“ಮೊದಲು ಅವರು ನನ್ನ ತಾಯಿಯನ್ನು ‘ಮಾಟಗಾತಿ’ ಎಂದು ಬಿಂಬಿಸಿದರು. ನಂತರ ನನ್ನ ಸಹೋದರಿ ‘ಮಾಟಗಾತಿ’ ಎಂದರು. ಬಳಿಕ ಇಬ್ಬರನ್ನೂ ಕೊಂದೇಬಿಟ್ಟರು,” ಇದು 2015ರಲ್ಲಿ ಭಯಾನಕ ರಾತ್ರಿಯಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ 57 ವರ್ಷದ ಸಿಬಿ ಖಲ್ಖೋ ಅವರ ದುಗುಡದ ಮಾತು.
ಜಾರ್ಖಂಡ್‌ನ ರಾಜಧಾನಿ ರಾಂಚಿ ಬಳಿಯ ಕಾಂಜಿಯಾ ಮರೈತೋಲಿ ಗ್ರಾಮದ ನಿವಾಸಿ ಸಿಬಿ ಖಲ್ಬೋ. ಗ್ರಾಮದಲ್ಲಿ ಐವರು ಮಹಿಳೆಯರು – ಜಸಿಂತಾ, ಮದನಿ, ಟಿಟ್ರಿ, ರಾಕಿಯಾ ಹಾಗೂ ಐತ್ವಾರಿಯಾ – ಅವರನ್ನು ವಾಮಾಚಾರಿಗಳೆಂದು ಆರೋಪಿಸಿ ನೆರೆಹೊರೆಯವರು 2015ರ ಆಗಸ್ಟ್ 8ರಂದು ಬರ್ಬರವಾಗಿ ಕೊಲೆ ಮಾಡಿದ್ದರು.
ಕಾಂಜಿಯಾ ಮರೈತೋಲಿ ಗ್ರಾಮದ ಐವರು ಮಹಿಳೆಯರು ಅದೇ ಗ್ರಾಮದ ಜನರ ದೃಷ್ಟಿಯಲ್ಲಿ ಹೇಗೆ ಮಾಟಗಾತಿಯಾದರು. ಅವರ ಮೇಲೆ ಅವರ ಸಂಬಂಧಿಕರು ಮತ್ತು ನೆರೆಹೊರೆಯವರು ಏಕೆ ಹಲ್ಲೆ ಮಾಡಿದರು. ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಏಕೆ ಕೊಂದರು. ಇದೆಲ್ಲವೂ ತಿಳಿಯಲೇಬೇಕಾದ ಮುಖ್ಯ ಸಂಗತಿಗಳು.
ಆ ಕರಾಳ ರಾತ್ರಿಯಲ್ಲಿ ದುರುಳದ ದಾಳಿಯಲ್ಲಿ ಬದುಕುಳಿದವರು ಮದನಿ ಖಲ್ಖೋ ಅವರ ಸೊಸೆ ಉಷಾ ಖಲ್ಖೋ ಅವರು ತಾನು ನೋಡಿದ ಭಯಾನಕ ಕೃತ್ಯವನ್ನು ವಿವರಿಸಿದ್ದಾರೆ. “ಅಂದು ನಾನು ನನ್ನು ಐದು ತಿಂಗಳ ಮಗುವಿನೊಂದಿಗೆ ಗ್ರಾಮಕ್ಕೆ ಬಂದೆ. ಆ ವೇಳೆಗೆ, ಸುಮಾರು 150 ಜನರು ನಮ್ಮ ಮನೆಗಳ ಹೊರಗೆ ಜಮಾಯಿಸಿದ್ದರು. ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಿದರು. ಈ ವೇಳಗಾಗಾಲೇ ಮೂವರು ಮಹಿಳೆಯರನ್ನು ಕೊಂದಿದ್ದರು. ಆ ಗುಂಪು ಮನೆಯ ಬಾಗಿಲು ಮುರಿದು, ನನ್ನ ಅತ್ತೆ ಮದನಿ ಖಲ್ಖೋ ಅವರನ್ನು ಹೊರಗೆ ಎಳೆದುಕೊಂಡು ಬಂದು, ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ನಡುರಸ್ತೆಗೆ ಎಳೆದೊಯ್ದು, ಆಕೆಯ ಬಟ್ಟೆಗಳನ್ನು ಹರಿದು, ದೊಡ್ಡ ಕಲ್ಲನ್ನು ಆಕೆಯ ತಲೆ ಮೇಲೆ ಹಾಕಿದರು” ಎಂದು ಹೇಳಿದರು.
ಘಟನೆ ಬಗ್ಗೆ ಮಾತನಾಡಿದ ಮದನಿ ಖಾಲ್ಖೋ ಅವರ ಮಗ ಕರಮದೇವ್ ಖಲ್ಖೋ, “ಮದಿನಿ ಅವರು ಎಲ್ಲರೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು. ಎಲ್ಲರೂ ಆಕೆಯನ್ನು ಗೌರವಿಸುತ್ತಿದ್ದರು. ಆದರೆ, ವಾಮಾಚಾರದ ಆರೋಪ ಮಾಡಿ ಆಕೆಯನ್ನು ಕೊಂದು ಬಿಟ್ಟರು” ಎಂದು ಹೇಳಿದ್ದಾರೆ.
