ಉತ್ತರ ಪ್ರದೇಶ ಶಮ್ಲಿ ಜಿಲ್ಲೆಯ ಬಿಜೆಪಿಯ ಪುರಸಬಾ ಸದಸ್ಯರು ಕುಸ್ತಿ ಪಂದ್ಯವನ್ನೇ ಮೀರಿಸುವಂತೆ ಒಬ್ಬರಿಗೊಬ್ಬರು ಗುಂಪಿನಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಪುರಸಭಾ ಸದಸ್ಯರ ಜಗಳದಲ್ಲಿ ಗುದ್ದಾಟ, ಒದೆಯುವುದು, ಕುರ್ಚಿಗಳನ್ನು ಎಸೆಯುವುದು ಎಲ್ಲವೂ ನಡೆಯಿತು. ಒಬ್ಬ ಸದಸ್ಯನಂತೂ ಕುರ್ಚಿ ಮೇಲೆ ಹತ್ತಿಕೊಂಡು ಹೋಗಿ ನೆಗೆದಿದ್ದಾನೆ.
ಮಂಡಳಿಯ ಸಭೆ ನಡೆಯುತ್ತಿರುವಾಗ ಪುರಸಭೆ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿಯೇ ಇವೆಲ್ಲ ಆಘಾತಕಾರಿ ಘಟನೆ ನಡೆದಿದೆ.
ಕಾದಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ವಿಪಕ್ಷಗಳ ಟೀಕೆಗೆ ಅಸ್ತ್ರವಾಗಿದೆ. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಘಟನೆಯ ಕುರಿತು ನೇರವಾಗಿ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?
“ಹೊಡೆದಾಟವು ಪುರಸಭೆ ಸದಸ್ಯರ ಸಮಸ್ಯೆಗಳ ಬಗ್ಗೆ ಮಾತ್ರ ಒಳಗೊಳ್ಳದೆ ಬಿಜೆಪಿಯಲ್ಲಿನ ಉದ್ವಿಗ್ನತೆ ಹಾಗೂ ವೈಮನಸ್ಸನ್ನು ಎತ್ತಿ ತೋರಿಸಿದೆ. ಅಭಿವೃದ್ಧಿ ಕಾಮಗಾರಿಗಳು ನಡೆಯದಿದ್ದರೆ ಪರಿಶೀಲನಾ ಸಭೆಯಲ್ಲಿ ಇನ್ನೇನು ನಡೆಯುತ್ತಿತ್ತು. ಅದಕ್ಕಾಗಿಯೇ ಶಮ್ಲಿಯಲ್ಲಿ ಪುರಸಭೆ ಸದಸ್ಯರ ನಡುವೆ ಹೊಡೆದಾಟ ನಡೆದಿದೆ. ಇದು ಬಿಜೆಪಿ ಆಡಳಿತದ ಪಾಠವಾಗಿದ್ದು, ನಿಮ್ಮ ಸ್ವಂತ ಭದ್ರತೆಯನ್ನು ಏರ್ಪಡಿಸಿಕೊಂಡ ನಂತರ ಪುರಸಭೆಯ ಪರಿಶೀಲನಾ ಸಭೆಗೆ ಹಾಜರಾಗಿ” ಎಂದು ಅಖಿಲೇಶ್ ಯಾದವ್ ಬರೆದಿದ್ದಾರೆ.
ವರದಿಗಳ ಪ್ರಕಾರ ಪುರಸಭೆಯಲ್ಲಿ 4 ಕೋಟಿ ಅಭಿವೃದ್ಧಿ ಯೋಜನಾ ಕಾಮಗಾರಿಗಳ ಬಗ್ಗೆ ಪರಿಶೀಲನಾ ಸಭೆ ನಡೆಯುತ್ತಿತ್ತು. ಭ್ರಷ್ಟಆಚಾರ ಆರೋಪದ ಕಾರಣಕ್ಕಾಗಿ ಸದಸ್ಯರು ಕಿತ್ತಾಡಿದ್ದಾರೆ ಎನ್ನಲಾಗಿದೆ.