2024ರ ಜನವರಿ 20ರೊಳಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯುತ್ತದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಈ ಹಿಂದೆ ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹೋರಾಟ ಆಯೋಜಿಸಲಾಗಿತ್ತು. ಆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವಾರದಲ್ಲಿ ಕಾನೂನು ತಜ್ಞರ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಮುಖ್ಯಮಂತ್ರಿಯವರ ಭರವಸೆ ಹಿನ್ನೆಲೆಯಲ್ಲಿ ಮುತ್ತಿಗೆ ಹೋರಾಟಕ್ಕೆ ಅಲ್ಪವಿರಾಮ ಹಾಕಲಾಗಿತ್ತು. ಆಗ, ಒಂದು ವಾರ ಅಲ್ಲ. ಜನವರಿ 20ವರೆಗೆ ಕಾಲಾವಕಾಶ ತೆಗೆದುಕೊಂಡು ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿಯವರಿಗೆ ಕೋರಲಾಗಿತ್ತು. ಆದರೆ, ಮುಖ್ಯಮಂತ್ರಿಯವರು ಕೊಟ್ಟ ಒಂದು ವಾರದ ಕಾಲಾವಧಿ ಮುಗಿದರೂ ಇನ್ನೂ ಕಾನೂನು ತಜ್ಞರ,
ಸಮುದಾಯದ ಪ್ರಮುಖರ ಸಭೆ ಕರೆದಿಲ್ಲ” ಎಂದು ಕಿಡಿಕಾರಿದ್ದಾರೆ.
“ಮುಖ್ಯಮಂತ್ರಿಯವರ ಮಾತಿಗೆ ಗೌರವ ಕೊಟ್ಟು ಮುತ್ತಿಗೆ ಹೋರಾಟದಿಂದ ಹಿಂದೆ ಸರಿದೆವು. ಈಗ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಅವರು ಜನವರಿ 20ರೊಳಗೆ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ನಿರ್ಧಾರ ಪ್ರಕಟಿಸಬೇಕು” ಎಂದು ಆಗ್ರಹಿಸಿದರು.
“ವೀರಶೈವ ಲಿಂಗಾಯತ ಮಹಾಸಭಾದ ಮಹಾಅಧಿವೇಶನದಲ್ಲಿ ಉಪಜಾತಿ ಕಾಲಂನಲ್ಲಿ ಒಳಪಂಗಡಗಳ ಹೆಸರು ಬರೆಸಬಾರದು ಎಂಬ ನಿರ್ಣಯ ಕೈಗೊಂಡಿದ್ದಾರೆ. ಇದರಿಂದ ಸಮಾಜದಲ್ಲಿ ತಪ್ಪು ಸಂದೇಶ ಹೋಗಿದೆ. ಗೊಂದಲವೂ ಮೂಡಿದೆ. ಸಮುದಾಯಗಳು ತಮ್ಮ ಒಳಪಂಡಗಳ ಹೆಸರು ಬರೆಸುವುದು ಅವರ ಅಸ್ಮಿತೆ ಹಾಗೂ ಅವರ ಹಕ್ಕು. ಮಹಾ ಅಧಿವೇಶನದ ವೇದಿಕೆಯಲ್ಲಿದ್ದ ಬಹುತೇಕ ಸ್ವಾಮೀಜಿಗಳೆಲ್ಲರೂ ಒಳಪಂಗಡಗಳ ಹೆಸರು ಬರೆಸಲು ಹೇಳಿದವರೇ ಆಗಿದ್ದಾರೆ. ನಮ್ಮ ಯಾವುದೇ ನಿರ್ಧಾರಗಳು ಸಮುದಾಯದ ಯಾವುದೇ ಒಳಪಂಗಡಗಳ ಸಾಮಾಜಿಕ ನ್ಯಾಯಕ್ಕೆ ತೊಡಕಾಗಬಾರದು. ಆದ್ದರಿಂದ ಮಹಾಸಭಾ ಈ ನಿರ್ಣಯದ ಬಗ್ಗೆ ಪುನರ್ ಪರಿಶೀಲಿಸಬೇಕು” ಎಂದು ಮನವಿ ಮಾಡಿದರು.
“ಹಿಂದಿನ ಸರ್ಕಾರ ಲಿಂಗಾಯತ ಎಲ್ಲ ಒಳಪಂಗಡಗಳನ್ನು ಸೇರಿಸಿ 2ಡಿ ಮಾಡಿತ್ತು. ಆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಆದ್ದರಿಂದ ನಮಗೆ 2ಡಿ ವಿಚಾರ ಬೇಡ. ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲಾತಿ ಕೊಡಿಸುವುದೊಂದೇ ನಮ್ಮ ಗುರಿ” ಎಂದು ಹೇಳಿದರು.
ಈ ವೇಳೆ, ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಪರಮೇಶ್ವರ ಗೌಡ್ರು, ವಕೀಲ ಯೋಗೀಶ್, ಅಶೋಕ ಗೋಪನಾಳ, ಮಂಜುನಾಥ ಪೈಲ್ವಾನ್ ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.