“ನಾನೂ ರಾಮನ ಭಕ್ತ. ರಾಮನ ಜೊತೆ ಎಲ್ಲ ದೇವರುಗಳನ್ನು ಪೂಜಿಸುತ್ತೇನೆ. ರಾಮನಗರದಲ್ಲಿ ಎಲ್ಲ ಪಕ್ಷದವರು, ಧರ್ಮದವರು ಸೇರಿ ರಾಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ” ಎಂದು ರಾಮನಗರ ಕಾಂಗ್ರೆಸ್ ಶಾಸಕ ಹೆಚ್ ಎ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ.
ರಾಮನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ರಾಮಮಂದಿರದ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಮನಗರದಲ್ಲಿ ರಾಮೋತ್ಸವವನ್ನ ನಡೆಸಬೇಕು ಅಂತ ಚಿಂತನೆ ಮಾಡಿದ್ದೇವೆ. ಅದನ್ನ ಭಕ್ತಿಪೂರ್ವಕವಾಗಿಯೇ ಮಾಡುತ್ತೇವೆ. ನಾನು ಕೂಡ ಮೊದಲಿನಿಂದಲೂ ರಾಮನ ಭಕ್ತ. ಬಿಜೆಪಿಯವರು ರಾಮನನ್ನು, ಧರ್ಮವನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಯಾವತ್ತೂ ರಾಜಕೀಯದಲ್ಲಿ ಧರ್ಮ ಬೆರೆಸುವುದಿಲ್ಲ, ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತ, ಬದ್ಧತೆ ಮತ್ತು ಶಿಸ್ತು ಇದೆ” ಎಂದು ಹೇಳಿದರು.
“ನಾನು ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಸರಸ್ವತಿ ಪೂಜೆ, ಲಕ್ಷ್ಮಿ ಪೂಜೆ, ಗಣೇಶನ ಪೂಜೆ ಜೊತೆ ರಾಮನ ಪೂಜೆಯೂ ಮಾಡಿದ್ದೇನೆ. ರಾಮನ ಹೆಸರಿನಲ್ಲಿ ಇಂದು ರಾಜಕಾರಣ ಮಾಡಲಾಗುತ್ತಿದೆ. ಜನರನ್ನು ಧರ್ಮದ ಆಧಾರದಲ್ಲಿ ಒಡೆಯಲಾಗುತ್ತಿದೆ. ಕಾಂಗ್ರೆಸ್ ಯಾವತ್ತೂ ರಾಜಕೀಯದಲ್ಲಿ ಧರ್ಮ ಬೆರೆಸುವುದಿಲ್ಲ” ಎಂದು ತಿಳಿಸಿದರು.
“ರಾಮ ಅವರಿಗೆ ರಾಜಕೀಯ ವಸ್ತು ಅಲ್ಲ. ಆದರೆ ನಮಗಲ್ಲ. ಅವರು ರಾಜಕಾರಣಕ್ಕಾಗಿ ರಾಮನನ್ನು ಬಳಸಿಕೊಳ್ಳಬಹುದು. ಆದರೆ ನಾವು ಹಾಗಲ್ಲ. ತಾನು ಎಲ್ಲ ದೇವರುಗಳನ್ನು ಆರಾಧಿಸಿ ಪೂಜಿಸುತ್ತೇನೆ. ನಾವು ನಮ್ಮ ನಮ್ಮ ಊರಿನಲ್ಲಿ, ಮನೆಗಳಲ್ಲಿ ಮನೆ ದೇವರು ಅಂತ ಇಟ್ಟುಕೊಂಡಂತೆಯೇ ಮನೆಗಳಲ್ಲಿ ಪೂಜಾ ಸ್ಥಳ ಮತ್ತು ಪೂಜಾ ಕೋಣೆಯನ್ನು ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದು ಹೇಳಿದರು.
“ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿಯವರು ರಾಮನ ವಿಚಾರ ಪ್ರಸ್ತಾಪಿಸುತ್ತಿದ್ದಾರೋ ಇಲ್ಲವೋ, ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿರುವ ವಿಚಾರ. ಆದರೆ ನಾವು ರಾಮನನ್ನ ಮನೆ ದೇವರು ಅಂತ ಪೂಜೆ ಮಾಡುತ್ತೇವೆ. ಅವರಿಗೆ ರಾಮನ ಪೂಜೆ ಹೊಸದಿರಬಹುದು, ಆದರೆ ನಮಗೆ ಹೊಸದೇನಲ್ಲ. ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಇದನ್ನು ಓದಿದ್ದೀರಾ? ಗೋಧ್ರಾ ಹೇಳಿಕೆ | ಬಿಕೆ ಹರಿಪ್ರಸಾದ್‌ರನ್ನು ಕೂಡಲೇ ಬಂಧಿಸಿ: ಸಂಸದ ನಳಿನ್ ಕುಮಾರ್ ಕಟೀಲ್
“ರಾಮನ ವಿಚಾರದಲ್ಲಿ ತನಗಿರುವಂತಹ ನಿಲುವೇ ಕಾಂಗ್ರೆಸ್‌ನ ಎಲ್ಲ ಶಾಸಕರುಗಳಿಗೆ ಇದೆ. ಎಲ್ಲರೂ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುತ್ತಾರೆ. ಅದರಂತೆಯೇ ನಡೆದುಕೊಳ್ಳುತ್ತೇವೆ” ಎಂದು ರಾಮನಗರ ಕಾಂಗ್ರೆಸ್ ಶಾಸಕ ಹೆಚ್ ಎ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ.