ಈ ಪುಸ್ತಕದ ಓದು ಮುಗಿಯುವಂಥದ್ದಲ್ಲ, ನಮ್ಮ ನಮ್ಮ ಎದೆಗಳಲ್ಲಿ ಬೆಳೆಯುವಂಥದ್ದು. ಜೀವಲೋಕದ ಬಗ್ಗೆ ನಮ್ಮ ಅಪತಿಳಿವಳಿಕೆಯನ್ನ ಮನ್ನಿಸಿ ಹೊಸ ನೋಟ ಕರುಣಿಸುತ್ತದೆ. ಏರೋಪ್ಲೇನ್ ಚಿಟ್ಟೆಯನ್ನೇ ಧ್ಯಾನಿಸಿ ಧ್ಯಾನಿಸಿ ಅದರ ಬದುಕಿನಲ್ಲಿ ಒಂದಾಗಿ ತಾವೂ ಕೂಡ ಅದರೊಟ್ಟಿಗೆ ಸಹಜೀವನ ನಡೆಸುತ್ತಿರುವಂತೆ ಭಾವಿಸಿ ಅಧಿಕೃತ ಅಂಶಗಳ ಮೂಲಕ ದಾಖಲಿಸಿ ಮನುಷ್ಯ ಬದುಕಿನ ಮಿತಿಗಳನ್ನ ಅರ್ಥಕ್ಕೆ ಅನುಭವಕ್ಕೆ ತರುವಲ್ಲಿ ಕೃತಿಕಾರ ಕಲ್ಗುಂಡಿ ನವೀನ್ ಯಶಸ್ವಿಯಾಗಿದ್ದಾರೆ.
ಕಲ್ಗುಂಡಿ ನವೀನ್ ಈ ಕಾಲದ ಮಹತ್ವದ ಪರಿಸರ ಬರಹಗಾರರು. ಎಕೊಲಿಟರೇಚರ್ ಅಥವಾ ಹಸಿರು ಸಾಹಿತ್ಯದ ಮೂಲಕ ಕನ್ನಡ ಬರಹಲೋಕಕ್ಕೆ ಹೊಸ ಒಳನೋಟವನ್ನು ಕೊಡುತ್ತಿರುವವರು ಈ ದಿನಮಾನಗಳಲ್ಲಿ ತುಂಬಾ ಕಡಿಮೆ ಬರಹಗಾರರಿದ್ದಾರೆ. ಅದರಲ್ಲಿ ಅನಿತಾ ನರೇಶ್ ಮಂಚಿ, ವಿಜಯಶ್ರೀ ಹಾಲಾಡಿ, ರೂಪ ಹಾಸನ, ಶಾಂತಿ ಕೆ ಅಪ್ಪಣ್ಣ ರವರು ತಮ್ಮ ತಮ್ಮ ಪುಟ್ಟ ಪುಟ್ಟ ಬರಹ, ಕವಿತೆ, ಕಥೆ ಮತ್ತು ಲಹರಿಗಳಲ್ಲಿ ಮನುಷ್ಯರಷ್ಟೇ ನಮ್ಮ ಸುತ್ತಲಿನ ಜಗತ್ತೂ ಕೂಡ ಮಹತ್ವದ್ದು ಎಂದು ನಂಬಿ ಬರೆಯುತ್ತಿರುವವರು ಬದುಕುತ್ತಿರುವವರು. ಕಲ್ಗುಂಡಿ ನವೀನ್ ರವರೂ ಇಂಥ ಕಾಳಜಿಗಳನ್ನೇ ಬದುಕುತ್ತಿರುವವರು. ಮಹಾಂತೇಶ ಪಾಟೀಲ ಮತ್ತು ಕುಶಾಲ ಬರಗೂರು ನಮ್ಮ ಕಾಲದ ಪರಿಸರ ಜಿಜ್ಞಾಸೆಗಳನ್ನ ಅರ್ಥವತ್ತಾಗಿ ಅಧಿಕೃತವಾಗಿ ಮತ್ತು ತಾತ್ವಿಕವಾಗಿ ತಮ್ಮ ಆಳದ ವಿಸ್ತಾರದ ಜ್ಞಾನದ ಹರವಿನಲ್ಲಿ ದಾಖಲಿಸುತ್ತಿರುವ ಅಪರೂಪದ ಲೇಖಕರು. ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಗ್ರೀನ್ ಲಿಟರೇಚರ್ ನ ಪ್ರತ್ಯೇಕ ಜ್ಞಾನಶಾಖೆಗಳನ್ನ ತೆರೆದರೆ ಬಹುಶಃ ಈ ಇಬ್ಬರು ಅವುಗಳನ್ನ ಮುನ್ನಡೆಸಬಲ್ಲ ಅರ್ಹ ಪ್ರತಿನಿಧಿಗಳಂತೆ ನನಗೆ ತೋರುತ್ತಾರೆ.
