ಹುಸಿ ಅಭಿವೃದ್ಧಿ, ಉಗ್ರ ಹಿಂದುತ್ವ ಹಾಗೂ ವ್ಯಕ್ತಿಪೂಜೆಯ ಪರಾಕಾಷ್ಠೆಯ ಮಿಶ್ರಣದ ಅಮಲಿನಲ್ಲಿ ದೇಶವನ್ನು ಮೈಮರೆಸಲಾಗುತ್ತಿದೆ. ಈ ಸವಾಲನ್ನು ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ತಳೆದು ಮುಖಾಮುಖಿಯಾಗುವುದು ನೇರ ದಾರಿ. ಹಿಂದುತ್ವದ ಸವಾಲನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಶಕ್ತಿಯನ್ನು ಪ್ರತಿಪಕ್ಷಗಳು ಈವರೆಗೆ ಗಳಿಸಿಕೊಂಡಿಲ್ಲ.
ರಾಜ್ಯದ ಶಾಲಾಕಾಲೇಜು ಆವರಣಗಳು ಮತ್ತು ತರಗತಿಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ವಾಪಸು ಪಡೆಯುವ ಸೂಚನೆ ಕಾಣುತ್ತಿಲ್ಲ.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 2020ರ ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯಿದೆಯನ್ನು ಜಾರಿಗೆ ತಂದಿತ್ತು . ಅನುತ್ಪಾದಕ ಮತ್ತು ಅಸ್ವಸ್ಥ ಜಾನುವಾರುಗಳ ಮಾರಾಟ–ಖರೀದಿ ಮೇಲೆ ಹೇರಿದ ಈ ನಿಷೇಧ ರೈತರನ್ನು ಮತ್ತಷ್ಟು ಆರ್ಥಿಕ ದುಸ್ಥಿತಿಗೆ ನೂಕಿತ್ತು. ಹೀಗಾಗಿ ಈ ಕಾಯಿದೆಯನ್ನು ರದ್ದುಗೊಳಿಸುವ ಇಂಗಿತವನ್ನು ಸಿದ್ದರಾಮಯ್ಯ ಸರ್ಕಾರದ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ನೀಡಿದ್ದುಂಟು. ಆದರೆ. ಕಾಂಗ್ರೆಸ್ ವರಿಷ್ಠರು ಈ ಕ್ರಮಕ್ಕೆ ತಕ್ಷಣದ ಕಡಿವಾಣ ಹಾಕಿ ತಡೆದರು. ನಿರೀಕ್ಷೆಯಂತೆ ಬಿಜೆಪಿ ಆಕ್ರಮಣಕಾರಿ ನಿಲುವು ತಳೆದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದಾಳಿಗಿಳಿಯಿತು. ರಾಜ್ಯದಲ್ಲಿ ಸಾವಿರಾರು ಗೋವುಗಳ ಹತ್ಯೆ ನಡೆಯುತ್ತಿದೆ. ಹಿಂದೂಗಳ ಭಾವನೆಯನ್ನು ನೋಯಿಸಲಾಗುತ್ತಿದೆ ಎಂದು ಹುಯಿಲೆಬ್ಬಿಸಿತು. ಯಾವುದೇ ಕಾರಣದಿಂದ ಈ ಕಾಯಿದೆ ರದ್ದಾಗಲು ಬಿಡುವುದಿಲ್ಲ ಎಂದು ಸಾರಿತು. ಕಾಯಿದೆಯನ್ನು ರದ್ದು ಮಾಡುವ ಯಾವುದೇ ಪ್ರಸ್ತಾವ ತನ್ನ ಮುಂದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿ ಹಿಂದೆ ಸರಿಯಬೇಕಾಯಿತು.
ಲೋಕಸಭಾ ಚುನಾವಣೆಗಳು ಹತ್ತಿರದಲ್ಲಿದ್ದಾಗ ಕೋಮುವಾದಿ ಕಿಚ್ಚು ಹೊತ್ತಿಸಲು ಬಿಜೆಪಿಗೆ ಅನುಕೂಲ ಮಾಡಿಕೊಡುವ ಇಂತಹ ವಿಚಾರಗಳನ್ನು ಎತ್ತಕೂಡದೆಂದು ಕಾಂಗ್ರೆಸ್ ವರಿಷ್ಠರು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದ್ದರು.
