ಜಗತ್ತಿಗೆ ವಿಶ್ವಮಾನವ ಸಂದೇಶವನ್ನು ತಮ್ಮ ಕಾಣಿಕೆಯಾಗಿ ಕೊಟ್ಟ ಕುವೆಂಪು, ತಮ್ಮ ಮೇರು ಕೃತಿಗಳಿಂದಲೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಧಾರವಾಡದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.
ಧಾರವಾಡದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕುವೆಂಪು ಅವರು ರಾಮಾಯಣ ದರ್ಶನಂ ಕೃತಿಯ ಮೂಲಕ ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ ಮಹಾನ್ ರಸಋಷಿ ಇವರು. ಕುವೆಂಪು ಅವರು ವಿಶ್ವಕ್ಕೆ ಕೊಡುಗೆಯಾಗಿ ಕೊಟ್ಟ ವಿಶ್ವಮಾನವ ಸಂದೇಶವನ್ನು ಅಕ್ಷರಶಃ ಪಾಲಿಸುವ ಪ್ರಯತ್ನ ಹಾಗೂ ಅವರ ಉದಾತ್ತ ಚಿಂತನೆಗಳನ್ನು, ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಜೀವನದ ದಾರಿದೀಪಗಳನ್ನಾಗಿ ಮಾಡಿಕೊಳ್ಳಬೇಕು. ಕುವೆಂಪು ಸಾಹಿತ್ಯವನ್ನು ಅನುಸರಿಸಿ ಪ್ರತಿ ಮನೆ ಮನಗಳಿಗೆ ಸಾಹಿತ್ಯದ ವಿಚಾರಧಾರೆಗಳನ್ನು ತಲುಪಿಸಬೇಕು. ಸರಳ ವಿವಾಹದ ಮಂತ್ರ ಮಾಂಗಲ್ಯ ಎಂಬ ಮದುವೆಯ ವಿಶಿಷ್ಟ ಸಂದೇಶವನ್ನು ಸಾರಿದ್ದಾರೆ” ಎಂದು ಹೇಳಿದರು.
ಹಿರಿಯ ಸಾಹಿತಿ ಶಾಂತಿನಾಥ ದಿಬ್ಬದ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, “ವಿಶ್ವಮಾನವ ಎಂಬ ಪರಿಕಲ್ಪನೆಯನ್ನು ಮೊದಲ ಬಾರಿಗೆ ಹುಟ್ಟು ಹಾಕಿದವರು ಕುವೆಂಪು. ಮಾನವರೆಲ್ಲರೂ ಒಂದೇ ಎಂದು ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ತಮ್ಮ ಕಥೆ, ಕಾದಂಬರಿ, ವೈಚಾರಿಕತೆಯ ಕಾವ್ಯಗಳ ಮೂಲಕ ಹೋರಾಡಿದವರು. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಪ್ರತಿಭೆಗೆ ಯಾವುದೇ ಜಾತಿ ಇರುವುದಿಲ್ಲ, ಕುವೆಂಪು ಸಾಹಿತ್ಯವನ್ನು ಎಲ್ಲ ವಿದ್ಯಾರ್ಥಿಗಳೂ ಓದಬೇಕು. ಅದರಿಂದ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳಬಹುದು” ಎಂದು ಹೇಳಿದರು.
“ಗುಡಿ, ಚರ್ಚ್ ಹಾಗೂ ಮಸೀದಿಗಳನ್ನು ಬಿಟ್ಟು ಹೊರಬನ್ನಿ ಎಂಬ ಸಂದೇಶ ನೀಡಿದರು. ಸಾಹಿತ್ಯಕ್ಕೆ ಕಾಲ, ಜಾತಿ, ಮತ, ಭಾಷೆ, ಪ್ರದೇಶ ಇರುವುದಿಲ್ಲವೆಂಬುದು ಕುವೆಂಪು ಅವರ ಭಾವನೆಯಾಗಿತ್ತು. ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. ಮನುಜ ಮತ, ವಿಶ್ವಪಥ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ” ಎಂದು ಕೊಂಡಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಲೋಕಸಭಾ ಟಿಕೆಟ್ ಬಳಿಕ ಜಿಲ್ಲಾಧ್ಯಕ್ಷ ಸ್ಥಾನ; ಬಿಜೆಪಿಗರ ಗುದ್ದಾಟ
ಕಾರ್ಯಕ್ರಮದಲ್ಲಿ ಹಲವು ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕವನವಾಚಾನ, ಪ್ರಬಂಧ, ಸ್ಪರ್ಧೆಗಳ ವಿಜೇತರಿಗೆ ಗೌರವಿಸಿ, ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ ಲಿಂಗರಾಜ ಅಂಗಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದ್ದರು.