ಕಲ್ಗುಂಡಿ ನವೀನ್ ತಮ್ಮ ಕೃತಕವಲ್ಲದ ಕಾಳಜಿಗಳ ಕಾರಣಕ್ಕೆ ನನ್ನನ್ನ ಸೆಳೆದವರು. ತಮ್ಮ ಬದುಕು ಬರಹ ಮತ್ತು ಕ್ರಿಯಾಚಟುವಟಿಕೆಗಳಿಂದ ಮುಖ್ಯವಾಗಿ ಅವರ ಅಂತಃಕರಣದಿಂದ ನನ್ನನ್ನ ಗಾಢವಾಗಿ ಪ್ರಭಾವಿಸಿದವರು. ನಮ್ಮ ಸ್ನೇಹ ಹೇಗೆ ಎಲ್ಲಿ ಪ್ರಾರಂಭವಾಯಿತು ಎಂದು ನನಗೆ ನೆನಪಿಲ್ಲ. ನಿಜಬಂಧುತ್ವಕ್ಕೆ ಅದು ಬೇಕೂ ಇಲ್ಲ. ನಮ್ಮ ಶಾಲೆ ಮಕ್ಕಳ ಬಗೆಗಿನ ಅವರ ಅಪರಿಮಿತ ಪ್ರೀತಿ ಲೆಕ್ಕಕ್ಕೆ ತರ್ಕಕ್ಕೆ ನಿಲುಕದ್ದು. ಅಪರೂಪಕ್ಕೆ ಫೋನಿನಲ್ಲಿ ಮಾತು. ನಮ್ಮ ಮಕ್ಕಳಿಗಾಗಿ ಆಗಾಗ ಸೋಜಿಗವೆನ್ನಿಸುವ ಜ್ಞಾನದ ಉಡುಗೊರೆಗಳನ್ನ ಅವರು ಕಳುಹಿಸುತ್ತಾರೆ. ಅವರ ಪೋಸ್ಟ್ ಅಥವಾ ಪಾರ್ಸಲ್ ಬಂದಾಗ ನಮ್ಮ ಶಾಲೆಯಲ್ಲಿ ಅಘೋಷಿತ ಹಬ್ಬದ ಸಂಭ್ರಮವಿರುತ್ತದೆ. ಅವರು ಕಳುಹಿಸಿದ ಪಕ್ಷಿಗಳ ಪೋಸ್ಟರುಗಳು ನಮ್ಮ ಶಾಲೆಯ ಗೋಡೆಗಳ ಅರ್ಥವಂತಿಕೆ ಹೆಚ್ಚಿಸಿವೆ. ಅವರು ಕಳುಹಿಸಿರುವ ಕನ್ನಡ ನಾಡಿನ ಪಕ್ಷಿಗಳ ಅಪರೂಪದ ದಾಖಲೆಯ ಮೌಲ್ಯಯುತ ಪುಸ್ತಕ ನಮ್ಮ ಶಾಲೆಯ ಶಾಶ್ವತ ಆಸ್ತಿಗಳಲ್ಲಿ ಸೇರಿದೆ. ನಮ್ಮ ಮಕ್ಕಳು ದಿನಕ್ಕೊಮ್ಮೆಯಾದರೂ ಆ ಪುಸ್ತಕ ಕರುಣಿಸುವ ಪಕ್ಷಿಲೋಕದಲ್ಲಿ ಒಬ್ಬರಲ್ಲ ಒಬ್ಬರು ವಿಹರಿಸುತ್ತಿರುತ್ತಾರೆ.
ನಾವು ವಿನಾಕಾರಣ ಪರಿಚಯವಾದವರಲ್ಲ. ನಮ್ಮ ಕ್ರಿಯೆಗಳ ಸಕಾರಣಕ್ಕೆ ಪರಿಚಯವಾದವರು. ಈ ಪರಿಚಯಕ್ಕೆ ಎಷ್ಟು ವಯಸ್ಸಾಯಿತು ಎಂದು ನಮಗಿಬ್ಬರಿಗೂ ತಿಳಿದಿಲ್ಲ. ವರ್ಷಗಳೇ ಆದರೂ ನಾವಿಬ್ಬರೂ ಪರಸ್ಪರ ಭೇಟಿಯಾಗಿರಲಿಲ್ಲ. ಬೆಂಗಳೂರು ಮೈಸೂರು ಎಂದು ಎಷ್ಟೇ ಸಲ ಓಡಾಡಿದ್ದರೂ ನಮ್ಮಿಬ್ಬರ ಭೇಟಿಯ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ.