ಇದೀಗ ಇಂತಹುದೇ ಪ್ರಹಸನ ಹಿಜಾಬ್ ನಿಷೇಧ ರದ್ದು ಸಂಬಂಧದಲ್ಲಿ ಸುರುಳಿ ಬಿಚ್ಚಿದೆ. ಈ ಸಲ ಸಚಿವ ವೆಂಕಟೇಶ್ ಜಾಗದಲ್ಲಿ ಕಂಡು ಬಂದವರು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. “ಪ್ರಧಾನಿ ನರೇಂದ್ರ ಮೋದಿ ಅವರ ʼಸಬ್ ಕಾ ಸಾಥ್–ಸಬ್ ಕಾ ವಿಕಾಸ್ʼ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ತಿಳಿಸಿದ್ದೇನೆ” ಎಂದು ಆರು ದಿನಗಳ ಹಿಂದೆ ಹೇಳಿದರು. ಆದರೆ ಮರುದಿನವೇ ಈ ಹೇಳಿಕೆಯಿಂದ ಹಿಂದೆ ಸರಿದರು. ರದ್ದು ಮಾಡಿಲ್ಲವೆಂದೂ, ಈ ಸಂಗತಿ ಇನ್ನೂ ಪರಿಶೀಲನೆ ಮತ್ತು ಸಮಾಲೋಚನೆಯ ಹಂತದಲ್ಲಿದೆಯೆಂದೂ ಸ್ಪಷ್ಟೀಕರಣ ನೀಡಿದರು.
ಮುಖ್ಯಮಂತ್ರಿಯವರ ಈ ಹಿಂತೆಗೆತದ ಹಿಂದೆಯೂ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೆಲಸ ಮಾಡಿದೆಯೆನ್ನಲಾಗಿದೆ. ಈ ನಡುವೆ ಮುಸ್ಲಿಮ್ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಅವರು ನೀಡಿರುವ ಹೀನಾಯ ಹೇಳಿಕೆ ಕುರಿತು ರಾಜ್ಯ ಸರ್ಕಾರ ತಳೆದಿರುವ ಶಿಲಾಸದೃಶ ಮೌನ ಖಂಡನೀಯ. ಕಳೆದ ಮೇ ತಿಂಗಳ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ 135 ಸೀಟುಗಳನ್ನು ಗೆದ್ದು ಸರ್ಕಾರ ರಚಿಸಿತ್ತು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ಈ ಗೆಲುವು ಜನಸಾಮಾನ್ಯರ ಗೆಲುವು. ಹೊಟ್ಟೆಗೆ ಹಿಟ್ಟಿನ, ಮೈಗೆ ಬಟ್ಟೆಯ ಹಾಗೂ ತಲೆಯ ಮೇಲೆ ಸೂರಿಗಾಗಿ ಹಗಲಿರುಳು ಜಂಜಾಟ ನಡೆಸುವ ಬಡ ಜನಸಮುದಾಯಗಳ ಗೆಲುವೆನಿಸಿತ್ತು.
ಹಲಾಲ್, ಹಿಜಾಬ್, ಆಜಾನ್, ಟಿಪ್ಪು ಸುಲ್ತಾನ್, ಉರಿಗೌಡ– ಟಿಪ್ಪುವನ್ನು ಕೊಂದರು ಎನ್ನಲಾದ ಉರಿಗೌಡ– ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಸೃಷ್ಟಿ. ಜೈ ಭಜರಂಗಬಲಿ ಎಂದು ಘೋಷಣೆ ಹಾಕಿ ಮತಯಂತ್ರದ ಗುಂಡಿಯನ್ನು ಒತ್ತಿರಿ ಎಂದು ಮೋದಿಯವರು ಮತ್ತೆ ಮತ್ತೆ ಚುನಾವಣಾ ಪ್ರಚಾರಕ್ಕೆ ಭಜರಂಗಬಲಿಯನ್ನು ಎಳೆದು ತಂದ ವೈಖರಿ ಯಶಸ್ಸು ಕಾಣಲಿಲ್ಲ.
ಬಿಜೆಪಿಯ ರಾಜ್ಯ ಘಟಕ ವಿಧಾನಸಭಾ ಭಾರೀ ಸೋಲು ಮತ್ತು ಒಳಜಗಳಗಳಿಂದ ಒಡೆದ ಮನೆಯಾಗಿ ನಿತ್ರಾಣ ಸ್ಥಿತಿ ತಲುಪಿದೆ. ಆದರೂ ಹಿಂದುತ್ವದ ನೆಲೆಯಲ್ಲಿ ಅದನ್ನು ಎದುರಿಸುವ ಸೈದ್ಧಾಂತಿಕ ದಿಟ್ಟತನ ರಾಜ್ಯ ಕಾಂಗ್ರೆಸ್ಸಿಗಾಗಲಿ, ಅದರ ಕೇಂದ್ರ ನಾಯಕತ್ವಕ್ಕೇ ಆಗಲಿ ಇದ್ದಂತೆ ತೋರುತ್ತಿಲ್ಲ. ಲೋಕಸಭಾ ಚುನಾವಣೆಗಳು ಕದಬಡಿದಿರುವ ಹೊತ್ತಿನಲ್ಲಿ ಬಿಜೆಪಿಯ ಕೈಗೆ ತಾನಾಗಿಯೇ ಬಡಿಗೆಯನ್ನು ನೀಡಿದಂತಾದೀತು ಎಂಬ ಅಳುಕು ಕಾಡಿರುವಂತಿದೆ.
