ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ರಾತ್ರೋ ರಾತ್ರಿ ಕಳ್ಳರು ಕದ್ದಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬ್ಯಾಲ್ಯಾಳ ಗ್ರಾಮದ ಮೈಲಾರಪ್ಪ ಕುರಗುಂದ ಎಂಬ ರೈತ ಅವರ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ಕಳ್ಳರು (ಡಿ.30) ಹೊಲದಲ್ಲಿನ ಹತ್ತಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.
ಮುಂಜಾನೆ ಹತ್ತಿ ಬಿಡಿಸುವ ಯೋಚನೆಯಲ್ಲಿ ರೈತ ಮಲ್ಲಪ್ಪ ಜಮೀನಿಗೆ ಬಂದಾಗ ಹೊಲದಲ್ಲಿನ ಹತ್ತಿ ಇಲ್ಲದನ್ನು ನೋಡಿ ಗಾಬರಿಯಾಗಿದ್ದಾರೆ. ಹತ್ತಿ ಬೆಳೆ ಫಸಲು ನೀಡಲು ಆರಂಭದಿಂದ ಒಂದು ಬಾರಿ ಹತ್ತಿ ಬೀಡಿಸಿ ಮಾರಾಟ ಮಾಡಿದ್ದರು, ಎರಡನೇ ಬಾರಿ ಬೀಡಿಸಬೇಕಾಗಿತ್ತು. ಆದರೆ, ಮನೆಯಲ್ಲಿನ ಇತರೇ ಕೆಲಸ ಕಾರ್ಯಗಳಿಂದ ಮತ್ತು ಆಳು ಸಿಗದ ಕಾರಣ ಹಾಗೇ ಬಿಟ್ಟಿದ್ದರು. ಈಗ ನಾಲ್ಕರಿಂದ ಐದು ಕ್ವಿಂಟಲ್ ಹತ್ತಿ ಕಳ್ಳರ ಪಾಲಾಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಖದೀಮರ ಈ ಕೃತ್ಯದಿಂದ ಬ್ಯಾಲ್ಯಾಳ ಗ್ರಾಮದ ರೈತರು ಬೆಚ್ಚಿಬಿದಿದ್ದಾರೆ. ಇಷ್ಟು ದಿನದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಫಸಲು ಕಳ್ಳತನವಾಗಿದ್ದು, ಆಟೋ ರಿಕ್ಷಾ ತಂದು ಹತ್ತಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಹೀಗಾದರೆ ನಾವು ಬೆಳೆ ಬೆಳೆಯುವುದಾದರೂ ಹೇಗೆ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಸಲು ಕದ್ದ ಕಳ್ಳರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿ, ನಮ್ಮ ಆತಂಕವನ್ನು ದೂರ ಮಾಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.