ಈ ಸಾರಿ ಭೇಟಿಯಾಗಲೇಬೇಕೆಂಬ ನಮ್ಮಿಬ್ಬರ ಸಂಕಲ್ಪಕ್ಕೆ ನ್ಯಾಷನಲ್ ಕಾಲೇಜಿನ ಸಾಹಿತ್ಯ ಹಬ್ಬ ವೇದಿಕೆಯಾಯಿತು. ತಿಂಗಳು ಮೊದಲೇ ಭೇಟಿ ನಿಗದಿ ಮಾಡಿಕೊಂಡು ಸಿಗೋಣವೆಂದು ನಿರ್ಧರಿಸಿದ್ದೆವು. ಪ್ರೇಮಿಗಳಿಗೆ ಮಾತ್ರ ಈ ತಹತಹವಿರಬೇಕೆ?! ಒಬ್ಬ ಮನುಷ್ಯ ಮತ್ತೊಬ್ಬ ಅಪರೂಪದ ಮನುಷ್ಯನನ್ನ ಕಾಣಲು ಒಂದು ಸಕಾರಣ ಹಸಿವಿರಬಾರದೇಕೆ.
ಕಲ್ಗುಂಡಿ ನವೀನ್ ಪ್ರತಿದಿನ ಅನುಕ್ಷಣ ಒಂದಿಲ್ಲೊಂದು ಕೆಲಸದಲ್ಲಿ ಮುಖ್ಯವಾಗಿ ಬರವಣಿಗೆಯಲ್ಲಿ ತೊಡಗಿರುವಂಥವರು. ಮೊದಲೇ ಯೋಜಿಸಿದ್ದಂತೆ ಅವರು ನ್ಯಾಷನಲ್ ಕಾಲೇಜಿಗೆ ನನ್ನ ಹುಡುಕಿಕೊಂಡು ಬಂದರು. ನಾನೂ ಅವರಿಗಾಗಿ ಕಾದಿದ್ದೆ. ಬರುವಾಗ ಅವರು ಬರಿಗೈಯಲ್ಲಿ ಬಂದಿರಲಿಲ್ಲ. ಕನ್ನಡದ ಮಾನವೀಯ ವೈದ್ಯರೂ ಬರಹಗಾರರೂ ಆಗಿದ್ದ ನಮ್ಮ ಗದಗ ಜಿಲ್ಲೆಯವರಾದ ಸ.ಜ.ನಾಗಲೋಟಿಮಠ ರವರ ಆತ್ಮಕಥೆ ‘ಬಿಚ್ಚಿದ ಜೋಳಿಗೆ’ ಪುಸ್ತಕಕ್ಕೆ ಅಮೇರಿಕದಿಂದ ಅಪರೂಪಕ್ಕೆ ಆಗಮಿಸಿದ್ದ ನಾಗಲೋಟಿಮಠರ ಮಗನ ಕೈಯಿಂದ ಆಟೋಗ್ರಾಫ್ ಹಾಕಿಸಿಕೊಂಡು ತಂದಿದ್ದರು. ಮತ್ತು ಅದನ್ನ ನನ್ನ ಕೈಗಿತ್ತು ‘ಒಂದು ದಿನ ರಜೆ ಹಾಕಿ ಓದಬಹುದಾದ ಪುಸ್ತಕವಿದು ವೀರಣ್ಣ’ ಎಂದು ಎದೆತುಂಬಿಕೊಂಡು ಹೇಳಿದರು. ಭೇಟಿಯಾಗುತ್ತಲೇ ಒಂದು ಗಟ್ಟಿ ಗಾಢ ಅಪ್ಪುಗೆ. ಜನ್ಮಾಂತರದ ಬಂಧವೆಂಬಂತೆ ಆ ನಿಮಿಷದ ಅಪ್ಪುಗೆ ನನ್ನ ಪಾಲಿಗೆ ನಾನು ಬದುಕಲ್ಲಿ ಗಳಿಸಿದ ಅಪರೂಪದ ಕಮಾಡಿಟಿ ಎನಿಸಿತು. ಸಂದರ್ಭಕ್ಕೆ ತಕ್ಕಂತೆ ಲಾಭದ ಅಳತೆಯಲ್ಲಿ ಇಂದು ಅನೇಕ ಸಂಬಂಧಗಳಿವೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯ ಸಿಗೋದು ಹತ್ತಿರಾಗೋದೇ ಅಪರೂಪವಾಗಿರುವ ಈ ದಿನಮಾನಗಳಲ್ಲಿ ಒಂದು ಪವಿತ್ರ ಸ್ನೇಹವನ್ನ ಗೌರವಿಸದಿರಲು ಸವಿಯದಿರಲು ಹೇಗೆ ಸಾಧ್ಯ ಹೇಳಿ. ಬಿಚ್ಚಿದ ಜೋಳಿಗೆಯ ಜೊತೆ ತಾವೇ ಬರೆದ ಏರೋಪ್ಲೇನ್ ಚಿಟ್ಟೆಯ ಬಾಳಕಥನವನ್ನೂ ನನ್ನ ಬೊಗಸೆಯಲ್ಲಿಟ್ಟರು.
