ಮಳೆ ಕೊರತೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ತರಕಾರಿ ಬೆಳೆಯುವ ಪ್ರದೇಶ ಅರ್ಧದಷ್ಟು ಕಡಿತವಾಗಿದೆ. ಪರಿಣಾಮ, ಇಲ್ಲಿನ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ತರಕಾರಿ ಪೂರೈಕೆಯಾಗದೆ, ಕೆಲವು ತರಕಾರಿಗಳ ಬೆಲೆ ಗಗನಕ್ಕೇರಿದೆ.
ನಾಲ್ಕು ತಿಂಗಳ ಹಿಂದೆ ಟೊಮೆಟೊ ದರ ಕೆಜಿಗೆ 100 ರೂ. ದಾಟಿತ್ತು. ನಂತರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬಂದಿದ್ದರಿಂದ ಕೆಜಿಗೆ 20ರಿಂದ 40 ರೂ.ಗೆ ದರ ಇಳಿದಿತ್ತು. ಈಗಲೂ ಅಷ್ಟೇ ದರ ಮುಂದುವರಿದಿದೆ. ಆದರೆ, ಬದನೆಕಾಯಿ ದರ ಕೆಜಿಗೆ 60ರಿಂದ 70 ರೂ, ಗಜ್ಜರಿ 40ರಿಂದ 50 ರೂ, ಬೆಂಡೆಕಾಯಿ 60ರಿಂದ 80 ರೂ, ಬೀನ್ಸ್ 80 ರೂ.ಗೆ ಏರಿಕೆಯಾಗಿದೆ. 25ರಿಂದ 30 ರೂ. ಒಂದು ಕೆ.ಜಿ ಆಲೂಗಡ್ಡೆ ಮಾರಾಟವಾಗುತ್ತಿದೆ.
ತರಕಾರಿಕೊಳ್ಳಲು ಬರುತ್ತಿರುವ ಗ್ರಾಹಕರು, ಕಳೆದೊಂದು ವಾರದಿಂದ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ದರ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ. ಎಂದು ತಮ್ಮ ಬೇಸರ ಹೊರಹಾಕುತ್ತಿದ್ದಾರೆ.
ಬೆಳಗಾವಿ ನಗರ ಮಾತ್ರವಲ್ಲ, ಜಿಲ್ಲೆಯ ಎಲ್ಲ ಮಾರುಕಟ್ಟೆಗಳಲ್ಲೂ ಇದೇ ಪರಿಸ್ಥಿತಿಯಿದೆ. ಬರದ ಹಿನ್ನೆಲೆಯಲ್ಲಿ ಈ ಬಾರಿ ತರಕಾರಿ ಬೆಳೆ ಇಳುವರಿ ಕುಸಿದಿದೆ. ಎಷ್ಟೋ ಕಡೆ ಒಂದಿಷ್ಟು ಬೆಳೆಯೂ ಬಂದಿಲ್ಲ. ಹಾಗಾಗಿ ತರಕಾರಿ ದರ ಹೆಚ್ಚುತ್ತಲೇ ಇದೆ. ಜನರು ಚೌಕಾಸಿ ಮಧ್ಯೆಯೂ ಖರೀದಿಸುತ್ತಿದ್ದಾರೆ ಎನ್ನುತ್ತಿದ್ದಾರೆ ತರಕಾರಿ ಮಾರುವವರು.
ಬೆಳಗಾವಿ, ಖಾನಾಪುರ, ಚನ್ನಮ್ಮನ ಕಿತ್ತೂರು, ಗೋಕಾಕ, ಮೂಡಲಗಿ ತಾಲೂಕುಗಳಲ್ಲಿ ಹೆಚ್ಚಾಗಿ ತರಕಾರಿ ಬೆಳೆಯಲಾಗುತ್ತದೆ. ಕಳೆದ ವರ್ಷ ಹಿಂಗಾರು ಹಂಗಾಮಿನಲ್ಲಿ 8,900 ಹೆಕ್ಟೇರ್‌ನಲ್ಲಿ ತರಕಾರಿ ಬೆಳೆಯಲಾಗಿತ್ತು. ಈ ಬಾರಿಯೂ ಅಷ್ಟೇ ಬಿತ್ತನೆಯಾಗಬಹುದೆಂಬನಿರೀಕ್ಷೆ ಇತ್ತು. ಆದರೆ, ಬರದ ಪರಿಸ್ಥಿತಿಯಿಂದಾಗಿ ಶೇ. 52ರಷ್ಟು ಮಾತ್ರ ಬಿತ್ತನೆಯಾಗಿದೆ. ಈ ಬಾರಿ ಇಳುವರಿಯೂ ಕುಸಿದಿರುವುದು ತರಕಾರಿಗಳ ದರ ಹೆಚ್ಚಲು ಕಾರಣವಾಗಿರಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.