ರಾಜ್ಯಗಳು ಉದಯವಾಗಿರುವುದೇ ಭಾಷೆಯ ಆಧಾರದ ಮೇಲೆ. ಕನ್ನಡ ಕಡ್ಡಾಯ ಎನ್ನುವ ಕಾನೂನು ಇದ್ದರೂ ಪಾಲಿಸದೇ ಇದ್ದಾಗ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರು. ಅದನ್ನು ಎತ್ತಿ ತೋರಿಸಿದ್ದಕ್ಕೆ ಕನ್ನಡ ಪರ ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿನ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎಂಬ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಹಾಗೂ ಕರ್ನಾಟಕ ಜಲಸಂರಕ್ಷಣಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರವು ಅಕ್ರಮವಾಗಿ ಬಂಧಿಸಿರುವ ಕನ್ನಡಪರ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಕನ್ನಡಪರ ಹೋರಾಟಗಾರರ ಮೇಲೆ ದಾಖಲಿಸಿರುವ ಎಲ್ಲ ಕೇಸ್‌ಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ಡಾ. ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮುಖ್ಯಮಂತ್ರಿ ಚಂದ್ರು, “ಕನ್ನಡ ಪರ ಹೋರಾಟಗಾರರು ಯಾರ ಮೇಲಾದ್ರೂ ಹಲ್ಲೆ ಮಾಡಿದ್ದಾರಾ? ಕಾನೂನಿಗೆ ವಿರುದ್ಧವಾಗಿ ಹಾಕಿರುವ ನಾಮಫಲಕ ಕಿತ್ತುಹಾಕಿದ್ದಾರೆ. ನಿಯಮ ಪಾಲನೆಯಾಗಿಲ್ಲ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ ಅಷ್ಟಕ್ಕೆ ಅವರನ್ನು ಬಂಧಿಸಲಾಗಿದೆ. ಕೋಟಿ ಕೋಟಿ ಲೂಟಿ ಮಾಡಿದವರು, ಭ್ರಷ್ಟಾಚಾರ ಮಾಡಿದವರನ್ನು ಸುಮ್ಮನೆ ಬಿಡುವ ಸರ್ಕಾರ, ನಾಡು ನುಡಿಗಾಗಿ ಧ್ವನಿ ಎತ್ತಿದವರನ್ನು ಬಂಧಿಸುತ್ತಿದೆ. ಈ ಮೂಲಕ ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ” ಎಂದರು.
“ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕು ಎನ್ನುವ ನಿಯಮ ಇದ್ದರೂ ಯಾಕೆ ಪಾಲನೆಯಾಗುತ್ತಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಹೋರಾಟ ಮಾಡುವ ಮುನ್ನವೇ ಎಚ್ಚೆತ್ತು ಕನ್ನಡ ನಾಮಫಲಕ ಹಾಕದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಪ್ರತಿಭಟನೆ ಯಾಕೆ ನಡೆಯುತ್ತಿತ್ತು” ಎಂದು ಪ್ರಶ್ನಿಸಿದರು.
“ಕಾನೂನು ಪಾಲನೆಯಾಗಿಲ್ಲ ಅಂದಾಗ ಬಿಬಿಎಂಪಿ ಅಧಿಕಾರಿಗಳು ಆ ನಾಮಫಲಕಗಳನ್ನು ತೆರವು ಮಾಡಬೇಕಿತ್ತು. ಅವರ ನಿರ್ಲಕ್ಷ್ಯ ಇದಕ್ಕೆಲ್ಲ ಕಾರಣ. ಹೋರಾಟ ಮಾಡುವವರೆಗೂ ಸುಮ್ಮನೆ ಇದ್ದು, ಈಗ ಫೆಬ್ರುವರಿ 28ರವರೆಗೆ ಗಡುವು ನೀಡಲಾಗಿದೆ. ರಾಜ್ಯದಾದ್ಯಂತ ಎಲ್ಲ ಕಡೆ ನಾಮಫಲಕಗಳಲ್ಲಿ ನಿಯಮದಂತೆ ಕನ್ನಡ ಕಡ್ಡಾಯ ಆಗಬೇಕು” ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, “ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಎಂ.ಬಿ.ಪಾಟೀಲ್ ಅವರು ಯಾರ ಪರವಾಗಿ ಇದ್ದೀರಾ? ನಾಡದ್ರೋಹಿಗಳು, ಶ್ರೀಮಂತರು, ನೆಲದ ಕಾನೂನು ಪಾಲಿಸದವರ ಪರವಾಗಿ ನಿಲ್ಲಬೇಡಿ. ಹೀಗೆ, ಮಾಡಿದ್ರೆ ಬಂಡವಾಳ ಹೂಡಲ್ಲ ಅನ್ನುವ ಸಬೂಬು ಹೇಳುವುದು ಬಿಡಿ. ನಿಮಗೆ ಕಿಕ್ ಬ್ಯಾಕ್ ಬರುತ್ತೆ ಎಂದು ರಾಜ್ಯವನ್ನು ಬಲಿ ಕೊಡಬೇಡಿ. ಭಾಷೆಗೆ ಧಕ್ಕೆ ತರಬೇಡಿ” ಎಂದು ಎಚ್ಚರಿಕೆ ನೀಡಿದರು.
“ಕನ್ನಡ, ಕನ್ನಡಿಗರು, ಕರ್ನಾಟಕ ಹಾಳಾಗಿ ಹೋದರೂ ಚಿಂತೆಯಿಲ್ಲ ನನಗೆ ಬರಬೇಕಾದ ಕಿಕ್ ಬ್ಯಾಕ್ ಬರಲಿ ಎನ್ನುವಂತೆ ಸಚಿವ ಎಂಬಿ ಪಾಟೀಲ್ ಮಾತನಾಡಿದ್ದಾರೆ. ಇಂತಹ ಸರ್ಕಾರ ನಮಗೆ ಬೇಕಾ” ಎಂದು ಅವರು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಹೊಸ ವರ್ಷದ ಸಂಭ್ರಮ | ತಡರಾತ್ರಿ 2:15 ರವರೆಗೂ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
“ರಾಜ್ಯದಾದ್ಯಂತ ಹೋರಾಟವನ್ನು ವಿಸ್ತರಿಸಲಾಗುವುದು. ಕಾನೂನು ಪ್ರಕಾರವೇ ನಮ್ಮ ಹೋರಾಟ ನಡೆಯಲಿದೆ. ನಾಮಫಲಕ ಮಾತ್ರವೇ ಅಲ್ಲ, ಕನ್ನಡಿಗರಿಗೆ ಉದ್ಯೋಗ ಬೇಕು. ಶಿಕ್ಷಣದಲ್ಲಿ ಕನ್ನಡ ಬೇಕು, ಕರ್ನಾಟಕದಲ್ಲಿ ಕನ್ನಡಕ್ಕೆ ಸಿಗಬೇಕಾದ ಆದ್ಯತೆ ಸಿಗಬೇಕು ಅಲ್ಲಿವರೆಗೂ ಹೋರಾಟ ಮುಂದುವರೆಯಲಿದೆ” ಎಂದು ಮೋಹನ್ ದಾಸರಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಡಾ. ರಮೇಶ್ ಬೆಲ್ಲಂಕೊಂಡ, ಜಗದೀಶ್ ವಿ ಸದಂ, ಜಗದೀಶ್ ಚಂದ್ರ, ಸುಷ್ಮಾ ವೀರ, ಅಶೋಕ್ ಮೃತ್ಯುಂಜಯ, ಜಗದೀಶ್ ಬಾಬು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.