ನ್ಯಾಷನಲ್ ಕಾಲೇಜಿನ ಒಳಗಡೆ ಸಂಧ್ಯಾರಾಣಿಯವರು ಗೋಷ್ಠಿಯೊಂದರಲ್ಲಿ ಹೆಣ್ಣುಮಕ್ಕಳ ತಳ್ಳಂಕಗಳ ಕುರಿತು ಮಾತನಾಡುತ್ತಿದ್ದರು. ನಾವು ಸಭಾಭವನದ ಬಾಗಿಲ ಬಳಿ ಸುಂದರವಾಗಿ ನಿರ್ಮಿಸಲಾಗಿದ್ದ ಸೆಲ್ಫಿ ಸ್ಟ್ಯಾಂಡ್ ಹತ್ತಿರ ನಿಂತು ನಗರ ಜೀವನದ ತಲ್ಲಣಗಳು ಹಳ್ಳಿಗಾಡ ಭಾಗ್ಯ ಬವಣೆಗಳನ್ನ ಒಬ್ಬರ ಎದೆಗೆ ಒಬ್ಬರು ಎಗ್ಗಿಲ್ಲದೆ ಸುರಿದುಕೊಳ್ಳುತ್ತಿದ್ದೆವು. ನಮ್ಮ ನಮ್ಮ ಮಾತಿನ ಮಧ್ಯ ಅದೆಷ್ಟು ಬಾರಿ ತಬ್ಬಿಕೊಂಡೆವೋ ಗೊತ್ತಿಲ್ಲ. ಹಾಗೆ ನಾವು ನಿಂತು ಮಾತಿನಲ್ಲಿ ತಲ್ಲೀನರಾಗಿದ್ದನ್ನ ಕಂಡ ರಾಮಮೋಹನ್ ಸರ್ ಎದುರಲ್ಲಿ ಬಂದು ನಮ್ಮಿಬ್ಬರ ಫೋಟೊ ತೆಗೆದುಕೊಟ್ಟರು. ಬಿರುಬಿಸಿಲಿನ ಬದುಕಲ್ಲಿ ಸುರಿದ ತಣ್ಣನೆಯ ಪ್ರೀತಿಯ ಹನಿಗಳಲ್ಲಿ ಕೆಲವು ನಿಮಿಷ ಮಿಂದೆದ್ದ ನಾವು ಮತ್ತೆ ತಬ್ಬಿಕೊಂಡು ಪರಸ್ಪರ ಬೀಳ್ಕೊಟ್ಟೆವು.
ಈ ಬೆಳಗಿನ ಜಾವ ಗಾಢ ನಿದಿರೆಯಿಂದೆದ್ದವನಿಗೆ ತಲೆಯ ಸಮೀಪವೇ ಇದ್ದ ಕಲ್ಗುಂಡಿ ನವೀನ್ ರವರ ‘ಏರೋಪ್ಲೇನ್ ಚಿಟ್ಟೆ ಲೋಕ’ವನ್ನ ಕೈಗೆತ್ತಿಕೊಂಡೆ. ಮೋಹಕ ಕನಸಿಗೆ ಜೀವಬಂದಂತೆ ಗಾಢ ಪರ್ಪಲ್ ಕಲರಿನ ಏರೋಪ್ಲೇನ್ ಚಿಟ್ಟೆ ಪುಸ್ತಕದ ಮುಖಪುಟದಲ್ಲಿ ಸುಮ್ಮನೆ ಕೂತಿತ್ತು. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆ ಮತ್ತು ಇನ್ನಿತರ ಅಪರೂಪದ ವ್ಯಕ್ತಿಗಳು, ಸಂಘಟನೆಗಳೂ ಸೇರಿ ತೇಜಸ್ವಿ ನೆನಪಿನಲ್ಲಿ ‘ತೇಜಸ್ವಿ ಜೀವಲೋಕ’ ಮಾಲಿಕೆಯಲ್ಲಿ ಈಗಾಗಲೇ ಹತ್ತು ಅಪರೂಪದ ಪುಸ್ತಕ ಪ್ರಕಟಿಸಿದ್ದಾರೆ. ಇದು ಹನ್ನೊಂದನೆಯ ಪುಟ್ಟ ಪುಸ್ತಕ. ಈ ಪುಸ್ತಕ ಓದುತ್ತಾ ಓದುತ್ತಾ ಆ ಹತ್ತೂ ಪುಸ್ತಕ ಓದುವ ತವಕ ಶುರುವಾಗಿದೆ.
