ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 15ನೇ ಆವೃತ್ತಿಯ ಸಂಘಟನಾ ಸಮಿತಿ ಸಭೆ ಬುಧವಾರ ನಡೆದಿದ್ದು, 15ನೇ ಚಲನಚಿತ್ರೋತ್ಸವವನ್ನು ಫೆಬ್ರವರಿ 29ರಿಂದ ಮಾರ್ಚ್ 7ರ ವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ.
ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯ ಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ನಿರ್ಧರಿಸಲಾಗಿದೆ.
ಸಂಘಟನಾ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರತಿ ವರ್ಷ ಫೆಬ್ರವರಿ, ಮಾರ್ಚ್ ಮಾಹೆಯಲ್ಲಿ ಚಿತ್ರೋತ್ಸವವನ್ನು ಏರ್ಪಡಿಸುತ್ತಿದ್ದು, ಈ ಬಾರಿಯೂ ಫೆಬ್ರವರಿ / ಮಾರ್ಚ್ ತಿಂಗಳಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಏರ್ಪಡಿಸಲು ತಾತ್ಕಾಲಿಕ ದಿನಾಂಕಗಳ ವೇಳಾಪಟ್ಟಿ ಮಾಡಿಕೊಳ್ಳಲಾಗಿದೆ.
ಫೆಬ್ರವರಿ 29 ರಂದು ಗುರುವಾರ ಸಂಜೆ ಮುಖ್ಯಮಂತ್ರಿಗಳಿಂದ ಉದ್ಘಾಟನಾ ಸಮಾರಂಭ. ಮಾರ್ಚ್ 01 ರಿಂದ 07 ರವರೆಗೆ ಚಿತ್ರೋತ್ಸವದ ಚಲನಚಿತ್ರ ಪ್ರದರ್ಶನ. ಮಾರ್ಚ್ 07 ರಂದು ಗುರುವಾರ ಸಂಜೆ ರಾಜ್ಯಪಾಲರಿಂದ ಸಮಾರೋಪ ಸಮಾರಂಭ.
ಈ ಸುದ್ದಿ ಓದಿದ್ದೀರಾ? ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
ಉದ್ಘಾಟನಾ ಸಮಾರಂಭವನ್ನು ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗುವುದು. ಸಮಾರೋಪ ಸಮಾರಂಭವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗುವುದು. ಚಲನಚಿತ್ರೋತ್ಸವ ಆಯೋಜನೆಗೆ 1.61 ಕೋಟಿ ರೂ. ಲಭ್ಯವಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.
ಲೀಲಾವತಿ, ಭಗವಾನ್ ಮತ್ತು ಸಿ.ವಿ. ಶಿವಶಂಕರ್ ಮೊದಲಾದ ಕನ್ನಡ ಚಿತ್ರರಂಗದ ಅಗಲಿದ ಗಣ್ಯರಿಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೂ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಒರಿಯನ್ ಮಾಲ್ ನಲ್ಲಿರುವ ಪಿವಿಆರ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುವುದು.