ಸದಾ ಸಂಸ್ಕೃತಿಯ ಬಗ್ಗೆ ಉಪದೇಶ ಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ವೇಶ್ಯೆಯರಿಗೆ ಹೋಲಿಸುವುದನ್ನ ಸಂಘ ಪ್ರಭಾಕರ ಭಟ್ಟರಿಗೆ ಕಲಿಸಿದೆಯಾ? ಇದು ಖಂಡಿತ ಈ ನೆಲದ ಅಥವಾ ಸನಾತನ ಸಂಸ್ಕೃತಿ ಅಲ್ಲವೇ ಅಲ್ಲ.
ಮುಸ್ಲಿಂ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ ಭಟ್ಟರ ಹೇಳಿಕೆ ವಿಕೃತ ಮನಸ್ಥಿತಿಯದ್ದಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ಇಂತಹ ಹೇಳಿಕೆ ನೀಡಿ ಕೋಮು ಗಲಭೆ ನಡೆಸುವ ಬಿಜೆಪಿ ಪರಿವಾರದ ಟೂಲ್‌ಕಿಟ್‌ನ ಮೊದಲ ಹಂತ ಇದಾಗಿದೆ.
ಅಮಾಯಕ ಯುವಕರು ಪರಸ್ಪರ ಕಾದಾಡಿಕೊಳ್ಳಲೇ ಬೇಕು ಅನ್ನುವ ವಾತಾವರಣ ಸೃಷ್ಟಿಸಲು ಇಂತಹ ಹೇಳಿಕೆ ಬರುತ್ತಿದೆ. ಕಳೆದ 4 ವರ್ಷಗಳ ಕಾಲ ಮೌನವಾಗಿದ್ದ ಅನಂತಕುಮಾರ ಹೆಗಡೆ ಇದೀಗ ಕೋಮು ಹೇಳಿಕೆ ಶುರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶೋಭಾ, ಸಿ ಟಿ ರವಿ, ಇತರರು ಹಾಗೂ ಪರಿವಾರದ ನಾಯಕ ಕೋಮು ಹೇಳಿಕೆ ನಿರಂತರವಾಗಿ ಬರುತ್ತದೆ.
ಹೀಗೆ ಉಂಟಾಗುವ ಕ್ರಿಯೆ ಮತ್ತು ಪ್ರತಿಕ್ರಿಯೆಯಿಂದ ಕೋಮು ಸೌಹಾರ್ದತೆ ಹಾಳಾಗಿ ಅಶಾಂತಿ ಮೂಡುವುದನ್ನೇ ಚುನಾವಣೆಗೆ ಬಂಡವಾಳ ಮಾಡುವುದು ಈ ಪರಿವಾರದ ಉದ್ದೇಶವಾಗಿದೆ. ಬಿಜೆಪಿ ರಾಜ್ಯ ಸರ್ಕಾರ ಇದ್ದಾಗ ಬಾಯಿಗೆ ಬೀಗ ಹಾಕಿದ್ದ ನಾಯಕರು ಈಗ ಬಾಯಿಗೆ ಬಂದಂತೆ ಹೇಳಿಕೆ ಕೊಡುವಂತೆ ಪರಿವಾರದ ನಾಯಕರ ಸೂಚನೆ ಬಂದಂತಿದೆ.
ಇದರಿಂದಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸುವುದು ಪರಿವಾರದ ಟೂಲ್‌ಕಿಟ್‌ನ ತಂತ್ರವಾಗಿದೆ. ಈ ರೀತಿ ಪುಂಖಾನು ಪುಂಖವಾಗಿ ಹೇಳಿಕೆ ಕೊಡುವ ನಾಯಕರನ್ನು ಸರ್ಕಾರ ಬಂಧನ ಮಾಡಲು ಪ್ರಾರಂಭಿಸಿದರೆ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ಸೌಹಾರ್ದತೆಗೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಗ್ಧ ಯುವಕರನ್ನು ಬಳಸುವುದು ಮತ್ತು ಸಹಜವಾಗಿ ಅದಕ್ಕೆ ಅನ್ಯಮತದವರು ನೀಡುವ ಪ್ರತಿಕ್ರಿಯೆಯಿಂದ ರಾಜ್ಯ ರಣರಂಗವಾಗುತ್ತದೆ. ಇದು ಬಿಜೆಪಿ ಟೂಲ್ ಕಿಟ್ ನ ಸಮಗ್ರ ಸಂಗತಿಯಾಗಿದೆ. ನನ್ನ ಈ ಮಾತು ಸುಳ್ಳು ಎಂದಾದರೆ ಪ್ರಭಾಕರ ಭಟ್ಟರ ಮಾತನ್ನು ಬಿಜೆಪಿ ಮತ್ತು ಸಂಘ ಪರಿವಾರ ಖಂಡಿಸಬೇಕು.