ಪ್ರತಿಯೊಂದರಲ್ಲಿ ಮಾನವ ಕೇಂದ್ರಿತ ಪ್ರಯೋಜನವನ್ನೇ ಹುಡುಕುವ ನಮಗೆ ಏರೋಪ್ಲೇನ್ ಚಿಟ್ಟೆ ಹೇಗೆ ನಮ್ಮ ಮಾನವ ಬದುಕಿಗೆ ನೆರವಾಗಿದೆ ಮತ್ತು ಅದರ ಮೌಲ್ಯ ಡಾಲರುಗಳಲ್ಲಿ ರೂಪಾಯಿಗಳಲ್ಲಿ ಎಷ್ಟಾಗಬಹುದು ಎಂಬುದರ ಅರಿವನ್ನ ಮೊದ ಮೊದಲ ಟಿಪ್ಪಣಿಗಳಲ್ಲೇ ಕಾಣಿಸುತ್ತಾ ಹೋಗುತ್ತಾರೆ. ಡೆಂಗ್ಯೂನಿಂದ ಇತ್ತೀಚೆಗಷ್ಟೇ ಎಷ್ಟೋ ಜನ ತೀರಿಹೋದರು. ಆದರೆ ಈ ಏರೋಪ್ಲೇನ್ ಚಿಟ್ಟೆ ದಿನಕ್ಕೆ ಮೂವತ್ತರಿಂದ ನೂರು ಸೊಳ್ಳೆಗಳನ್ನ ತಿಂದು ನಮ್ಮ ಬದುಕನ್ನ ಅದೆಷ್ಟು ಸಹನೀಯಗೊಳಿಸಿದೆ ಎಂಬುದನ್ನ ಮನಗಾಣಿಸುತ್ತಾರೆ. ಅನೇಕ ಚೇತೋಹಾರಿ ಅಂಶಗಳನ್ನ ಓದುಗರ ಅನುಭವಕ್ಕೆ ದಾಟಿಸುವ ನವೀನ್ ರವರು ಎಲ್ಲೂ ಪ್ರೌಢಿಮೆ ತೋರಿಸುವ ಕೃತಕತೆಗೆ ಜಾರುವುದಿಲ್ಲ. ಏರೋಪ್ಲೇನ್ ಚಿಟ್ಟೆಯ ಬದುಕಿನ ಮಹತ್ತನ್ನ ಅರಿತು ಅವುಗಳನ್ನ ಬದುಕಿಸಿಕೊಂಡು ನಾವೂ ಕೂಡ ಹೇಗೆ ಬದುಕಬೇಕು ಎಂಬ ಅಗಾಧ ತಿಳಿವನ್ನ ಮಕ್ಕಳೋಪಾದಿಯಾಗಿ ಜ್ಞಾನವೃದ್ಧರೂ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಅರ್ಥೈಸುತ್ತಾರೆ. ಇಲ್ಲೆಲ್ಲೂ ಯಾರೂ ತಿಳಿಯದ ಅಂಶಗಳನ್ನ ತಿಳಿಸುತ್ತಿದ್ದೇನೆ ಎಂಬ ಸಂಶೋಧಕನ ಸೊಕ್ಕಾಗಲೀ, ಇದು ನಾನು ಮಾತ್ರ ಕಂಡಿದ್ದು ಎಂಬ ಅಹಂ ಆಗಲೀ ಇಲ್ಲ, ಬದಲಾಗಿ ಇದೂ ಒಂದು ಜೀವದ ಘನತೆಯ ಬದುಕು ಗೌರವಿಸಿ ಎಂಬ ನಿವೇದನೆಯಿದೆ.
ಏರೋಪ್ಲೇನ್ ಚಿಟ್ಟೆಯು ಅಣು ಅಣುವಾಗಿ ಹೇಗೆ ಬೆಳೆಯುತ್ತದೆ, ಅದರ ಬದುಕಿನ ಪಲ್ಲಟಗಳೇನು, ಯಾವ ಯಾವ ವಲಯದಲ್ಲಿ ಹೇಗೆಲ್ಲ ಬದುಕುತ್ತದೆ, ಅದರ ಒಟ್ಟು ಆಯುಸ್ಸೆಷ್ಟು ಎಂಬುದನ್ನ ಕಣ್ಣಿಗೆ ಕಟ್ಟುವ ಚಿತ್ರಗಳಂತೆ ನಯವಾದ ನಿರೂಪಣೆಯಲ್ಲಿ ಸೃಜಿಸುತ್ತಾ ಹೋಗುತ್ತಾರೆ. ವಿವಿಧ ಫೋಟೊಗ್ರಾಫರ್ ಗಳು ದಾಖಲಿಸಿರುವ ಫೋಟೊಗಳು ಈ ಬರಹಕ್ಕೆ ಅಧಿಕೃತತೆ ನೀಡುತ್ತವೆ.
