ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡುತ್ತಿರುವ ಆರೋಪಗಳೆಲ್ಲವೂ ಸತ್ಯ. ಹಾಗಾಗಿಯೇ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೆದರಿಕೊಂಡಿದೆ ಎಂದು ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ತಮ್ಮ ಪಕ್ಷದ ಪ್ರಮುಖ ನಾಯಕರ ವಿರುದ್ಧವೇ ಗಂಭೀರ ಆರೋಪ ಮಾಡಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಶ್ರೀ ಬಸವನಗೌಡ ಯತ್ನಾಳ್ ಅವರು ಕಳೆದ ಐದೂವರೆ ವರ್ಷಗಳಿಂದಲೂ ತಮ್ಮದೇ ನಾಯಕರ ವಿರುದ್ಧ ಒಂದಾದ ಮೇಲೆ ಒಂದರೊಂತೆ ಆರೋಪಗಳನ್ನು ಮಾಡುತ್ತಿದ್ಧಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗದಷ್ಟು @BJP4Karnataka ದುರ್ಬಲವಾಗಿದೆ! ಯತ್ನಾಳ್ ಆರೋಪಗಳು ಸತ್ಯವಾಗಿರಬೇಕು ಹೀಗಾಗಿಯೇ ಕ್ರಮ ಜರುಗಿಸಲು ಹೆದರುತ್ತಿದ್ದಾರೆ! ತಮ್ಮ ದೌರ್ಬಲ್ಯಗಳನ್ನು… pic.twitter.com/nnAF5ig6x8
— M B Patil (@MBPatil) December 29, 2023
ಯತ್ನಾಳ್ ಅವರು ಕಾಂಗ್ರೆಸ್ ಸರ್ಕಾರದೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಆರೋಪ ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಹೇಳಿಕೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್, ಯತ್ನಾಳ್ ಅವರು ನಮ್ಮ ಸರ್ಕಾರದೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ. ಕಾಂಗ್ರೆಸ್‌ಗೂ ಯತ್ನಾಳ್‌ಗೂ ಸಂಬಂಧವಿಲ್ಲ. ಆದರೆ ಕಳೆದ ಐದೂವರೆ ವರ್ಷಗಳಿಂದ ಯತ್ನಾಳ್ ಅವರು ಒಂದೊಂದೇ ಮಾತಿನ ಬಾಂಬ್ ಹಾಕುತ್ತಲೇ ಇದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಬಿಜೆಪಿಯವರಿಗೆ ಧೈರ್ಯವಿಲ್ಲ. ಯಾಕೆಂದರೆ ಯತ್ನಾಳ್ ಹೇಳಿದ್ದೆಲ್ಲವೂ ಸತ್ಯ. ಹಾಗಾಗಿ ಕ್ರಮ ಕೈಗೊಳ್ಳಲು ಬಿಜೆಪಿ ಹೆದರುತ್ತಿದೆ ಎಂದು ತಿಳಿಸಿದರು.
“ನಿನ್ನೆ ಕೂಡ ಬಿಜೆಪಿಯವರು ಕೋರ್ ಕಮಿಟಿ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ಬಿಜೆಪಿಯ ದೌರ್ಬಲ್ಯ. ಯತ್ನಾಳ್ ಅವರು ಬಿಜೆಪಿಯೊಳಗಡೆ ನಡೆಯುತ್ತಿರುವ ಬೆಳವಣಿಗೆಗಳನ್ನು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅವರು ಮಾಡಿದ ಆರೋಪಗಳೆಲ್ಲವೂ ಸತ್ಯವಿರಬಹುದು. ಹಾಗಾಗಿಯೇ ಬಿಜೆಪಿಯವರು ಹೆದರಿಕೊಂಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಅವರ ವಿರುದ್ಧ ಬಿಜೆಪಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಂ ಬಿ ಪಾಟೀಲ್ ಪ್ರಶ್ನಿಸಿದ್ದಾರೆ.
“ಬಿಜೆಪಿಯವರ ದೌರ್ಬಲ್ಯವೆಲ್ಲವೂ ಯತ್ನಾಳ್ ಅವರ ಬಳಿಯಲ್ಲಿರಬಹುದು. ಅದು ನನಗೆ ಗೊತ್ತಿಲ್ಲ. ಯತ್ನಾಳ್ ಅವರು ಕಾಂಗ್ರೆಸ್ ಏಜೆಂಟ್ ಅಲ್ಲ. ಒಂದು ವೇಳೆ ಆಗಿದ್ದಿದ್ದರೆ ಅದಕ್ಕೂ ಕ್ರಮ ಕೈಗೊಳ್ಳಬಹುದಲ್ಲವೇ? ಕಾಂಗ್ರೆಸ್‌ಗೂ ಯತ್ನಾಳ್‌ಗೂ ಯಾವುದೇ ಸಂಬಂಧವಿಲ್ಲ” ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
“ಕೋವಿಡ್ ಸಂದರ್ಭದಲ್ಲಿ ನಡೆದ ಹಗರಣಗಳ ಬಗ್ಗೆ ಈಗಾಗಲೇ ಸರ್ಕಾರ ತನಿಖೆ ನಡೆಸಲು ಆದೇಶಿಸಿದೆ. ನಮ್ಮ ಸರ್ಕಾರ ಸುಮ್ಮನೆ ಕೂತಿಲ್ಲ. ಬಿಜೆಪಿಯ ಅವಧಿಯಲ್ಲಿ ಏನೇನೆಲ್ಲ ಹಗರಣಗಳು ಆಗಿದ್ದವೋ ಅವೆಲ್ಲವನ್ನೂ ಕಾಂಗ್ರೆಸ್ ಸರ್ಕಾರ ಬಯಲಿಗೆಳೆಯಲಿದೆ. ತನಿಖೆಯಲ್ಲಿ ಎಲ್ಲವೂ ಸತ್ಯಾಂಶ ತಿಳಿದುಬರಲಿದೆ” ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
“ಹೆಚ್ಚುವರಿ ಡಿಸಿಎಂ ಹುದ್ದೆಗಳ ಬಗ್ಗೆ ಬಹಿರಂಗವಾಗಿ ಏನೂ ಹೇಳುವುದಿಲ್ಲ. ಹೈಕಮಾಂಡ್ ಮುಂದೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಕೂಡ ಅಭಿಪ್ರಾಯ ಹೇಳುತ್ತೇವೆ” ಎಂದು ಇದೇ ವೇಳೆ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.