ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ, ಅಧಿಕಾರ ಹಿಡಿದಿದೆ. ಆದರೆ, ಈ ಚುನಾವಣೆಯಲ್ಲಿ ಹಲವಾರು ಸ್ವರಸ್ಯಕರ ಘಟನೆಗಳು ನಡೆದಿವೆ. ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಅಕ್ಕ-ತಂಗಿಯರಲ್ಲಿ ತಂಗಿ ಗೆಲುವು ಸಾಧಿಸಿದ್ದು, ಅಕ್ಕನನ್ನು ಮಣಿಸಿದ್ದಾರೆ.
ಪುರಸಭೆಯ ಲಕ್ಷ್ಮಿಗುಡ್ಡೆ ಪ್ರಕಾಶ್ ನಗರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಂಗಿ ಸ್ವಪ್ನ ಶೆಟ್ಟಿ ಸ್ಪರ್ಧಿಸಿದ್ದರು. ಅವರ ಅಕ್ಕ ಸೌಮ್ಯ ಅವರು ಸಿಪಿಐಎಂ ಅಭ್ಯರ್ಥಿಯಾಗಿದ್ದರು. ಸ್ವಪ್ನ ಅವರು 340 ಮತಗಳನ್ನು ಪಡೆದು ಅಕ್ಕನ ವಿರುದ್ಧ ಗೆಲುವು ಸಾಧಿಸಿದ್ದಾರೆ. 153 ಮತಗಳನ್ನು ಪಡೆದ ಸೌಮ್ಯ ಸೋಲುಂಡಿದ್ದಾರೆ.
ಅಂತೆಯೇ, ಪತಿ-ಪತ್ನಿಯರು ಪ್ರತ್ಯೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಅವರಲ್ಲಿ ಒಂದು ವಾರ್ಡ್‌ನಲ್ಲಿ ಪತ್ನಿ ಅಮೀನಾ ಬಶೀರ್ ಗೆಲುವು ಸಾಧಿಸಿದ್ದಾರೆ. ಮತ್ತೊಂದು ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಪತಿ ಬಶೀರ್ ಮುಂಡೋಳಿ ಒಂದು ಮತದ ಅಂತರದಿಂದ ಸೋಲುಂಡಿದ್ದಾರೆ.
ಸೋಮೇಶ್ವರ ಪುರಸಭೆಯ ಒಟ್ಟು 23 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 16 ಸ್ಥಾನಗಳಲ್ಲಿ ಬಿಜೆಪಿ ಗೆದ್ದು, ಅಧಿಕಾರ ಹಿಡಿದಿದೆ. 7 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ.