ಆಸೀಫ್‌ನಿಗೆ ಈ ಗಿಡವನ್ನು ದತ್ತುಕೊಡಲಾಗಿದೆ. ಉಳಿದವರಿಗೆ ಕೊಟ್ಟಂತೆ. ಆಸೀಫ್‌ನಿಗೆ ಈ ಗಿಡದ ಬಗ್ಗೆ ತುಂಬಾ ಅಕ್ಕರೆ ಮಮತೆ. ಅವನಿಗೆ ಆ ಗಿಡವನ್ನು ದತ್ತುಕೊಟ್ಟಾಗಿನಿಂದ ತುಂಬಾ ಚನ್ನಾಗಿ ದೇಖರೇಖಿ ಮಾಡತೊಡಗಿದ. ಪ್ರತಿದಿನ ತಪ್ಪದೇ ಅದಕ್ಕೆ ನೀರುಣಿಸುವುದು, ಅದರ ಸುತ್ತ ಕಟ್ಟೆ ಕಟ್ಟಿ ಅಲ್ಲಿ ಸದಾ ಹಸಿ ಇರುವಂತೆ ನೋಡಿಕೊಳ್ಳುವುದು, ರಜೆ ಇದ್ದಾಗಲೂ ಶಾಲೆ ಕಡೆ ಆಡಲು ಬಂದು ಆ ಗಿಡವನ್ನು ಮಾತನಾಡಿಸಿ, ಆ ಗಿಡಕ್ಕೆ ನೀರುಣಿಸಿಯೇ ಹೋಗುತ್ತಿದ್ದ.
ಒಂದು ದಿನ…. ಹೀಗಾಯಿತು. ಆಸೀಫ್ ನ ಗಿಡದ ಚಂಡನ್ನು ಯಾರೋ ಕತ್ತರಿಸಿಬಿಟ್ಟಿದ್ದರು. ಪುಟ್ಟ ಗಿಡ ತಲೆ ಕಡಿಸಿಕೊಂಡು ಬೋಳಾಗಿ ನಿಂತಿತ್ತು.
ಎಂದಿನಂತೆ ಶಾಲೆಗೆ ಬಂದ ಆಸೀಫನಿಗೆ ತನ್ನ ಗಿಡಕ್ಕಾದ ಗತಿ ಕಂಡು ಆಘಾತಕ್ಕೊಳಗಾದ ನಾ ಬಂದ ತಕ್ಷಣ ಅವನ ದುಃಖದ ಕಟ್ಟೆಯೊಡೆಯಿತು. ನನ್ನನ್ನ ತಬ್ಬಿಕೊಂಡು ಅಳತೊಡಗಿದ. ನಾನು ಎಷ್ಟೇ ಸಮಾಧಾನಿಸಿದರೂ ಅವನ ದುಃಖ ನಿಲ್ಲಲಿಲ್ಲ.
ನಂತರ ಉಳಿದ ಮಕ್ಕಳನ್ನೂ ಕರೆದು, ಆಸೀಫನ ಗಿಡಕ್ಕಾಗಿರುವ ಸ್ಥಿತಿಯ ಕುರಿತು ಚರ್ಚಿಸಿ, ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಮತ್ತೆ ಯಾರೂ ಈ ರೀತಿ ಮಾಡದಿರಲಿ, ನಿಮ್ಮ ನಿಮ್ಮ ಗಿಡಗಳ ಕಾಳಜಿ ಆಸೀಫನಂತೆಯೇ ಎಲ್ಲರೂ ಮಾಡಿ, ಈ ಗಿಡವನ್ನ ನಾವೆಲ್ಲ ತಬ್ಬಿಕೊಂಡು ಅದಕ್ಕಾಗಿರುವ ನೋವಿಗೆ ಸಾಂತ್ವನ ಹೇಳೋಣ ಮತ್ತು ಅದನ್ನ ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳುವುದಾಗಿಯೂ ಅದು ಮತ್ತೆ ಬೆಳೆಯುವಂತೆ ಆ ಗಿಡಕ್ಕೆ ಪ್ರಾರ್ಥಿಸೋಣ ಎಂದು ಹೇಳಿ ಎಲ್ಲರೂ ಒಂದೊಂದು ತಂಬಿಗೆ ನೀರು ಹಾಕಿದೆವು.
ಆಸೀಫ್ ಸ್ವಲ್ಪ ಸಮಾಧಾನವಾದಂತೆ ಕಂಡ. ಆಸೀಫ್ ಮತ್ತಷ್ಟು ಪ್ರೀತಿಯಿಂದ ಆ ಗಿಡವನ್ನು ನೋಡಿಕೊಳ್ಳತೊಡಗಿದೆ. ಅದಕ್ಕೆ ತನ್ನೆಲ್ಲ ಪ್ರೀತಿ ಕಾಳಜಿ ಧಾರೆ ಎರೆದ. ಕತ್ತು ಕತ್ತರಿಸಿಕೊಂಡ ಗಿಡ ಮತ್ತೆ ಚಿಗುರತೊಡಗಿತು. ಆಸೀಫ್ ನಿಗೆ ಆಶ್ವರ್ಯ ಮತ್ತು ಸಂಭ್ರಮ.
ಈಗ ಆ ಗಿಡ ಎಲ್ಲ ಗಿಡಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆದಿದೆ. ಆಸೀಫನಿಗಿಂತಲೂ ದುಪ್ಪಟ್ಟು ಬೆಳೆದು ನಿಂತಿದೆ.ತನ್ನ ಶ್ರದ್ಧೆ ಪರಿಸರ ಪ್ರೀತಿ ಮತ್ತು ಕಾಳಜಿಯಿಂದ ಆಸೀಫ್ ಇಂದು ನಮಗೆಲ್ಲ ಆದರ್ಶವಾಗಿದ್ದಾನೆ. ಆಸೀಫನಿಗೆ ಮತ್ತು ಆ ಗಿಡಕ್ಕೆ ತುಂಬು ಪ್ರೀತಿ.