“ಆ ದಿನ ನಾನು ರಾಂಚಿಯಿಂದ ಹಿಂತಿರುಗಿದ್ದೆ. ಆ ಗುಂಪು ಬಂದಾಗ ಮಧ್ಯಾಹ್ನ 12 ಗಂಟೆಯಾಗಿತ್ತು. ಅವರು ನನ್ನ ಪೋಷಕರು ಮಲಗಿದ್ದ ಇನ್ನೊಂದು ಕೋಣೆಯ ಬಾಗಿಲು ಮುರಿದು ನನ್ನ ತಾಯಿಯನ್ನು ಎಳೆದೊಯ್ದರು. ಗ್ರಾಮಸ್ಥರು ಆಕೆಯನ್ನು ಕೊಲ್ಲುತ್ತಾರೆಂದು ಯೋಚಿಸಲಿಲ್ಲ. ಆದರೆ, ಕೊಂದೇಬಿಟ್ಟರು” ಎಂದು ಕಣ್ಣೀರು ತುಂಬಿಕೊಂಡರು.
ಕರಮ್‌ದೇವ್ ಖಲ್ಖೋ ಪ್ರಕಾರ, ಭಯಂಕರ ಘಟನೆಯ ನಡೆಯುವ ಕೆಲ ದಿನಗಳ ಮುಂಚೆ ಬಿಪಿನ್ ಖಲ್ಖೋ ಎಂಬ ಹುಡುಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಆತನ ಮರಣದ ನಂತರ ವಾಮಾಚಾರದ ಪಿಸುಮಾತುಗಳು ಗ್ರಾಮದಲ್ಲಿ ಹರಡಿದ್ದವು. ಬಾಲಕನ ಸಾವಿನ ಹೊಣೆಯನ್ನು ಈ ಐವರು ಮಹಿಳೆಯರ ಮೇಲೆ ಅನ್ಯಾಯವಾಗಿ ಹೊರಿಸಲಾಯಿತು. ಉದ್ರಿಕ್ತ ಜನರ ಗುಂಪು ಆ ಐವರನ್ನು ಕಿರುಕುಳ ನೀಡಿ, ಥಳಿಸಿ, ಕೊಂದರು.
ಘಟನೆಯ ಬಗ್ಗೆ ವಿವರಿಸಿರುವ ರಾಕಿಯಾ ಅವರ ಮಗ ಮತ್ತು ಟಿಟ್ರಿಯ ಸಹೋದರ ಜೋಹಾನ್ ಒರಾನ್, “ಏನಾಯಿತು ಎಂದು ನಮಗೆ ಅರ್ಥವಾಗಲಿಲ್ಲ. ಆ ದಿನ ಎಲ್ಲವೂ ಸರಿಯಾಗಿತ್ತು. ನಾನು ಜಮೀನಿಗೆ ಹೋಗಿದ್ದೆ. ಹಿಂದಿರುಗಿದಾ ಜನರ ಗುಂಪು ಮದ್ಯಪಾನಮತ್ತವಾಗಿತ್ತು. ಕೆಲವರು ಗ್ರಾಮದ ಹೆಚ್ಚಿನ ಯುವಕರಿಗೆ ಕುಡಿಸುತ್ತಿದ್ದರು. ನಂತರ, ಆ ಕುಡುಕ ಗುಂಪು ಮಹಿಳೆಯರನ್ನು ಕೊಲ್ಲಲು ಸಜ್ಜಾಗಿತ್ತು. ಆದರೆ, ಅದು ನನ್ನ ಅರಿವಿಗೆ ಬರಲಿಲ್ಲ” ಎಂದು ಹೇಳಿದ್ದಾರೆ.
“ನಾವು ಮಲಗಿದ್ದೆವು, ಇದ್ದಕ್ಕಿದ್ದಂತೆ ಗಲಾಟೆ ಶುರುವಾಯಿತು. ಗ್ರಾಮಸ್ಥರು ಬಾಗಿಲು ಒಡೆದು ನನ್ನ ತಾಯಿಯನ್ನು ಹೊರಗೆ ಎಳೆದೊಯ್ದರು. ನಂತರ, ಅವರು ನನ್ನ ತಂಗಿಯನ್ನು ಹುಡುಕಿ, ಎಳೆದೊಯ್ದರು. ಇಬ್ಬರನ್ನೂ ಕೊಂದುಬಿಟ್ಟರು” ಎಂದು ಮದನಿ ಖಲ್ಖೋ ಅವರ ಪುತ್ರಿ ಸಿಬಿ ಖಲ್ಖೋ ದುರ್ಘಟನೆಯನ್ನು ನೆನಪಿಸಿಕೊಂಡರು.