‘ಏರೋಪ್ಲೇನ್ ಚಿಟ್ಟೆಯ ಲೋಕ’ದಲ್ಲಿ ವಿಹರಿಸುವಾಗ ಹಲವು ಬೆರಗುಗಳು ಗೋಚರಿಸುತ್ತವೆ. ನಾವು ಮನುಷ್ಯ ಕೇಂದ್ರಿತವಾಗಿ ಯೋಚಿಸುವುದರಿಂದ ಎಷ್ಟೊಂದು ಸಂಗತಿಗಳು ನಮ್ಮಿಂದ ದೂರವೆ ಇವೆಯಲ್ಲ ಎನ್ನಿಸುತ್ತದೆ. ಮಗುವಾಗಿ ಹುಟ್ಟುವ ಮನುಷ್ಯ ಅದೇ ಕೈಕಾಲು ಕಣ್ಣುಗಳನ್ನಿಟ್ಟುಕೊಂಡು ಒಂದು ದಿನ ಹಣ್ಣಾಗಿ ಕಳೆದುಹೋಗುತ್ತಾನೆ. ಆದರೆ ಏರೋಪ್ಲೇನ್ ಚಿಟ್ಟೆಯ ಬದುಕಲ್ಲಿ ಅನೇಕ ಪಲ್ಲಟಗಳು ಘಟಿಸುತ್ತವೆ. ತತ್ತಿಯಾಗಿ ಡಿಂಭವಾಗಿ ಬದುಕುವ ಏರೋಪ್ಲೇನ್ ಚಿಟ್ಟೆ ತನ್ನ ಬದುಕಿನ ಮುಸ್ಸಂಜೆಯಲ್ಲಿ ತನ್ನ ದೇಹವನ್ನೇ ಸೀಳಿಕೊಂಡು ಅದರಲ್ಲೂ ಈ ಸೀಳಿಕೊಂಡು ಹೊಸರೂಪ ಪಡೆಯುವ ಘಟನೆಯೇ ತಾಸುಗಟ್ಟಲೆ ದಿನಗಟ್ಟಲೆ ನಡೆಯುತ್ತದೆ. ನಾವು ಮನುಷ್ಯರಾದವರು ಅರ್ಧತಾಸು ತಾಸಿನ ಪ್ರಸವವೇದನೆಯಲ್ಲಿ ಸತ್ತುಹುಟ್ಟಿ ಬಂದಿರುತ್ತೇವೆ. ಆದರೆ ದಿನವೆಲ್ಲ ತನ್ನನ್ನು ತಾನು ಸೀಳಿಕೊಂಡು ಒಂದು ಪರಿಪೂರ್ಣ ಏರೋಪ್ಲೇನ್ ಚಿಟ್ಟೆಯಾಗುವ ಆ ಪ್ರಕ್ರಿಯೆಯ ಯಾತನೆ ಮತ್ತು ಸಂಭ್ರಮ ಅದೆಂಥದ್ದಿರಬಹುದು ಎಂಬುದು ನಮ್ಮ ಕಲ್ಪನೆಗೆ ನಿಲುಕದ್ದು. ಈ ರೀತಿಯ ಅನೇಕ ಕುತೂಹಲಕರ ಅಂಶಗಳನ್ನ ನವೀನ್ ರವರು ತಮ್ಮ ಸಂಶೋಧನಾತ್ಮಕ ಒಳನೋಟಗಳಿಂದ ದಾಖಲಿಸಿದ್ದಾರೆ.
ಏರೋಪ್ಲೇನ್ ಚಿಟ್ಟೆಯ ಸಂತಾನೋತ್ಪತ್ತಿಯ ಪ್ರಕ್ರಿಯೆ ವಿಶಿಷ್ಟವಾಗಿದೆ. ನಾವು ಮನುಷ್ಯರು, ನಮಗೆ ನಾವು ಮಾತ್ರ ಓದಬಹುದಾದ ಭಾಷೆಯಿದೆ. ಅದಕ್ಕಾಗಿ ನಾವು ಕಾಮಶಾಸ್ತ್ರದ ಅನೇಕ ಗ್ರಂಥಗಳನ್ನ ನಮಗೆ ನಾವು ಬರೆದುಕೊಂಡು ನಮಗೆ ಮಾತ್ರ ಗೊತ್ತಿರುವ ವಿದ್ಯೆ ಎಂದುಕೊಂಡು ಬೀಗುತ್ತೇವೆ. ನನಗನ್ನಿಸಿದ್ದು ಏರೋಪ್ಲೇನ್ ಚಿಟ್ಟೆಗಳಿಗೂ ಕನ್ನಡ ಗೊತ್ತಿದ್ದಿದ್ದರೆ ಬಹುಶಃ ನಮ್ಮ ಮೈಥುನದ ಭಂಗಿಗಳನ್ನ ನೋಡಿ ನಕ್ಕು ಹಾಗಲ್ಲ ಕಣ್ರಯ್ಯ ಅದು ಹೀಗೆ ಎಂದು ಪ್ರಾಯೋಗಿಕ ಪಾಠ ಹೇಳುತ್ತಿದ್ದವೇನೋ. ಏರೋಪ್ಲೇನ್ ಚಿಟ್ಟೆಗಳ ಮೈಥುನದ ಪ್ರಕ್ರಿಯೆ ತುಂಬಾ ವಿಶಿಷ್ಟತೆಯಿಂದ ಕೂಡಿದೆ. ಗಂಡು ಚಿಟ್ಟೆಯ ಪಾರದರ್ಶಕ ಮತ್ತು ಹೊಳೆಯುವ ಬಣ್ಣಗಳ ರೆಕ್ಕೆಗಳೆಡೆಗೆ ಮೋಹಗೊಂಡು ಹೆಣ್ಣುಚಿಟ್ಟೆ ಸಮೀಪ ಬರುತ್ತವೆ. ಹೀಗೆ ಬರುವ ಹೆಣ್ಣುಚಿಟ್ಟೆಯ ಕತ್ತಿನ ಹಿಂಭಾಗವನ್ನ ಒತ್ತಿ ಹಿಡಿದಾಗ ಹೆಣ್ಣುಚಿಟ್ಟೆಯ ಜನನಾಂಗ ಗಂಡುಚಿಟ್ಟೆಯೊಂದಿಗೆ ಸಂಯೋಗಗೊಂಡು ಸಂತಾನೋತ್ಪತ್ತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಹೀಗೆ ಅವು ಪರಸ್ಪರ ಸೇರಿದಾಗ ನಮಗೆ ಕಾಣುವ ಹೃದಯದಾಕಾರದ ಚಿತ್ರ ಮೂಡುವುದು ಆಕಸ್ಮಿಕವೇನಲ್ಲ! ಈ ಎಲ್ಲ ವಿವರ ಪುಸ್ತಕದಲ್ಲಿ ಹೃದಯಸ್ತವಾಗಿವೆ.
