ಕಾನೂನು- ಶಿಸ್ತು ಪಾಲಿಸುವ ವಿಷಯದಲ್ಲಿ ಸರಕಾರ ರಾಜಕೀಯ ಲೆಕ್ಕಾಚಾರ ನಡೆಸುವುದು ಎಳ್ಳಷ್ಟೂ ಸರಿಯಲ್ಲ. ಹಾಗೆಯೇ ಕಾಂಗ್ರೆಸ್ ಒಳಗಿನ ನಾಯಕರ ಭಿನ್ನಮತ ಬಹಿರಂಗ ಕಾಳಗವಾಗಿ, ರಾಮ ಮಂದಿರ ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಸಮಾಜದ ಶಾಂತಿ ಕದಡಲು ದಾಳವಾಗುವುದೂ ಅಕ್ಷಮ್ಯ.
ಡಿಯರ್ ಕಾಂಗ್ರೆಸ್ ಲೀಡರ್ಸ್,
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಬಿಜೆಪಿಯವರು ಈ ಸಮಾರಂಭದ ಭರಪೂರ ‘ರಾಜಕೀಯ ಬೆಳೆ’ ತೆಗೆಯಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಇದನ್ನು ರಾಜಕೀಯವಾಗಿ ಹೇಗೆ ಎದುರಿಸುವುದು ಎಂದು ಗೊತ್ತಾಗದೆ ನಿಮ್ಮ ಪಕ್ಷ ಸಂಪೂರ್ಣ ಗೊಂದಲದಲ್ಲಿ ಮುಳುಗಿದೆ.
ಈ ಗೊಂದಲವನ್ನು ನೀವೇ ಕೈಯಾರೆ ಹೆಚ್ಚಿಸುತ್ತಿದ್ದೀರಿ ಎನ್ನುವುದು ವಿಪರ್ಯಾಸ! ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.
ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಇವತ್ತು ಒಂದು ಹೇಳಿಕೆ ನೀಡಿದ್ದಾರೆ. “ಅಯೋಧ್ಯೆಗೆ ರಾಮಮಂದಿರ ಉದ್ಘಾಟನೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು” ಎನ್ನುವುದು ಅವರ ಹೇಳಿಕೆ.
ಅದಕ್ಕೆ ಪ್ರತಿಕ್ರಿಯೆಯಾಗಿ ಗೃಹ ಸಚಿನ ಡಾ. ಪರಮೇಶ್ವರ್ ಇನ್ನೊಂದು ಹೇಳಿಕೆ ನೀಡಿದ್ದಾರೆ. “ಗೋಧ್ರಾ ರೀತಿಯ ಮತ್ತೊಂದು ದುರಂತ ಸಂಭವಿಸಲಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಗೃಹ ಇಲಾಖೆಗೂ ವಿಷಯ ಗೊತ್ತಿಲ್ಲ” ಎನ್ನುವುದು ಇವರ ಹೇಳಿಕೆ.
ಬಿಜೆಪಿ ಹಸು- ಹುಲಿ ಆಟ ಎಲ್ಲರಿಗೂ ಗೊತ್ತಿರುವುದೇ. ಆದರೆ ಅದನ್ನು ರಾಜಕೀಯವಾಗಿ ಎದುರಿಸಬೇಕಿರುವ ಕಾಂಗ್ರೆಸ್ ಪಕ್ಷ ಮಾಡುತ್ತಿರುವುದೇನು? ಗೋಧ್ರಾ ದುರಂತ ಎಷ್ಟು ಭಯಾನಕವಾದದ್ದು ಎನ್ನುವುದು ನಿಮಗೆ ಗೊತ್ತಿದೆಯೆ? ಅದರ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಎಷ್ಟು ಎಚ್ಚರದಿಂದ ಇರಬೇಕು ಎನ್ನುವ ಅರಿವು ನಿಮಗಿದೆಯೇ?
ಗೋಧ್ರಾ ದುರಂತದ್ದು ಒಂದು ಭೀಕರ ಕಹಿ ನೆನಪು. 2002ರ ಫೆಬ್ರುವರಿ 27 ರಂದು ಅಯೋಧ್ಯೆಯಿಂದ ಮರಳುತ್ತಿದ್ದ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ 59 ಮಂದಿ ಯಾತ್ರಿಕರು ಸುಟ್ಟು ಕರಕಲಾದರು.
