ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಶೀಘ್ರವೇ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಶ್ರೀರಂಗಪಟ್ಟಣದಲ್ಲಿ ಒಂದು ಸಮುದಾಯದ ಕುರಿತು ಅವಹೇಳನವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಬಗ್ಗೆ ಈಗಾಗಲೇ ಸರಕಾರದಲ್ಲಿ ಚರ್ಚೆ ನಡೆದಿದೆ . ಯಾರೇ ತಪ್ಪು ಮಾಡಿದರೂ ನಮ್ಮ ಆಡಳಿತದಲ್ಲಿ ಶಿಕ್ಷೆ ಆಗಬೇಕು . ಆತ ಏನು ಮೇಲಿಂದ ಇಳಿದು ಬಂದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ, ಒಂದು ಸಮುದಾಯದ ಮಹಿಳೆಯರ ವಿರುದ್ದ ಹೇಳಿಕೆ ನೀಡಿದ್ದು ಖಂಡನೀಯ” ಎಂದರು.
“ಸಿಎಂ ಸಿದ್ಧರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಯಾರೂ ದೊಡ್ಡವರಲ್ಲ. ಯಾರನ್ನು ಪೋಷಣೆ ಮತ್ತು ಪಾಲನೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಲಾಗುವುದು, ಈ ವಿಚಾರದಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ನಾಲ್ಕು ದಿನ ತಡವಾದರೂ ಆತನ ಮೇಲೆ ಕ್ರಮ ಆಗೇ ಆಗುತ್ತದೆ” ಎಂದು ಹೇಳಿದರು.
ಕನ್ನಡ ಪರ ಹೋರಾಟಕ್ಕೆ ಬೆಂಬಲ ಇದೆ:
ಕನ್ನಡ ಹೋರಾಟಗಾರರ ಬಂಧನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಹೋರಾಟ ಮಾಡಲು ನಮ್ಮ ಬೆಂಬಲ ಇದೆ. ಆದರೆ ಹೋರಾಟದ ಜೊತೆಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಕನ್ನಡ ನಾಫಲಕಗಳನ್ನು ಶೇ 40% ರಷ್ಟು ಕನ್ನಡ ಕಡ್ಡಾಯಕ್ಕಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಇದೆ. ಆದರೆ ಕಾನೂನು ತೊಡಕುಗಳನ್ನು ಸರಿಪಡಿಸಿ ಸುತ್ತೋಲೆ ಹೊರಡಿಸಲು ಫೆಬ್ರವರಿಯೊಳಗೆ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಸರಕಾರದ ಗಮನಕ್ಕೆ ತರದೆ ಕನ್ನಡ ಹೋರಾಟಗಾರರು ಮುಂದಾಗಿದ್ದು ಸರಿಯಲ್ಲ” ಎಂದು ಹೇಳಿದರು.