ಶೌರ್ಯ ದಿನದ ಸಂಕೇತವಾದ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಜನವರಿ 7 ರಂದು ದಲಿತ್ ಯುನಿಟಿ ಮೂವ್ಮೆಂಟ್ ವತಿಯಿಂದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.
ಬೀದರ್ ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ದಲಿತ ಯುನಿಸಿ ಮೂವ್ಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ ರಾವಣ ಮಾತನಾಡಿ, “ಜಗತ್ತಿನಲ್ಲಿ ಆಸ್ತಿ, ಅಧಿಕಾರ, ಸಂಪತ್ತಿಗಾಗಿ ಅನೇಕ ಸಂಘರ್ಷಗಳು ನಡೆದಿವೆ, ಆದರೆ ಭೀಮಾ ಕೋರೆಗಾಂವ್ ನಲ್ಲಿ ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ದವಾಗಿದೆ. ಅಂತಹ ಸ್ವಾಭಿಮಾನಿ ವೀರರಿಗೆ ವಂದನೆ ಸಲ್ಲಿಸುವ ಉದ್ದೇಶದಿಂದ ದಲಿತ್ ಯುನಿಟಿ ಮೂವ್ಮೆಂಟ್ ಕುಸ್ತಿ ಪಂದ್ಯಾವಳಿ ಆಯೋಜಿಸುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತಿದೆ” ಎಂದು ತಿಳಿಸಿದರು.
ದಲಿತ್ ಯುನಿಟಿ ಮೂವ್ಮೆಂಟ್ ಸಂಸ್ಥಾಪಕ ವಿನೋದ್ ರತ್ನಾಕರ್ ಮಾತನಾಡಿ, “ಭೀಮಾ ಕೋರೆಗಾಂವ್ ನಲ್ಲಿ ಐನೂರು ಮಹರ್ ಸೈನಿಕರು, ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಪೇಶ್ವೆ ಸೈನ್ಯ ಬಲದ ವಿರುದ್ಧ ನಿರಂತರ ಹನ್ನೆರಡು ಗಂಟೆಗಳ ಕಾಲ ಹೋರಾಡಿದ ಸ್ಮರಣೀಯ ಕದನವಾಗಿದೆ. ಇದೀಗ 206 ನೇ ವರ್ಷದ ಭೀಮಾ ಕೋರೆಗಾಂವ ವಿಜಯೋತ್ಸವ ನಿಮಿತ್ಯವಾಗಿ ಬೀದರ್ ನಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಆಸ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು” ಹೇಳಿದರು.
ಸಭೆಯಲ್ಲಿ ಬೀದರ್ ಜಿಲ್ಲಾಧ್ಯಕ್ಷ ಆನಂದ್ ಮಸಿಮಾಡೆ ಸೇರಿದಂತೆ ಪ್ರಮುಖರಾದ ಸಂವಿಧಾನ ಶಿಂಧೆ, ಆಕಾಶ್ ಶಿಂಧೆ, ಸಿದ್ಧಾರ್ಥ್ ಗೌರೆ, ರಾಘವೇಂದ್ರ ಭಾವಿದೊಡ್ಡಿ, ಉಮೇಶ್ ರಮೇಶ್ ಮಾಲೆ, ಬಾಬು ಕೊಹಿರ್, ಸಕ್ಪಾಲ್ ಕಾಂಬ್ಳೆ, ದರ್ಶನ್, ಸುಧಾಕರ್, ಶ್ರೀನಿವಾಸ್ ಇದ್ದರು.