ಈ ಪುಸ್ತಕದ ಮಹತ್ವವಿರುವುದು ಏರೋಪ್ಲೇನ್ ಚಿಟ್ಟೆಯ ಬದುಕಿನಲ್ಲಿ ನಮಗೆ ಗೋಚರಿಸುವ ಆದರೆ ನಮ್ಮ ಕಥಾಕಥಿತ ತರ್ಕಕ್ಕೆ ನಿಲುಕದ ಕೆಲವು ಪ್ರಶ್ನೆಗಳಿಗೆ ನಮ್ಮನ್ನ ಅಂದರೆ ಮಾನವ ಜನಾಂಗವನ್ನ ಮೌನವಾಗಿಸಿರುವುದಕ್ಕೆ. ಮಂಗಳಯಾನ ಮಾಡಿ ಬಂದ ನಮ್ಮ ಜ್ಞಾನದ ಅಹಂನ್ನ ಕಿಂಚಿತ್ ಎಂದು ತೋರಿಸಿಕೊಟ್ಟಿದ್ದಕ್ಕೆ. ನೂರಾರು ಕಾಗೆಗಳು ಆಹಾರಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ ಒಂದೆಡೆ ಸಭೆ ಸೇರುವುದನ್ನ ಅಪರೂಪಕ್ಕಾದರೂ ನಾವು ನೋಡಿದ್ದೇವೆ. ಆದರೆ ನೂರಾರು ಏರೋಪ್ಲೇನ್ ಚಿಟ್ಟೆಗಳೂ ಸಹ ಹೀಗೆ ಅಘೋಷಿತ ಸಭೆ ಸೇರುತ್ತವೆ ಮತ್ತು ಹೀಗೆ ಅವು ಏಕೆ ಸಭೆ ಸೇರುತ್ತವೆ ಎಂಬುದರ ಜಿಜ್ಞಾಸೆ ಇನ್ನೂ ಜೀವಂತವಾಗಿದೆ ಎಂಬ ಸತ್ಯವನ್ನ ಈ ಕೃತಿ ದಾಖಲಿಸುತ್ತದೆ. ಹಾಗೆಯೇ ಮತ್ತೊಂದು ವಿಚಾರಕ್ಕೆ ನಮ್ಮನ್ನ ಈ ಏರೋಪ್ಲೇನ್ ಚಿಟ್ಟೆಗಳು ಮೌನವಾಗಿಸುತ್ತವೆ. ಅದೆಂದರೆ ಅವುಗಳ ಸಾವಿರಾರು ಕಿಲೋಮೀಟರ್ ಗಳ ದೇಶದಿಂದ ದೇಶಕ್ಕೆ ನಡೆಯುವ ಬಹುದೂರದ ವಲಸೆ. ಈ ವಲಸೆಗಳ ಕಾರಣವಿನ್ನೂ ಸಿಕ್ಕಿಲ್ಲ. ಅಷ್ಟು ದೂರ ಹೋಗುವುದೇಕೆ, ಒಂದಿಡೀ ಬದುಕು ಬದುಕಿ, ಮತ್ತೊಂದು ಬದುಕಾಗಿ ಮತ್ತೆ ಮರಳಿ ಬರುವುದೇಕೆ ಎಂಬುದರ ತಾರ್ಕಿಕ ಕಾರಣ ನಮಗಿನ್ನೂ ಸಿಕ್ಕಿಲ್ಲ. ಈ ಸತ್ಯವನ್ನ ದಾಖಲಿಸುವುದೂ ಕೂಡ ಇದೇ ಪುಸ್ತಕವೇ.
