ಬೀದರ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ 2022ನೇ ಸಾಲಿಗೆ ಹೋಲಿಸಿದರೆ 2023ನೇ ಸಾಲಿನಲ್ಲಿ ಕಡಿಮೆಯಾಗಿದ್ದು, ಇದಕ್ಕೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.
ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ, “ಕೊಲೆ, ಅತ್ಯಾಚಾರ, ಗಲಭೆ, ಗಾಯದ ಗಲಾಟೆ, ಮಹಿಳೆಯರಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಶೇ 14% ರಷ್ಟು ಹಾಗೂ ಸ್ವತ್ತಿನ ಅಪರಾಧಗಳಾದ ಸುಲಿಗೆ, ದರೋಡೆ ಪ್ರಕರಣಗಳು ಶೇ 60.84% ರಷ್ಟು ಕಡಿಮೆಯಾಗಿದೆ. ಸುಮಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ 77 ಜನ ತಲೆಮರಿಸಿಕೊಂಡಿದ್ದ ಆರೋಪಿತರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ” ಎಂದರು.
“2023ನೇ ಸಾಲಿನಲ್ಲಿ 800 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ, 305 ಮೊಬೈಲ್‌ಗಳನ್ನು ವಾರಸುದಾರರ ಹಿಂದುರುಗಿಸಲಾಗಿದೆ, ಉಳಿದವುಗಳನ್ನು ಹಿಂದಿರುಗಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಸಂಘಟಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ವಿಶೇಷ ತಂಡಗಳಾದ ರೌಡಿ ನಿಗೃಹ ದಳ ಮತ್ತು ಮಾದಕ ವಸ್ತು ಪ್ರತಿಬಂಧಕ ದಳ ರಚಿಸಿ ಹೆಚ್ಚಿನ ದಾಳಿ ಮಾಡಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಮಾಹಿತಿ ನೀಡಿದರು.
“ಅಕ್ರಮವಾಗಿ ಮಾರಾಟ ಮಾಡುವ ಜಾಲದ ಮೇಲೆ ವಿಶೇಷ ನಿಗಾ ವಹಿಸಿ ದಾಳಿಯನ್ನು ಮಾಡಿ 93 ಪ್ರಕರಣಗಳನ್ನು ದಾಖಲಿಸಿ ಒಟ್ಟು 267 ಜನರ ಮೇಲೆ ಕ್ರಮಕೈಗೊಂಡು ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಮಾಧಕ ವಸ್ತುಗಳ ಸಾಗಾಣಿಕೆಗಳಲ್ಲಿ ಒಟ್ಟು 32 ಪ್ರಕರಣಗಳನ್ನು ದಾಖಲಿಸಿ ಅದರಲ್ಲಿ 15.13 ಕೋಟಿ ಮೌಲ್ಯದ ಮಾಧಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸೈಬರ್ ವಂಚನೆ 26 ಪ್ರಕರಣಗಳನ್ನು ಭೇದಿಸಿ 51.83 ಲಕ್ಷ ರೂ. ಹಿಂದಿರುಗಿಸಲಾಗಿದೆ” ಎಂದರು.
ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಜುಲೈ 2023 ರಿಂದ ರಸ್ತೆ ಸುರಕ್ಷತೆ ಬಗ್ಗೆ ವಿಶೇಷ ಅಭಿಯಾನ ಪ್ರಾರಂಭಿಸಿ ಮಾರಣಾಂತಿಕ ಅಪಘಾತದಲ್ಲಿ ಶೇ 14.44%, ಮತ್ತು ಮಾರಣಾಂತಕವಲ್ಲದ ಅಪಘಾತಗಳಲ್ಲಿ ಶೇ 24.60% ರಷ್ಟು ಇಳಿಮುಖವಾಗಿದೆ. ಜಿಲ್ಲೆಯ ವಿವಿದೆಡೆ ಒಟ್ಟು 9 ಮತ್ತು ಮಹಾರಾಷ್ಟ್ರದ ಉದಗೀರ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಂದು ಸೇರಿ ಒಟ್ಟು 22 ಸ್ವತ್ತಿನ, ಕಳವು ಮತ್ತು ಮಾದಕ ಪದಾರ್ಥ ಹಾಗೂ ಗಾಂಜಾ ಪ್ರಕರಣಗಳಲ್ಲಿ ಒಟ್ಟು 17 ಜನ ಆರೋಪಿತರನ್ನು ಪತ್ತೆ ಮಾಡಿ ಒಟ್ಟು 90 ಲಕ್ಷ ರೂ.ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು.
“2024ನೇ ಸಾಲಿನಲ್ಲಿ ಸಮುದಾಯ ಸಹಭಾಗಿತ್ವದ ಪೊಲೀಸಿಂಗ್ ಮುಖಾಂತರ ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳನ್ನು ತಡೆಗಟ್ಟುವ ಯೋಜನೆ ರೂಪಿಸಲಾಗುವುದು ಹಾಗೂ ಅಕ್ಕ ಪಡೆ, ಸೈಬರ್ ಅಪರಾಧಗಳು, ಕೆಕೆಆರ್‌ಡಿಬಿ ಅನುದಾನ, ಮನೆಗಳಲ್ಲಿ ಸಿಸಿಟಿ ಅಳವಡಿಕೆ ಜಾಗೃತಿ, ರಸ್ತೆ ಸುರಕ್ಷತೆ, ತಂತ್ರಜ್ಞಾನ ಚಾಲಿತ ಪೋಲಿಸಿಂಗ್, ಡ್ರಗ್ಸ್ ವಿರೋಧಿ ಸಮಿತಿಗಳನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ನಾಳೆಯಿಂದ ಪೆಟ್ರೋಲ್, ಡಿಸೇಲ್ ಸಿಗುತ್ತದೆ; ಸುಳ್ಳು ಸುದ್ದಿಗೆ ಕಿವಿಗೊಡಬಾರದು : ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ ಮತ್ತು ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ ಶಿವನಗೌಡ ಪಾಟೀಲ್, ಗಾಂಧಿಗಂಜ್ ಠಾಣೆಯ ಇನ್ಸಪೇಕ್ಟರ್ ಹನುಮರೆಡ್ಡಿ, ಹುಮನಾಬಾದ ಇನ್ಸಪೇಕ್ಟರ್ ಗುರು ಪಾಟೀಲ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.