ಚಿತ್ರದುರ್ಗದ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿವೆ. ಇದೀಗ, ಅದೇ ಮನೆಯಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದೆ. ಮನೆಯ ಮಾಲೀಕ ಜಗನ್ನಾಥರೆಡ್ಡಿ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮನೆಯಲ್ಲಿ ಸಿಕ್ಕ ಡೆತ್‌ನೋಟ್‌ಅನ್ನು ಪೊಲೀಸು ವಶಕ್ಕೆ ಪಡೆದುಕೊಂಡಿದ್ದಾರೆ. ಜಗನ್ನಾಥರೆಡ್ಡಿ ಅವರ ಪುತ್ರ ನರೇಂದ್ರರೆಡ್ಡಿ ದರೋಡೆಯಲ್ಲಿ ಭಾಗಿಯಾಗಿ, ಜೈಲು ಸೇರಿದ್ದ. ಇದರಿಂದ ಮನನೊಂದು ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ನರೇಂದ್ರರೆಡ್ಡಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ. 2013ರಲ್ಲಿ ಬಿಡದಿ ಬಳಿ ವಾಹನವೊಂದನ್ನು ತಡೆದು ದರೋಡೆ ಮಾಡಿದ್ದ ಪ್ರಕರಣದಲ್ಲಿ ಆತನೂ ಭಾಗಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಕಲವು ದಿನ ಆತ ಜೈಲಿನಲ್ಲಿದ್ದ ಎಂದು ತಿಳಿದುಬಂದಿದೆ.
ಆತ ಜೈಲಿಗೆ ಹೋಗಿದ್ದರಿಂದ ಮನವೊಂದಿದ್ದ ಕುಟುಂಬ 2019ರಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಅಸ್ಥಿಪಂಜರಗಳು ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ ಹಾಗೂ ನರೇಂದ್ರರೆಡ್ಡಿ ಅವರದ್ದೇ ಆಗಿರಬಹುದು ಎಂದು ಅವರ ಸಂಬಂಧಿ ಪವನ್ ಕುಮಾರ್ ತಿಳಿಸಿದ್ದಾರೆ.
“ಜಗನ್ನಾಥರೆಡ್ಡಿ ಹಲವು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಕೆಲ ವರ್ಷಗಳಿಂದ ಅವರ ಕುಟುಂಬ ಕಾಣಿಸಿರಲಿಲ್ಲ. ಅವರ ಮನೆಯಲ್ಲಿ ಪತ್ತೆಯಾಗಿರುವ ಅಸ್ಥಿಪಂಜರಗಳು ಅವರದ್ದೇ ಇರಬಹುದು. ವರ್ಷಗಳ ಹಿಂದೆಯೇ ಅವರು ಮೃತಪಟ್ಟಿರುವ ಸಾಧ್ಯತೆಗಳಿವೆ” ಎಂದು ಪವನ್ ಕುಮಾರ್ ಹೇಳಿದ್ದಾರೆ.