಳಿ ಸೇರಿರುವ ಕಾರ್ಯಕರ್ತರು, ಇಂಗ್ಲಿಷ್ ಬೋರ್ಡ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಸಾದಹಳ್ಳಿಯ ಬ್ಲೂಮ್ ಹೋಟೆಲ್ ಬಳಿ ಲೈಟಿಂಗ್ ಬೋರ್ಡ್ ಒಡೆದು ಹಾಕಿದ್ದಾರೆ.
ಹೆದ್ದಾರಿ ಬದಿಯ ದೊಡ್ಡ ದೊಡ್ಡ ಹೋಲ್ಡರ್‌ಗಳ ಮೇಲೆ ಹತ್ತಿದ ಕಾರ್ಯಕರ್ತರು ಇಂಗ್ಲಿಷ್‌ನಲ್ಲಿ ಹಾಕಲಾಗಿರುವ ಫಲಕಗಳನ್ನು ಧ್ವಂಸಗೊಳಿಸಿದ್ದಾರೆ. ಮಾಲ್‌ಗಳ ಮುಂದೆ ಇರುವ ಇಂಗ್ಲಿಷ್ ಬೋರ್ಡ್ ಇರೋ ಕಾರಣ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸರು ಬರುತ್ತಿದ್ದಂತೆ ಕೆಲ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ ಪ್ರಸಂಗ ನಡೆದಿದೆ.
ಕಾರ್ಯಕರ್ತರು ಇಂಗ್ಲಿಷ್ ಭಾಷೆಯಲ್ಲಿದ್ದ ಜಾಹೀರಾತು ಫಲಕಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕರ್ತರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ: 30 ಜನರಿಗೆ ಗಾಯ
ಚಿಕ್ಕಜಾಲ ವ್ಯಾಪ್ತಿಯಲ್ಲಿರುವ ಅಂಗಡಿ- ಮಳಿಗೆಗಳ ಮೇಲಿದ್ದ ಇಂಗ್ಲಿಷ್ ಫಲಕಗಳನ್ನು ಕಿತ್ತು ಹಾಕಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ನಗರದಲ್ಲಿ ಏಕಕಾಲಕ್ಕೆ ಪ್ರತಿಭಟನೆ ಆರಂಭವಾದ ಹಿನ್ನೆಲೆಯಲ್ಲಿ, ವಿವಿಧ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.