ವಿಚಾರಣೆ ವೇಳೆಯಲ್ಲಿ ಸೇನೆಯಿಂದ ಮೃತಪಟ್ಟ ಮೂವರು ನಾಗರಿಕರ ಬಗ್ಗೆ ಸ್ಪಷ್ಟವಾಗಿ ಸೂಚನೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಸೇನೆಯು ದೇಶವನ್ನು ಸುರಕ್ಷಿತವಾಗಿಡುತ್ತದೆ, ಆದರೆ ಕೆಲವೊಮ್ಮೆ ಇಂತಹ ತಪ್ಪುಗಳು ಉಂಟಾಗುತ್ತವೆ. ಮುಂದೆ ಇಂತಹ ತಪ್ಪುಗಳು ಮರುಕಳಿಸಬಾರದು’ ಎಂದು ಆದೇಶಿಸಿದ್ದಾರೆ.
‘ದೇಶದ ರಕ್ಷಣೆ ಮಾಡುವ ಸಂದರ್ಭದಲ್ಲಿ ನಾಗರಿಕರ ಹೃದಯವನ್ನು ಗೆಲ್ಲುವುದು ಸೇನೆಯ ಜವಾಬ್ದಾರಿಯಾಗಿದೆ’ ಎಂದು ಭದ್ರತಾ ಸ್ಥಿತಿಯ ಪರಿಶೀಲನೆಗಾಗಿ ಜಮ್ಮು ಕಾಶ್ಮೀರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
“ನೀವು ದೇಶದ ರಕ್ಷಕರು. ದೇಶದ ಭದ್ರತೆಯನ್ನು ನಿಭಾಯಿಸುವ ಸಂದರ್ಭದಲ್ಲಿ ನಾಗರಿಕರ ಹೃದಯವನ್ನು ಗೆಲ್ಲುವುದು ಸಹ ನಿಮ್ಮ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿಯೂ ನೀವು ಪ್ರಯತ್ನ ಮಾಡುತ್ತಿದ್ದೀರಿ. ಆದರೆ ಕೆಲವೊಮ್ಮೆ ತಪ್ಪುಗಳು ಸಂಭವಿಸುತ್ತದೆ. ದೇಶದ ನಾಗರಿಕರನ್ನು ನೋಯಿಸುವ ಇಂತಹ ತಪ್ಪುಗಳು ನಡೆಯಬಾರದು” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
“ಭಯೋತ್ಪಾದವನ್ನು ಕೊನೆಗೊಳಿಸಿ ಯುದ್ಧವನ್ನು ಗೆಲ್ಲಿ. ಹಾಗೆಯೇ ಇದೇ ಸಂದರ್ಭದಲ್ಲಿ ನಾಗರಿಕರ ಹೃದಯವನ್ನು ಗೆಲ್ಲಬೇಕು. ಇದು ನಿಮ್ಮ ಹೊಣೆಗಾರಿಕೆಯಾಗಿದೆ. ಭಾರತೀಯ ಸೇನೆ ಸಾಮಾನ್ಯ ಸೇನೆಯಾಗಿ ಉಳಿದಿಲ್ಲ. ಅತ್ಯುತ್ತಮ ಶಸ್ತ್ರಾಸ್ತ್ರ ಉಪಕರಣಗಳನ್ನು ಹೊಂದಿರುವ ಶಕ್ತಿಯುತ ಸೇನೆಯಾಗಿದೆ. ಭಾರತದ ಭದ್ರತೆ ನಿಮ್ಮ ಕೈಯಲಿದೆ” ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ₹40 ಸಾವಿರ ಕೋಟಿ ಲೂಟಿ ಆರೋಪ; ಪ್ರಧಾನಿ ಮೋದಿ ಏನು ಹೇಳುತ್ತಾರೆ?
ಪೂಂಚ್ನಲ್ಲಿ ದಾಳಿಯ ನಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜೌರಿ ಮತ್ತು ಜಮ್ಮುವಿಗೆ ಒಂದು ದಿನದ ಭೇಟಿಗಾಗಿ ಆಗಮಿಸಿದ್ದಾರೆ.
ಪೂಂಚ್ ಜಿಲ್ಲೆಯಲ್ಲಿ ಉಗ್ರರಿಂದ ಹತರಾದ ನಾಲ್ವರು ಸೈನಿಕರ ಸಾವಿನ ನಂತರ ವಿಚಾರಣೆಗಾಗಿ ಕರೆದೊಯ್ದಿದ್ದ ಸಂದರ್ಭದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು. ಅವರು ಪೊಲೀಸರ ಚಿತ್ರಹಿಂಸೆಯಿಂದ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತವಾದ ನಂತರ ಕೇಂದ್ರ ರಕ್ಷಣಾ ಸಚಿವರು ಹೇಳಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ಆಡಳಿತವು ಮೃತಪಟ್ಟ ನಾಗರಿಕರ ಕುಟುಂಬಗಳಿಗೆ ಉದ್ಯೋಗ ಮತ್ತು ಪರಿಹಾರವನ್ನು ನೀಡಿದೆ. ಘಟನೆಯ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಸೇನೆ ಈಗಾಗಲೇ ಆಂತರಿಕ ತನಿಖೆ ಮೂಲಕ ಕ್ರಮ ಕೈಗೊಂಡಿದೆ. ಅಲ್ಲದೆ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ತಿಳಿಸಿದೆ.