ಎಲ್ಲಾ ಕಾರ್ಮಿಕ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ಜ.23ರಿಂದ 25ವರೆಗೆ ಮೂರು ಹಂತದ ಹೋರಾಟಗಳನ್ನು ರೂಪಿಸಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷ ಎಸ್. ವರಲಕ್ಷ್ಮೀ ಹೇಳಿದರು.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕರನ್ನು ಒಕ್ಕಲೆಬ್ಬಿಸಲು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಹೊರಟಿದೆ. ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಬದಲು ಅನುದಾನ ಕಡಿತಗೊಳಿಸುವ ಮೂಲಕ ಅಭದ್ರಗೊಳಿಸಲು ಮುಂದಾಗಿದೆ ಎಂದರು.
ಜ. 23ರಂದು ಕೇಂದ್ರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರಾಜ್ಯದ ಎಲ್ಲಾ ಸಂಸದರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ. ಅಂಗನವಾಡಿ, ಬಿಸಿಯೂಟ, ಉದ್ಯೋಗ ಖಾತ್ರಿ, ಆಶಾ ಕಾರ್ಯಕರ್ತೆಯರು, ಮಕ್ಕಳ ಹಕ್ಕುಗಳ ರಕ್ಷಣಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಂದ ಪ್ರತಿಭಟನೆ ನಡೆಸಲಾಗುತ್ತದೆ. ಒಂದು ಕೋಟಿ ಜನರು ಕಾರ್ಯನಿರ್ವಹಿಸುತ್ತಿದ್ದ ಕನಿಷ್ಟವೇತನ ನೀಡದೇ ವಂಚಿಸಲಾಗುತ್ತಿದೆ.
ನರೇಂದ್ರ ಮೊದಿ ಸರ್ಕಾರ ಬಂದ ಬಳಿಕ ಶೇ.90ರಷ್ಟು ನೀಡಲಾಗುತ್ತಿದ್ದ ಸ್ಕೀಂ ಯೋಜನೆಗಳ ಅನುದಾನವನ್ನು 60ಕ್ಕೆ ಇಳಿಸಲಾಗಿದೆ. 48 ಲಕ್ಷ ಅಂಗನವಾಡಿ, 20 ಲಕ್ಷ ಬಿಸಿಯೂಟ, 20 ಲಕ್ಷ ಆಶಾ ಕಾರ್ಯಕರ್ತೆಯರು ಸೇರಿ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಟ ವೇತನ ನಿಡುತ್ತಿಲ್ಲ. 14ಲಕ್ಷ ಬಂಡವಾಳಗಾರರಿಗೆ ಶೇ.2ರಷ್ಟು ಕರ ವಿಧಿಸಿದರೆ ಕನಿಷ್ಟ ವೇತನಕ್ಕೆ ಬೇಕಿರುವ ಅನುದಾನ ಕ್ರೋಢಿಕರಿಸಬಹುದು. ಆದರೂ ಸರ್ಕಾರ ಆಸಕ್ತಿ ತೋರುತ್ತಿಲ್ಲ.
ಜ.24ರಂದು ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಎಲ್‌ಐಸಿ ಪ್ರತಿನಿಧಿಗಳು ಸೇರಿದಂತೆ ಕಾರ್ಮಿಕರು ಸಂಸದರ ಮನೆ ಮುಂದೆ ಧರಣ ನಡೆಸಲಿದ್ದಾರೆ. 25ರಂದು ಹಮಾಲಿ, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿ ಅಸಂಘಟಿತ ವಲಯ ಕಾರ್ಮಿಕರುಗಳು ಪ್ರತಿಭಟನೆ ನಡೆಸಲಿದ್ದಾರೆ. ಕಾರ್ಮಿಕ ಕಾಯ್ದೆಗಳನ್ನು ಮುಕ್ತಾಯಗೊಳಿಸಿ ನಾಲ್ಕು ಸಂಹಿತೆಗಳಾಗಿ ಜಾರಿಗೊಳಿಸಿ ಕಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದರು.
31ಸಾವಿರ ಕನಿಷ್ಟ ವೇತನ ನೀಡುವಂತೆ ಒತ್ತಾಯಿಸಲಾಗಿದೆ. ಆದರೆ, ಸರ್ಕಾರ ಕಾರ್ಮಿಕರ ಮಾಂಸದ ವೆಚ್ಚದ ಅನುದಾನ ಕತ್ತರಿ ಹಾಕಿ ಕನಿಷ್ಟ ವೇತನವನ್ನು 21ಸಾವಿರ ರೂ. ನಿಗಧಿಗೊಳಿಸುವ ಕುತಂತ್ರ ನಡೆಸಲಾಗುತ್ತಿದೆ. ಒಂದೇ ದೇಶ ಎಂದು ಹೇಳುವ ಪ್ರಧಾನಿಗಳು ದೇಶದ ಎಲ್ಲಾ ಗುತ್ತಿಗೆ ನೌಕರರಿಗೆ ಒಂದೇ ಕನಿಷ್ಟ ವೇತನ ಜಾರಿಗೊಳಿಸಲಿ ಎಂದರು.
ಸ್ವಾಮಿ ವಿವೇಕಾನಂದ ಜನ್ಮದಿನದ ಅಂಗವಾಗಿ ಜ.12ರಂದು ಒಂದು ಕೊಟಿ ಸಹಿ ಸಂಗ್ರಹ ಚಳುವಳಿಯನ್ನು ನಡೆಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಸಹಿ ಸಂಗ್ರಹದಲ್ಲಿ ಅಸಂಘಟಿತ, ಹಾಗೂ ಗುತ್ತಿಗೆ ನೌಕರರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಬದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ಜಿಲ್ಲಾಧ್ಯಕ್ಷೆ ಎಚ್. ಪದ್ಮಾ, ವಿಜಯಲಕ್ಷ್ಮೀ, ಮರಿಯಮ್ಮ, ಡಿ.ಎಸ್. ಶರಣಬಸವ ಉಪಸ್ಥಿತಿದ್ದರು.