ಇದನ್ನು ಓದಿದ್ದೀರಾ?: ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ದಲಿತ ‘ಕಿಲ್ವೇನ್ಮಣಿ ಹತ್ಯಾಕಾಂಡ’
ಹವಾಮಾನದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾದಂತೆ ಏರೋಪ್ಲೇನ್ ಚಿಟ್ಟೆಗಳ ಗಾತ್ರ ನಮ್ಮ ತೋಳಿನಷ್ಟಿದ್ದದ್ದು ಈಗ ಬೆರಳಿನ ಗಾತ್ರಕ್ಕೆ ಬಂದಿದೆ. ನಾವು ಭಾಗ್ಯವಂತರು ಗಾತ್ರಕ್ಕಿಂತ ನಮ್ಮ ಬಾಲವಷ್ಟೇ ಕರಗಿದೆ. ಬುದ್ಧಿಯಲ್ಲಿ ಮಾತ್ರ ಬಾಲ ಬೆಳೆಯುತ್ತಲೇ ಇದೆ. ಗ್ಲೋಬಲ್ ವಾರ್ಮಿಂಗ್ ನ ಕಾರಣಕ್ಕೆ ಅವುಗಳ ರೆಕ್ಕೆಯ ಹೊಳಪು ಕಡಿಮೆಯಾಗಿ ಅವುಗಳ ನಡುವಿನ ಪರಸ್ಪರ ಆಕರ್ಷಣೆಯೂ ಕಡಿಮೆಯಾಗಿ ಚಿಟ್ಟೆಗಳ ಸಂತತಿಯೇ ಕ್ಷೀಣಿಸಿರುವುದನ್ನ ಅನೇಕ ಸಕಾರಣಗಳ ಮೂಲಕ ಈ ಪುಸ್ತಕ ವಿವರಿಸುತ್ತದೆ.
ಈ ಪುಸ್ತಕದ ಓದು ಮುಗಿಯುವಂಥದ್ದಲ್ಲ, ನಮ್ಮ ನಮ್ಮ ಎದೆಗಳಲ್ಲಿ ಬೆಳೆಯುವಂಥದ್ದು. ಜೀವಲೋಕದ ಬಗ್ಗೆ ನಮ್ಮ ಅಪತಿಳಿವಳಿಕೆಯನ್ನ ಮನ್ನಿಸಿ ಹೊಸ ನೋಟ ಕರುಣಿಸಿದ ಈ ಪುಸ್ತಕ ಪ್ರಕಟಿಸಿದ ತೇಜಸ್ವಿ ಪ್ರತಿಷ್ಠಾನ ಅಭಿನಂದನಾರ್ಹವಾದದ್ದು. ಅಲ್ಲಲ್ಲಿ ಅಕ್ಷರ ತಪ್ಪುಗಳು ರಸಭೋಜನದಲ್ಲಿ ಹರಳು ಸಿಕ್ಕ ಅನುಭವ ಕೊಡುತ್ತವೆ. ಇಲ್ಲಿ ನೀಡಲಾದ ಬಹುತೇಕ ಮಾಹಿತಿಗಳು ಕಣ್ಣಿದ್ದವರಿಗೆ ಮಾತ್ರ ಕಾಣಲಾರವು. ಹೃದಯದಿಂದ ಕಂಡರೆ ಕಾಣಬಹುದು. ಬಹುಶಃ ಏರೋಪ್ಲೇನ್ ಚಿಟ್ಟೆಯನ್ನೇ ಧ್ಯಾನಿಸಿ ಧ್ಯಾನಿಸಿ ಅದರ ಬದುಕಿನಲ್ಲಿ ಒಂದಾಗಿ ತಾವೂ ಕೂಡ ಅದರೊಟ್ಟಿಗೆ ಸಹಜೀವನ ನಡೆಸುತ್ತಿರುವಂತೆ ಭಾವಿಸಿ ಅಧಿಕೃತ ಅಂಶಗಳ ಮೂಲಕ ದಾಖಲಿಸಿ ಮನುಷ್ಯ ಬದುಕಿನ ಮಿತಿಗಳನ್ನ ಅರ್ಥಕ್ಕೆ ಅನುಭವಕ್ಕೆ ತರುವಲ್ಲಿ ಕಲ್ಗುಂಡಿ ನವೀನ್ ರವರು ಯಶಸ್ವಿಯಾಗಿದ್ದಾರೆ.

ವೀರಣ್ಣ ಮಡಿವಾಳರ
ಕವಿ, ಲೇಖಕ, ಶಿಕ್ಷಕ
ಗ್ರಾಮೀಣ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿರುವ,,, ಪ್ರತಿಭಾವಂತರು ಇನ್ನೂ ಎತ್ತರದ ಗುರಿ ಮುಟ್ಟಲಿ