ಸದಾ ಸಂಸ್ಕೃತಿಯ ಬಗ್ಗೆ ಉಪದೇಶಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ವೇಶ್ಯೆಯರಿಗೆ ಹೋಲಿಸುವುದನ್ನ ಸಂಘ ಪ್ರಭಾಕರ ಭಟ್ಟರಿಗೆ ಕಲಿಸಿದೆಯಾ? ಇದು ಖಂಡಿತ ಈ ನೆಲದ ಅಥವಾ ಸನಾತನ ಸಂಸ್ಕೃತಿ ಅಲ್ಲವೇ ಅಲ್ಲ. ಇಂದು ನವ ಹಿಂದುತ್ವದ ಪರಿವಾರದ ಹೀನ ವಿಕೃತ ಮನಸ್ಸಿನ ಪ್ರತಿಫಲನವಾಗಿದೆ. ಅಮಾಯಕ ತಾಯಂದಿರ ಶಾಪ ಇವರಿಗೆ ತಾಗದೇ ಇರದು.
ಇದು ಬಿಜೆಪಿ ಪರಿವಾರದ ಟೂಲ್ ಕಿಟ್ ಅಲ್ಲಾ ಅಂತಾದರೆ, ಅವರ ಮೇಲೆ ಕ್ರಮಕ್ಕೆ ಒಪ್ಪಬೇಕು. ಇಲ್ಲವೆಂದಾದರೆ ಇದು ಚುನಾವಣೆಯ ಟೂಲ್‌ಕಿಟ್ ಎಂದೇ ಸಿದ್ಧವಾಗುತ್ತದೆ
ಇಂತಹ ಸೂಕ್ಷ್ಮ ಪರಿಸ್ಥಿತಿಯನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡು ಜಾಣ ನಡೆ ಇಡಬೇಕಿದೆ. ಅವರ ಕುತಂತ್ರಕ್ಕೆ ರಾಜ್ಯದ ಜನರ ಜೀವ ಬಲಿಯಾಗದಂತೆ ನೋಡಿಕೊಳ್ಳುವುದು ಜಾತ್ಯತೀತ ಹಿಂದು ಮುಸ್ಲಿಂ ಕ್ರೈಸ್ತರ ಸಂಕಲ್ಪವಾಗಬೇಕು.
ಸರ್ಕಾರ ನ್ಯಾಯಾಲಯದ ಮೂಲಕವೇ ಕಠಿಣ ಕಾನೂನು ಕ್ರಮ ಕೈ ತೆಗೆದುಕೊಳ್ಳಬೇಕು. ಚುನಾವಣೆ ಗೆಲ್ಲಲು ಯಾವ ಹೀನ ಮಟ್ಟಕ್ಕೂ ಇಳಿಯುವ ಬಿಜೆಪಿ ಪರಿವಾರವನ್ನು ಶಾಂತಿ ಸಮಾಧಾನದ ರಾಜಕೀಯ ನಡೆಯ ಮೂಲಕವೇ ಸೋಲಿಸಬೇಕು. ಹಿಂದೂ ಮುಸ್ಲಿಂ ಅಮಾಯಕ ಯುವಕರ ಪ್ರತಿ ಕ್ಷಣವು ಜಾಗೃತವಾಗಿರಬೇಕಾದ ಪರಸ್ಥಿತಿಯಿದೆ. ತಂದೆ ತಾಯಂದಿರೂ ನಿಮ್ಮ ಮಕ್ಕಳು ಇಂತಹ ಹುನ್ನಾರಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸಾ ಮಾರ್ಗದಿಂದ ಮಾತ್ರ ಇಂತಹ ಟೂಲ್‌ಕಿಟ್ ಗಳನ್ನು ಧ್ವಂಸ ಮಾಡಬಹುದು

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