ಹಿಜಾಬ್ ನಿಷೇಧ ವಿವಾದ ಸುಪ್ರೀಮ್ ಕೋರ್ಟಿನ ವಿಭಾಗೀಯ ಪೀಠದ ಮುಂದೆ ವಿಚಾರಣೆಗಿದೆ. ಈ ಹಂತದಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಬೇಕೇ ಬೇಡವೇ ಎಂಬ ಕುರಿತು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ವರಿಷ್ಠರು ಮುಂದಾಗಿಯೇ ಸಮಾಲೋಚಿಸಬೇಕಿತ್ತು.
ಹಿಂದುತ್ವ ಮತ್ತು ಹಿಂದೂ ಧರ್ಮ ಬೇರೆಯೇ ಆದ ಪರಿಕಲ್ಪನೆಗಳು. ಹಿಂದೂಧರ್ಮಕ್ಕೆ ಸರ್ವಶ್ರೇಷ್ಠತೆ, ಸಾರ್ವಭೌಮತೆ, ಮುಸ್ಲಿಮ್ ದ್ವೇಷವನ್ನು ತುರುಕಿ ತುಂಬಿಸಿ, ಸಾಮರಸ್ಯ, ಸಹಬಾಳ್ವೆ, ಬಹುತ್ವದ ಗುಣಗಳನ್ನು ಅಳಿಸಿ ಹಿಂದುತ್ವದ ಉಗ್ರ ಮತ್ತು ಆಕ್ರಮಣಕಾರಿ ರಾಷ್ಟ್ರೀಯತೆಯನ್ನಾಗಿ ಕಟೆದು ನಿಲ್ಲಿಸಿದೆ ಬಿಜೆಪಿ. ಸೈರಣೆ ಬಹುತ್ವ ಸಾಮರಸ್ಯ ಸಹಬಾಳ್ವೆಯ ಮೌಲ್ಯಗಳನ್ನು ದೇಶದ್ರೋಹಿ ಎಂದು ಬಿಂಬಿಸುವಲ್ಲಿ, ಅಮಾಯಕ ಜನಸಮೂಹಗಳನ್ನು ನಂಬಿಸುವಲ್ಲಿ ಸಾಕಷ್ಟು ಯಶಸ್ಸು ಗಳಿಸಿದೆ.
ಸುಮಾರು 200 ವರ್ಷಗಳ ಮೊಘಲ್ ಮತ್ತು 90 ವರ್ಷಗಳ ಬ್ರಿಟಿಷ್ ಆಳ್ವಿಕೆಯಲ್ಲಿ ಹಿಂದೂ ಧರ್ಮ ಅಪಾಯಕ್ಕೆ ಸಿಲುಕಿರಲಿಲ್ಲ. ಸ್ವತಂತ್ರ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ 12-13 ವರ್ಷಗಳಿಂದ ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಡಂಗುರ ಸಾರಲಾಗುತ್ತಿದೆ. ಹುಸಿ ಅಭಿವೃದ್ಧಿ, ಉಗ್ರಹಿಂದುತ್ವ ಹಾಗೂ ವ್ಯಕ್ತಿಪೂಜೆಯ ಪರಾಕಾಷ್ಠೆಯ ಮಿಶ್ರಣದ ಅಮಲಿನಲ್ಲಿ ದೇಶವನ್ನು ಮೈಮರೆಸಲಾಗುತ್ತಿದೆ. ಈ ಸವಾಲನ್ನು ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ತಳೆದು ಮುಖಾಮುಖಿಯಾಗುವುದು ನೇರ ದಾರಿ. ಹಿಂದುತ್ವದ ಸವಾಲನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಶಕ್ತಿಯನ್ನು ಪ್ರತಿಪಕ್ಷಗಳು ಈವರೆಗೆ ಗಳಿಸಿಕೊಂಡಿಲ್ಲ. ಎದುರಿಸುವ ದಾರಿಯನ್ನು ಕಂಡುಕೊಂಡಿಲ್ಲ. ಈ ವಿಚಾರಕ್ಕೆ ಬಂದರೆ ಬಿಜೆಪಿ ಮತ್ತು ಅದರ ಅಂಗ ಸಂಘಟನೆಗಳನ್ನು ಸೋಲಿಸುವುದು ಅಸಾಧ್ಯ ಎಂದೇ ಹಿಂಜರಿದಿವೆ. ಈ ಹಿಂಜರಿಕೆ ಸದ್ಯಕ್ಕೆ ಒಂದು ಬಗೆಯ ವ್ಯೂಹತಂತ್ರ ಅಥವಾ ರಣನೀತಿಯೇ ಇದ್ದೀತು. ಆದರೆ ಈ ರಣನೀತಿಯನ್ನೇ ಸದಾಕಾಲಕ್ಕೂ ಅನುಸರಿಸಿ ಬೆನ್ನು ತೋರಿಸುವುದು ಆತ್ಮಹತ್ಯೆಯಾಗಿ ಪರಿಣಮಿಸೀತು.
