ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಟಗಾರ ಡೀನ್ ಎಲ್ಗರ್ ಅವರ ಆಕರ್ಷಕ ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 11 ರನ್‌ಗಳ ಮುನ್ನಡೆ ಪಡೆದಿದೆ.
ಸೆಂಚೂರಿಯನ್‌ನಲ್ಲಿ ನಡೆಯುತ್ತಿರುವ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ನೀಡಿದ 245 ರನ್‌ಗಳಿಗೆ ಉತ್ತರವಾಗಿ ಹರಿಣಗಳ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 256 ರನ್ ಕಲೆ ಹಾಕಿದೆ.
ನಾಲ್ಕನೇ ಓವರ್‌ನಲ್ಲಿ ವೇಗಿ ಮೊಹಮದ್ ಸಿರಾಜ್ ಅವರು ಐಡೆನ್ ಮಾರ್ಕ್ರಾಮ್(5) ಅವರ ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾಕ್ಕೆ ಆಘಾತವುಂಟು ಮಾಡಿದರು. ನಂತರ ಬಂದ ಟೋನಿ ಡಿ ಜೋರ್ಜಿ ಒಂದಷ್ಟು ಹೊತ್ತು ಆಟವಾಡಿ 28 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಔಟಾದರು. ನಾಲ್ಕನೇ ಕ್ರಮಾಂಕದ ಕೀಗನ್ ಪೀಟರ್ಸನ್(2) ಅವರನ್ನು ಬುಮ್ರಾ ಬೇಗನೆ ಪೆವಿಲಿಯನ್‌ಗೆ ಕಳಿಸಿದರು.
ಮೂರು ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ಪಾರು ಮಾಡಿದ್ದು ಆರಂಭಿಕ ಆಟಗಾರ ಡೀನ್ ಎಲ್ಗರ್ ಹಾಗೂ ಡೇವಿಡ್ ಬೆಡಿಂಗ್ಹ್ಯಾಮ್ ಜೋಡಿ.
ಡೀನ್ ಮತ್ತು ಡೇವಿಡ್ 131 ರನ್‌ಗಳ ಜೊತೆಯಾಟದಿಂದ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಡೀನ್ ಎಲ್ಗರ್ 201 ಚೆಂಡುಗಳಲ್ಲಿ 23 ಬೌಂಡರಿಯೊಂದಿಗೆ ಅಜೇಯ 137 ರನ್ ಗಳಿಸಿದ್ದಾರೆ. ಡೀನ್‌ಗೆ ಉತ್ತಮ ಜೊತೆ ನೀಡಿದ ಡೇವಿಡ್ ಬೆಡಿಂಗ್ಹ್ಯಾಮ್ (56) ಅರ್ಧ ಶತಕ ಪೂರ್ಣಗೊಳಿಸಿದರು. 87 ಎಸೆತಗಳ ಇವರ ಆಟದಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿ ಒಳಗೊಂಡಿದ್ದವು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ₹40 ಸಾವಿರ ಕೋಟಿ ಲೂಟಿ ಆರೋಪ; ಪ್ರಧಾನಿ ಮೋದಿ ಏನು ಹೇಳುತ್ತಾರೆ?
ಜಸ್ಪ್ರೀತ್ ಬುಮ್ರಾ 48/2 ,ಮೊಹಮ್ಮದ್ ಸಿರಾಜ್ 61/2, ಪ್ರಸಿದ್ಧ್ ಕೃಷ್ಣ 57/1 ವಿಕೆಟ್ ಪಡೆದಿದ್ದು,ಶಾರ್ದೂಲ್ ಠಾಕೂರ್ ಹಾಗೂ ರವಿಚಂದ್ರನ್ ಅಶ್ವಿನ್ ವಿಕೆಟ್ ಖಾತೆ ತೆರದಿಲ್ಲ.
ಕೆ. ಎಲ್ ರಾಹುಲ್ ಶತಕ
ಇದಕ್ಕೂ ಮೊದಲು ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೆ ಎಲ್ ರಾಹುಲ್ ಶತಕದ ನೆರವಿನಿಂದ 67.4 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್ ಆಯಿತು.
ನಾಯಕ ರೋಹಿತ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಯಾರೊಬ್ಬರೂ ಸಫಲವಾಗದಿದ್ದ ವೇಳೆ ಕನ್ನಡಿಗ ಕೆ ಎಲ್ ರಾಹುಲ್ ಒಬ್ಬರೆ ಏಕಾಂಗಿಯಾಗಿ ನಿಂತು ಶತಕಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ರಾಹುಲ್ 137 ಎಸೆತಗಳಲ್ಲಿ 14 ಬೌಂಡರಿ 4 ಸಿಕ್ಸರ್‌ನೊಂದಿಗೆ 101 ಗಳಿಸಿದರು. ರಾಹುಲ್ ಅವರ ಈ ಶತಕ ಟೆಸ್ಟ್ ಮಾದರಿಯಲ್ಲಿ 7 ಶತಕವಾಗಿದೆ. ವಿದೇಶಗಳಲ್ಲಿ ಬಾರಿಸಿರುವ ಎರಡೂ ಶತಕಗಳು ಸಂಚೂರಿಯನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಸಿಡಿಸಿದ್ದಾರೆ.