ಗೊಂಡ್ ಪರ್ಯಾಯ ಪದ ʼಕುರುಬʼ ಎಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಡಿಸೆಂಬರ್ 28, ಗುರುವಾರದಂದು ಕಲಬುರಗಿಯ ಕನಕ ಭವನದಿಂದ ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಗುವುದು ಎಂದು ಕುರುಬ ಸಮಾಜದ ಅಧ್ಯಕ್ಷ ಬಸವರಾಜ್ ಹೊಸಳ್ಳಿ ಮತ್ತು ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ತಿಂತಣಿ ಹಾಗೂ ಚಿತ್ತಾಪುರ ತಾಲೂಕ ಗೊಂಡ ಕುರುಬ ಸಂಘ ಮತ್ತು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಪಟ್ಟಣದಲ್ಲಿ ಡಿ.26ರಂದು ಕನಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 2004ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಕುಲಶಾಸ್ತ್ರ ವರದಿಯನ್ನು ಮೂರು ಬಾರಿ ಪೂರಕ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಕೇಂದ್ರ ಸರ್ಕಾರವು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಅರ್ಜುನ್ ಮುಂಡ, ಭಗವಂತ ಖುಬಾ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಉಮೇಶ್ ಜಾದವ್, ಬಿ.ಎಲ್. ಸಂತೋಷ ಅವರನ್ನು ಪೂಜ್ಯ ಶ್ರೀಸಿದ್ದರಾಮನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಭೇಟಿಯಾಗಿ ಮನವಿ ಹಾಗೂ ಚಿಂಚೋಳಿ ಮತ್ತು ಬಸವಕಲ್ಯಾಣ ವಿಧಾನಸಭೆ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದಲ್ಲಿ ಕುರುಬರ ಎಸ್‌ಟಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಚುನಾವಣೆಯಲ್ಲಿ ಲಾಭ ಪಡೆದಿದ್ದಾರೆ ಎಂದು ಅವರು ದೂರಿದ್ದಾರೆ.
2024ರ ಚುನಾವಣೆ ಹತ್ತಿರ ಬಂದರೂ ಕುರುಬರ ಎಸ್.ಟಿ ಬೇಡಿಕೆ ಈಡೇರದ ಕಾರಣ ಕೇಂದ್ರ ಸರ್ಕಾರವು ಕುರುಬರಿಗೆ ನಂಬಿಕೆ ದ್ರೋಹ ಮಾಡಿದೆ. ಕುರುಬರ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯ ಬಂದಿದೆ. ಡಿಸೆಂಬರ್ 28ರಂದು ನಡೆಯುವ ಹೋರಾಟದಲ್ಲಿ ತಾಲೂಕಿನ ಕುರುಬ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ತಾಲೂಕಾಧ್ಯಕ್ಷ ಬಸವರಾಜ್ ಪೂಜಾರಿ ಮೊಗಲಾ, ಪ್ರಭು ಗಂಗಾಣಿ, ಯಲ್ಲಾಲಿಂಗ ಪೂಜಾರಿ, ಜಗನ್ನಾಥ್ ಪೂಜಾರಿ ಆಲೂರ್, ನಾಗೇಶ್, ಬೀರಲಿಂಗ ಪೂಜಾರಿ, ಭೋಜು ಶೇರಿ, ಸಂತೋಷ್ ಪೂಜಾರಿ ಸೇರಿದಂತೆ ಇತರರು ಇದ್ದರು.