ಅದರ ಬೆನ್ನಲ್ಲೇ ದೇಶದ ವಿವಿಧೆಡೆ ಭುಗಿಲೆದ್ದ ವ್ಯಾಪಕ ಹಿಂಸಾಚಾರದಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಪ್ರಾಣ ಕಳೆದುಕೊಂಡರು.
ಗೋಧ್ರಾ ದುರ್ಘಟನೆಯ ಕುರಿತು ನಾನಾವತಿ- ಮೆಹ್ತಾ ಆಯೋಗಗಳು ವಿಚಾರಣೆ ನಡೆಸಿದವು. 31 ಮುಸ್ಲಿಮರು ತಪ್ಪಿತಸ್ಥರು ಎಂದು ವರದಿ ಬಂತು. ತಪ್ಪಿತಸ್ಥರ ಶಿಕ್ಷೆಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿಯಿತು.
ಈಗ ಹರಿಪ್ರಸಾದ್ ಅವರು ಹೇಳುತ್ತಿರುವುದೇನು? ಕರ್ನಾಟಕದಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸಬಹುದು! ತಮಗೆ “ಈ ಕುರಿತು ಮಾಹಿತಿ ಇದ್ದೇ ಮಾತನಾಡುತ್ತಿದ್ದೇನೆ” ಎಂದೂ ಹರಿಪ್ರಸಾದ್ ಹೇಳಿದ್ದಾರೆ.
ಒಬ್ಬ ಹಿರಿಯ ಜವಾಬ್ದಾರಿಯುತ ಕಾಂಗ್ರೆಸ್ ನಾಯಕ ಈ ಮಾಹಿತಿಯನ್ನು ಪತ್ರಕರ್ತರ ಮುಂದೆ ಟಾಂ ಟಾಂ ಮಾಡುವ ಅಗತ್ಯ ಇದೆಯೇ? ಅವರ ಉದ್ದೇಶ ಏನು? ಇದೊಂದು ಗಂಭೀರ ಮಾಹಿತಿ ಎಂದಾದರೆ, ತಮ್ಮದೇ ಪಕ್ಷದ ಸರಕಾರದ ಗೃಹ ಸಚಿವರನ್ನು ಭೇಟಿಯಾಗಿ ಈ ಮಾಹಿತಿಯನ್ನು ಅವರಿಗೆ ತಿಳಿಸಬೇಕಿತ್ತು. ತಕ್ಷಣ ಪೊಲೀಸರನ್ನು ಎಚ್ಚರಿಸಿ, ಗುಪ್ತಚರ ಇಲಾಖೆಯನ್ನು ಕೆಲಸಕ್ಕೆ ಹಚ್ಚಿ ಇಂತಹ ಯಾವುದೇ ದುರಂತ ನಡೆಯದಂತೆ ತಡೆಯಲು ಯತ್ನಿಸಬೇಕಿತ್ತು.

ಆದರೆ ಇವರು ಮಾಡುತ್ತಿರುವುದೇನು? ಪತ್ರಿಕೆಗಳ ಮೂಲಕ ವದಂತಿ ಹರಡಿ ಜನರನ್ನು ಭಯಭೀತರನ್ನಾಗಿಸುವುದು. ಗೃಹ ಸಚಿವರೂ “ಈ ಬಗ್ಗೆ ನಮಗೆ ಮಾಹಿತಿಯೇ ಇಲ್ಲ” ಎನ್ನುವ ಮೂಲಕ ಸರಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ. ಕಾಂಗ್ರೆಸ್ ಮುಖಂಡರ ನಡುವಣ ರಾಜಕೀಯ ಭಿನ್ನಮತ, ಸಮಾಜದಲ್ಲಿ ಅಶಾಂತಿ ಹರಡಲು ಕಾರಣ ಆಗುತ್ತಿರುವುದು ನಿಜಕ್ಕೂ ನಮ್ಮ ದುರಂತ.
