ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳ ಕಳಪೆ ಸ್ಥಿತಿಯಿಂದ ಹಲವಾರು ಅಪಘಾತಗಳಾಗುತ್ತಿವೆ. ಅವುಗಳನ್ನು ತಪ್ಪಿಸಲು ಪ್ರಾದೇಶಿಕ ಸಾರಿಗೆ ಕಚೇರಿಯಿಂದ (ಆರ್‌ಟಿಒ) ಪ್ರತಿ ವರ್ಷ ‘ಫಿಟ್‌ನೆಸ್ ಪ್ರಮಾಣಪತ್ರ’ವನ್ನು (ಎಫ್‌ಸಿ) ಪಡೆಯಬೇಕು ಎಂದು ಕೆಎಸ್‌ಆರ್‌ಟಿಸಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಫ್‌ಸಿಯನ್ನು ಕಡ್ಡಾಯವಾಗಿ ಪಡೆಯಬೇಕು. “ರಸ್ತೆಯಲ್ಲಿ ಚಲಿಸಲು ಬಸ್‌ಗಳ ಫಿಟ್‌ನೆಸ್‌ಅನ್ನು ಪರಿಶೀಲಿಸುವಲ್ಲಿ ಮತ್ತು ಪ್ರಮಾಣೀಕರಿಸುವಲ್ಲಿ ಆರ್‌ಟಿಒ ಅಧಿಕಾರಿಗಳು ಯಾವುದೇ ಸಾಂದರ್ಭಿಕ ವಿಧಾನವನ್ನು ಹೊಂದಿರಬಾರದು” ಎಂದೂ ಹೈಕೋರ್ಟ್ ಹೇಳಿದೆ.
2006ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಇಬ್ಬರು ವಿದ್ಯಾರ್ಥಿಗಳ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಅಪಘಾತಕ್ಕೆ ಕಾರಣವಾದ ಕೆಎಸ್‌ಆರ್‌ಟಿಸಿ ಚಾಲಕ ಸತೀಶ್ ಅವರ ಶಿಕ್ಷೆಯನ್ನು ಒಂದು ವರ್ಷದಿಂದ ಆರು ತಿಂಗಳಿಗೆ ಇಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಅವರು ಕೆಎಸ್‌ಆರ್‌ಟಿಸಿಗೆ ಹಲವು ನಿರ್ದೇಶನಗಳನ್ನು ಹೊರಡಿಸಿದ್ದಾರೆ.
‘ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾದ’ ಬಸ್‌ಗಳ ಫಿಟ್‌ನೆಸ್ ಬಗ್ಗೆ ಪ್ರಮಾಣೀಕರಿಸುವಂತೆ ಕೆಎಸ್‌ಆರ್‌ಟಿಸಿಯ ಮೆಕ್ಯಾನಿಕಲ್ ವಿಭಾಗಕ್ಕೆ ನ್ಯಾಯಾಲಯ ಸೂಚಿಸಿದೆ. ನಿಯತಕಾಲಿಕವಾಗಿ ಯಾಂತ್ರಿಕ ಪರೀಕ್ಷೆ ಮತ್ತು ಬಸ್‌ಗಳ ದುರಸ್ತಿಯ ಅಗತ್ಯವಿರುತ್ತದೆ. ಪ್ರಮಾಣಪತ್ರವನ್ನು ನೀಡಿದ ನಂತರವೇ ಅಂತಹ ಬಸ್‌ಗಳನ್ನು ಓಡಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಕೆಎಸ್‌ಆರ್‌ಟಿಸಿ ರೂಪಿಸಿರುವ ನಿಯಮಗಳ ಪ್ರಕಾರ, ನಿರ್ದಿಷ್ಟ ಕಿಮೀ ಸಂಚಾರವನ್ನು ಪೂರ್ಣಗೊಳಿಸಿದ ನಂತರ ಅಂತಹ ಬಸ್‌ಗಳನ್ನು ಬಳಸಬಾರದು. ಅಂತಹ ಸ್ಕ್ರ್ಯಾಪ್ ಬಸ್‌ಗಳನ್ನು ಯಾವುದೇ ನಿಗದಿತ ಮಾರ್ಗಗಳಿಗೆ ಬಳಸಲು ಅನುಮತಿ ನೀಡಬಾರದು ಎಂದು ಹೈಕೋರ್ಟ್ ಹೇಳಿದೆ.
ಟ್ರಾಫಿಕ್ ಕಂಟ್ರೋಲರ್ ಚಾಲಕರನ್ನು ಫಿಟ್ ಇಲ್ಲದ ಬಸ್‌ಗಳನ್ನು ಬಳಸಲು ಒತ್ತಾಯಿಸುತ್ತಾರೆ ಎಂದು ಆರೋಪಿ ಚಾಲಕ ಹೇಳಿಕೆ ನೀಡಿದ್ದರು. ಅವರು ಹೇಳಿಕೆಯ ಮೇರೆಗೆ ಈ ನಿರ್ದೇಶನಗಳನ್ನು ನೀಡಲಾಗಿದೆ. ಆರೋಪಿ ಚಲಾಯಿಸುತ್ತಿದ್ದ ಬಸ್ ಈಗಾಗಲೇ 10 ಲಕ್ಷ ಕಿ.ಮೀ.ಗೂ ಹೆಚ್ಚು ಓಡಿದೆ ಮತ್ತು ಅದರಲ್ಲಿ ಇಗ್ನಿಷನ್ ಸ್ಟಾರ್ಟರ್, ಹಾರ್ನ್ ಮತ್ತು ಬ್ರೇಕ್ ಇರಲಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ. ದಾಖಲೆಗಳ ಪ್ರಕಾರ ಆ ಬಸ್ಸಿನ ಸ್ಥಿತಿ ಆತಂಕಕಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.