ಸುರತ್ಕಲ್ ಕಾನಾ ಕಟ್ಲ ಸರ್ಕಾರಿ ಶಾಲೆಯ ಭೂಮಿ ಖಾಸಗಿಯವರಿಂದ ಅತಿಕ್ರಮಣವಾಗಲು ಕ್ಷೇತ್ರದ ಶಾಸಕರ ವೈಫಲ್ಯವೇ ಕಾರಣ ಎಂದು ಮಾಜಿ ಶಾಸಕ ಬಿ.ಎ. ಮೊಯಿದಿನ್ ಬಾವ ಆರೋಪಿಸಿದ್ದಾರೆ.
ಸುರತ್ಕಲ್ ಕಾನ-ಕಟ್ಲ ಜನತಾಕಾಲನಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಯ ಮೈದಾನ ವಿವಾದಕ್ಕೆ ಕಾರಣರಾದ ಎಲ್ಲಾ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಆಗ್ರಹಿಸಿ ಸುರತ್ಕಲ್ ನಾಡ ಕಚೇರಿ ಚಲೋ ಹೋರಾಟ ನಡೆಸುತ್ತಿದ್ದು, ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಇಲ್ಲಿನ ಶಾಸಕರಿಗೆ ಬಡವರ ಮಕ್ಕಳು ಕಲಿಯುವ ಸರ್ಕಾರಿ ಶಾಲೆಯನ್ನು ಉಳಿಸುವ ಬಗ್ಗೆ ಕಾಳಜಿ ಇಲ್ಲ. ಶಾಲೆಯ ಸ್ವಾಧೀನ ಇರುವ ಜಾಗದಲ್ಲಿ ಅಕ್ರಮ ಮನೆಗಳು ನಿರ್ಮಾಣಗೊಳ್ಳುತ್ತಿದೆ. ಶಾಸಕರು ಮೌನವಾಗಿರುವುದು ಶಾಸಕರ ಶಾಮೀಲಾತಿಯಲ್ಲಿ ಭೂ ಅತಿಕ್ರಮಣ ನಡೆದಿರುವ ಬಗ್ಗೆ ಸಂದೇಹ ಮೂಡುತ್ತಿದೆ ಎಂದು ಆರೋಪಿಸಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರುಗೊಂಡು ನಿರ್ಮಾಣಗೊಳ್ಳುತ್ತಿರುವ 800 ಆಶ್ರಯ ಮನೆಗಳಿಗೆ ಬಡವರಿಗಾಗಿ ಈ ಸರ್ಕಾರಿ ಶಾಲೆಯನ್ನು ಜಿಲ್ಲಾಡಳಿತ ಉಳಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಹೋರಾಟ ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್ ಮಾತನಾಡಿ ಶಾಲೆಯ ಭೂ ವಿವಾದದಲ್ಲಿ ಅನೇಕ ಅಧಿಕಾರಿಗಳ ಕೈವಾಡ ಇದೆ, ಭೂ ಮಾಪಕನೊಬ್ಬನನ್ನು ಅಮಾನತು ಮಾಡಿ ಜಿಲ್ಲಾಡಳಿತ ಹೋರಾಟದ ಬಿಸಿಯನ್ನು ತಣಿಸಲು ನೋಡುತ್ತಿದೆ. ಸುರತ್ಕಲ್ ನಾಡ ಕಚೇರಿ ಭ್ರಷ್ಟಾಚಾರದ ಕೇಂದ್ರವಾಗಿದೆ ಸಾರ್ವಜನಿಕರು ಲಂಚ ನೀಡದೆ ಯಾವುದೇ ಕೆಲಸಗಲಾಗುವುದಿಲ್ಲ. ಇಲ್ಲಿ ನಿವೃತ್ತರಾದ ಅಧಿಕಾರಿಗಳು ಕಚೇರಿಯಲ್ಲೇ ಟಿಕಾಣಿ ಹೂಡಿ ಜನರನ್ನು ದೋಚುತ್ತಿದ್ದಾರೆ ಎಂದು ಅವರು ಆಪಾದಿಸಿದ ಅವರು, ಸರ್ಕಾರಿ ಶಾಲೆಯ ಉಳಿಸುವ ಹೋರಾಟವನ್ನು ಬಹಳ ಬದ್ಧತೆಯಿಂದ ಮುಂದುವರಿಸುತ್ತೇವೆ ಎಂದರು.
ಪ್ರತಿಭಟನೆಗೆ ಮುನ್ನ ಸುರತ್ಕಲ್ ಮೆಸ್ಕಾಂ ಕಚೇರಿ ಬಳಿಯಿಂದ ನಾಡ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಶಾಲೆ ಉಳಿಸಲು ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಆರಂಭ ಆಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಲು ಬಾರದೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದರಿಂದ, ಮನವಿ ಸ್ವೀಕರಿಸಲು ಬಂದ ಉಪ ತಹಸೀಲ್ದಾರ್ ಅವರನ್ನು ವಾಪಸ್ ಕಳಿಸಿದರು. ನಂತರ ಮಂಗಳೂರು ತಹಸೀಲ್ದಾರ್ ಬಂದು ಮನವಿ ಸ್ವೀಕರಿಸಿ ಶಾಲೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.
ನಗರಪಾಲಿಕೆ ಮಾಜಿ ಸದಸ್ಯ ದಯಾನಂದ ಶೆಟ್ಟಿ, ಹರೀಶ್ ಕೆ. ಸುರತ್ಕಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಹೋರಾಟ ಸಮಿತಿಯ ಪ್ರಮುಖರಾದ ಹಮ್ಮಬ್ಬ, ವಾರಿಜ ಸಾಲ್ಯಾನ್ ಮಾತನಾಡಿದರು. ಎಸ್ ಡಿಎಂಸಿ ಅಧ್ಯಕ್ಷರು ಕೈರುನ್ನಿಸ, ಜೋಕಟ್ಟೆ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ, ಡಿವೈಎಫ್ಐ ಮುಖಂಡರಾದ ಬಿ.ಕೆ. ಮಕ್ಸೂದ್, ಶ್ರೀನಾಥ್ ಕುಲಾಲ್, ಶೈಫರ್ ಆಲಿ, ರಿಜ್ವಾನ್ ಹರೇಕಳ, ಮುವಾಜ್, ಕಾಂಗ್ರೆಸ್ ಮುಖಂಡರಾದ ಹಾರಿಸ್ ಬೈಕಂಪಾಡಿ, ಹೋರಾಟ ಸಮಿತಿಯ ಪ್ರಮುಖರಾದ ಉಮರ್ ಫಾರೂಕ್, ಶರೀಫ್ ಜನತಾಕಾಲನಿ, ಶಬನ, ಸಿಸಿಲಿಯ ಡಿಸೋಜಾ, ಯಶೋಧ, ಅಸ್ಕಾಫ್, ಅಶ್ರಫ್, ಆಸೀಫ್ ದಯಾನಂದ ಶೆಟ್ಟಿ ಜನತಾಕಾಲನಿ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಷೀರ್ ಕಾನ, ರಶೀದ್ ಮುಕ್ಕ, ಹನೀಫ್ ಇಡ್ಯಾ, ಐ. ಮೊಹಮ್ಮದ್, ಸಾದಿಕ್ ಕಿಲ್ಪಾಡಿ, ಭಾರತಿ, ಕ್ರಿಸ್ತಿನ ಡಿಸೋಜಾ, ಮುಂತಾದವರು ಉಪಸ್ಥಿತರಿದ್ದರು.