ಕೇವಲ ಮೂಢನಂಬಿಕೆಯ ಕಾರಣಕ್ಕೆ ಕೊಲೆಗಳು ನಡೆದಿಲ್ಲ
ಕೊಲೆಗಳು ಕೇವಲ ಮೂಢನಂಬಿಕೆಯ ಕಾರಣಕ್ಕೆ ನಡೆದಿಲ್ಲ. ಗ್ರಾಮದಲ್ಲಿ ಮದ್ಯ ಸೇವನೆ ವಿರುದ್ಧ ಐವರು ಮಹಿಳೆಯರು ದನಿ ಎತ್ತಿದ್ದು ಕೂಡ ಪ್ರಮುಖ ಕಾರಣವೆಂದು ಗ್ರಾಮದ ಮಂಜು ಖಲ್ಖೋ ಹೇಳಿದ್ದಾರೆ.
“ಜೆಸಿಂತಾ ನನ್ನ ಚಿಕ್ಕಮ್ಮ. ಆಕೆ ಮತ್ತು ಮದನಿ ಇಬ್ಬರೂ ಮುಕ್ತವಾಗಿ ಮಾತನಾಡುತ್ತಿದ್ದರು. ಅವರು ಬಹಿರಂಗವಾಗಿ ಮದ್ಯಪಾನ ಮಾಡುವವರನ್ನು ವಿರೋಧಿಸುತ್ತಿದ್ದರು. ಮದ್ಯಪಾನದ ವಿರುದ್ಧ ದನಿ ಎತ್ತಿದ್ದರು. ಬಹುಶಃ ಅವರ ದನಿ ಬಹಳಷ್ಟು ಪುರುಷರಯಲ್ಲಿ ದ್ವೇಷ ಹುಟ್ಟಿಸಿತ್ತು” ಎಂದು ಮಂಜು ತಿಳಿಸಿದ್ದಾರೆ.
“ಐವರು ಮಹಿಳೆಯರು ಶಿಕ್ಷಣದ ಪರವಾಗಿಯೂ ಧ್ವನಿಗೂಡಿಸಿದ್ದರು. ಅವರು ಯಾವಾಗಲೂ ಶಾಲೆಗೆ ಹೋಗುವ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು. ಅವರು ಹೆಣ್ಣುಮಕ್ಕಳೂ ಶಾಲೆಗೆ ಹೋಗಿ ಶಿಕ್ಷಣ ಪಡೆಯಬೇಕೆಂದು ಪ್ರತಿಪಾದಿಸುತ್ತಿದ್ದರು. ಕೆಲವು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನಿಲ್ಲಿಸಲು ಯತ್ನಿಸಿದ್ದ ಘಟನೆಗಳು ನನಗೆ ನೆನಪಿದೆ. ಆದರೆ, ಈ ಮಹಿಳೆಯರು ಮಧ್ಯಪ್ರವೇಶಿಸಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರ ಮನವೊಲಿಸುತ್ತಿದ್ದರು” ಎಂದು ಮಂಜು ಹೇಳಿದ್ದಾರೆ.
ಆ ದುರ್ಘಟನೆಯ ಬಗ್ಗೆ ಮಾತನಾಡಿರುವ ಆಶಾ ಎನ್‌ಜಿಒದ ಸಂಚಾಲಕ ಅಜಯ್ ಜೈಸ್ವಾಲ್, “ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮುಕ್ತವಾಗಿ ಮಾತನಾಡುವ ಮಹಿಳೆಯರ ವಿರುದ್ಧ ವಾಮಾಚಾರದ ಆರೋಪ ಮಾಡಲಾಗುತ್ತದೆ. ಕಂಜಿಯಾ ನಂತರವೂ ಹಲವು ಮಹಿಳೆಯರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ ಕೆಲವು ಮಹಿಳೆಯರು ಸಮಾಜದಲ್ಲಿ ಸಕ್ರಿಯ ನಾಯಕರಾಗಿದ್ದರು ಎಂದು ನಾವು ಕಂಡುಕೊಂಡಿದ್ದೇವೆ. ಅವರು ಮದ್ಯಪಾನದ ವಿರುದ್ಧ ಚಳುವಳಿಯನ್ನು ಮುನ್ನಡೆಸಿದ್ದವರು” ಎಂದು ಒತ್ತಿ ಹೇಳಿದರು.
150 ಮಂದಿ ವಿರುದ್ಧ ಎಫ್‌ಐಆರ್; ಆದರೆ ಶೀಘ್ರದಲ್ಲೇ ಜಾಮೀನು
ಐವರು ಮಹಿಳೆಯರ ಹತ್ಯೆಯ ನಂತರ, ಜಾರ್ಖಂಡ್ ಪೊಲೀಸರು 150 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಶೀಘ್ರದಲ್ಲೇ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಆರೋಪಿಗಳನ್ನು ಬಂಧಿಸಲು ಪೊಲೀಸರು ಬಂದಾಗ ಅವರು ‘ಏನೋ ಗಮನಾರ್ಹವಾದುದನ್ನು’ ಮಾಡಿದಂತೆ ‘ತಮ್ಮ ದಾರಿಯಲ್ಲಿ ನಟಿಸಿದರು’ ಎಂದು ರಾಕಿಯಾ ಅವರ ಪುತ್ರ ಜೋಹಾನ್ ಓರಾನ್ ವಿವರಿಸಿದರು.
ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