“ರಾಮ ಮಂದಿರ ಮಾತ್ರವಲ್ಲ, ಯಾವುದೇ ಧಾರ್ಮಿಕ ಸಮಾರಂಭಕ್ಕೆ ಹೋಗುವವರಿಗೆ ಸರಕಾರ ಪೂರ್ಣ ರಕ್ಷಣೆ ನೀಡುತ್ತದೆ. ಯಾವ ರೀತಿಯ ದುಷ್ಕೃತ್ಯಗಳಿಗೂ ರಾಜ್ಯದಲ್ಲಿ ಅವಕಾಶ ಕೊಡುವುದಿಲ್ಲ” ಎಂದು ಗೃಹ ಸಚಿವರು ಹೇಳಿದ್ದರೆ ಅದೊಂದು ಸಹಜ ಹೇಳಿಕೆ ಅನ್ನಿಸುತ್ತಿತ್ತು. ಅದು ಬಿಟ್ಟು, “ಗೃಹ ಇಲಾಖೆಗೆ ಯಾವ ಮಾಹಿತಿಯೂ ಇಲ್ಲ” ಎಂದರೆ ಜನರಲ್ಲಿ ಇನ್ನಷ್ಟು ಗೊಂದಲ, ಭೀತಿ ಉಂಟಾಗುವುದಿಲ್ಲವೆ?
ಹುಬ್ಬಳ್ಳಿಯಲ್ಲಿ ಕಳ್ಳಭಟ್ಟಿ, ಮಟ್ಕಾ ಕ್ರಿಮಿನಲ್ ಒಬ್ಬನನ್ನು ಬಂಧಿಸಿದ ಸರಕಾರದ ಕ್ರಮ ಸರಿಯಾಗಿಯೇ ಇದೆ. ಆತ ಅಯೋಧ್ಯೆ ಯಾತ್ರೆ ಹಿನ್ನೆಲೆಯ ಗಲಭೆಯಲ್ಲೂ ಆರೋಪಿ ಎನ್ನುವುದು ಕಾಕತಾಳೀಯ. ಈ ವಿಷಯದಲ್ಲಿ ಗೃಹ ಸಚಿವರು ಕಾನೂನು ಶಿಸ್ತು ಪಾಲಿಸುವ ಕುರಿತು ಕಟ್ಟುನಿಟ್ಟಿನ ಹೇಳಿಕೆ ನೀಡಿದ್ದಾರೆ. ಸ್ವಾಗತಾರ್ಹ.
ಆದರೆ ಅದೇ ಕಟ್ಟುನಿಟ್ಟಿನ ಕ್ರಮ ಕಲ್ಲಡ್ಕ ಪ್ರಭಾಕರ ಎಂಬ ಕೋಮುಗಲಭೆ ಪ್ರಚೋದಕ ವ್ಯಕ್ತಿಯ ವಿಷಯದಲ್ಲಿ ಏಕೆ ನಡೆಯುವುದಿಲ್ಲ? ಹುಬ್ಬಳ್ಳಿಗೊಂದು ನ್ಯಾಯ, ಕಲ್ಲಡ್ಕಕ್ಕೆ ಇನ್ನೊಂದು ನ್ಯಾಯ ಇದೆಯೇ?
ಕಾನೂನು- ಶಿಸ್ತು ಪಾಲಿಸುವ ವಿಷಯದಲ್ಲಿ ಸರಕಾರ ರಾಜಕೀಯ ಲೆಕ್ಕಾಚಾರ ನಡೆಸುವುದು ಎಳ್ಳಷ್ಟೂ ಸರಿಯಲ್ಲ. ಹಾಗೆಯೇ ಕಾಂಗ್ರೆಸ್ ಒಳಗಿನ ನಾಯಕರ ಭಿನ್ನಮತ ಬಹಿರಂಗ ಕಾಳಗವಾಗಿ, ರಾಮ ಮಂದಿರ ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಸಮಾಜದ ಶಾಂತಿ ಕದಡಲು ದಾಳವಾಗುವುದೂ ಅಕ್ಷಮ್ಯ.
