ಖಾತೆ ಮಾಡಿಕೊಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು 70,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರದ ಕೋನಪ್ಪನ ಅಗ್ರಹಾರದ ಎಚ್.ಎಂ ಪ್ರಕಾಶ್ ಎಂಬವವರ ಬಳಿ ಗ್ರಾಮ ಲೆಕ್ಕಾಧಿಕಾರಿ ಜತ್ತಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪ್ರಕಾಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕಾಶ್ ಅವರ ಸಹೋದರ ಮೃತಪಟ್ಟಿದ್ದರಿಂದ, ಜಮೀನನ್ನು ಮೃತ ಸಹೋದರನ ಮಗಳ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಪ್ರಕಾಶ್ ಮುಂದಾಗಿದ್ದರು. ಅದಕ್ಕಾಗಿ, ಗ್ರಾಮ ಲೆಕ್ಕಾಧಿಕಾರಿ ಜತ್ತಪ್ಪ ಅವರನ್ನು ಸಂಪರ್ಕಿಸಿದ್ದರು. ಪೌತಿ ಖಾತೆ ಮಾಡಿಕೊಡಲು 2 ಲಕ್ಷ ರೂ. ಲಂಚ ಕೊಡಬೇಕೆಂದು ಜತ್ತಪ್ಪ ಬೇಡಿಕೆ ಇಟ್ಟಿದ್ದರು. ಮಾತ್ರವಲ್ಲದೆ, ಅಂದೇ 10,000 ರೂ. ಹಣವನ್ನು ಪಡೆದುಕೊಂಡಿದ್ದರು.
ಪ್ರಕಾಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಬಳಿಕ, ಪೊಲೀಸರು ಜತ್ತಪ್ಪ ಅವರಿಗೆ 70,000 ರೂ. ಹಣ ನೀಡಲು ಪ್ರಕಾಶ್ ಅವರನ್ನು ಕಳುಹಿಸಿದ್ದರು. ಜತ್ತಪ್ಪ ಲಂಚ ಪಡೆಯುವ ವೇಳೆ ಕಾರ್ಯಾಚರಣೆ ನಡೆಸಿ, ಸಾಕ್ಷಿ ಸಮೇತ ಆತನನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಅಡಿ ಪ್ರಕರಣ ದಾಖಲಿಸಲಾಗಿದೆ.