ಮಿಸ್ಟರ್ ಹರಿಪ್ರಸಾದ್, ನಿಮ್ಮಲ್ಲಿ ಮಾಹಿತಿ ಇದ್ದರೆ ಅದನ್ನು ನಿಮ್ಮದೇ ಸರಕಾರದ ಗೃಹ ಸಚಿವರ ಜೊತೆಗೆ ಹಂಚಿಕೊಳ್ಳಿ. ಯಾವುದೇ ದುರಂತ ಮತ್ತೆ ಸಂಭವಿಸದಂತೆ ತಡೆಯಿರಿ. ಕಾಂಗ್ರೆಸ್ಸಿಗರ ರಾಜಕೀಯ ಅಸಹಾಯಕತೆ, ನಮ್ಮ ಸಮಾಜದಲ್ಲಿ ಶಾಂತಿ ಕದಡುವ ಗಲಭೆಗಳಿಗೆ ಪ್ರಚೋದಕ ಪೆಟ್ರೋಲ್ ಆಗುವುದು ಎಳ್ಳಷ್ಟೂ ಸರಿಯಲ್ಲ.
ಈ ಲೇಖನ ಓದಿದ್ದೀರಾ?: ಪ್ರಭಾಕರ ಭಟ್ಟರ ಹೇಳಿಕೆ ಬಿಜೆಪಿ ಪರಿವಾರದ ಚುನಾವಣಾ ‘ಟೂಲ್ ಕಿಟ್’
ಮುಸ್ಲಿಮರು ಬಾಬ್ರಿ ಮಸೀದಿಯ ವಿವಾದದಲ್ಲಿ, ಸರಿಯೋ ತಪ್ಪೋ, ಸುಪ್ರೀಂ ಕೋರ್ಟಿನ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪಿನಂತೆಯೇ ಅಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಹಾಗೆಯೇ ಐದು ಎಕರೆ ಪ್ರದೇಶದಲ್ಲಿ ಹೊಸ ಮಸೀದಿ, ಲೈಬ್ರರಿ ಮತ್ತು ಸಂಶೋಧನಾ ಕೇಂದ್ರದ ಕಾಂಪ್ಲೆಕ್ಸ್ ಕೂಡಾ ತಲೆ ಎತ್ತುತ್ತಿದೆ. ಮುಸ್ಲಿಮರಿಗೆ ಮಾತ್ರವಲ್ಲ, ತಲೆ ಸರಿ ಇರುವ ಎಲ್ಲ ಭಾರತೀಯರಿಗೂ ದೇಶದಲ್ಲಿ ಈಗ ಶಾಂತಿ ಬೇಕಾಗಿದೆ.
ಬಿಜೆಪಿ ರಾಮ ಮಂದಿರದ ಉದ್ಘಾಟನೆಯನ್ನು ರಾಜಕೀಯಕ್ಕೆ, ಹಿಂದೂಗಳ ವೋಟು ಪಡೆಯುವ ತಂತ್ರಗಾರಿಕೆಗೆ ಬಳಸುತ್ತಿದೆ ಎನ್ನುವುದು ಸ್ಪಷ್ಟ. ಅದನ್ನು ರಾಜಕೀಯವಾಗಿ ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸಿಗರು ಅನಗತ್ಯ ಆಡಳಿತ ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಮಾತ್ರ ಅಕ್ಷಮ್ಯ.
ಕಾನೂನು, ಶಿಸ್ತು ಪಾಲನೆ ಸರಕಾರದ ಆದ್ಯ ಕರ್ತವ್ಯ. ಅದನ್ನು ನಿರ್ವಹಿಸುವಾಗ ಕ್ಷುಲ್ಲಕ ರಾಜಕೀಯ ತಂತ್ರಗಳಲ್ಲಿ ತೊಡಗಬೇಡಿ. ಜನರ ಪ್ರಾಣ ಅಮೂಲ್ಯ; ನಿಮ್ಮಗಳ ಕೋಮು ರಾಜಕೀಯ/ ಒಳರಾಜಕೀಯಗಳಿಗೆ ಜನರ ಪ್ರಾಣಗಳನ್ನು ಬಲಿ ಕೊಡಬೇಡಿ.