ಅಯೋಧ್ಯೆಯ ಶ್ರೀರಾಮ ಮಂದಿರ ಯಾವ ಪಕ್ಷಕ್ಕೂ ಸೇರಿಲ್ಲ. ಈ ಮಂದಿರ ನಿರ್ಮಾಣಕ್ಕಾಗಿ ಐನೂರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆಗ ಬಿಜೆಪಿ ಕೂಡ ಇರಲಿಲ್ಲ. ಇದು ಎಲ್ಲ ರಾಮಭಕ್ತರಿಗೆ ಸೇರಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, “ಅಯೋಧ್ಯೆಯ ಶ್ರೀರಾಮ ಮಂದಿರ ಯಾವ ಪಕ್ಷಕ್ಕೂ ಸೇರಿಲ್ಲ. ಮಂದಿರ ಉದ್ಘಾಟನೆಗೆ ಎಲ್ಲರಿಗೂ ಆಹ್ವಾನ ಕೊಡಬೇಕು ಎಂದು ನಿರೀಕ್ಷೆ ಮಾಡಬೇಕಿಲ್ಲ. ಆದರೆ ಆಹ್ವಾನವಿಲ್ಲ ಎಂದು ಹೇಳುವ ಕಾಂಗ್ರೆಸ್ ನಾಯಕರು ಒಂದು ಕಾಲದಲ್ಲಿ ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದರು” ಎಂದರು.
“ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದು, ಪೂಜೆ ಮಾಡಲು ಒಳಗೆ ಹೋಗಿಲ್ಲ. ಆದರೆ ಮಸೀದಿಗೆ ಕರೆದರೆ ಟೋಪಿ ಹಾಕಿಕೊಂಡು ಓಡುತ್ತಾರೆ. ಕೇಸರಿ ಪೇಟವನ್ನು ಕೂಡ ಅವರು ಹಾಕಿಕೊಳ್ಳುವುದಿಲ್ಲ. ದೇವಸ್ಥಾನದ ಒಳಗೆ ಹೋಗಲು ಹಿಂಜರಿಯುತ್ತಾರೆ. ಕಾಂಗ್ರೆಸ್ ನಾಯಕರು ಒಂದು ಕಾಲದಲ್ಲಿ ರಾಮನ ಜನ್ಮ ಪ್ರಮಾಣಪತ್ರ ಕೇಳಿದ್ದರು, ರಾಮ ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಈಗ ಅಯೋಧ್ಯೆಗೆ ಹೋಗುವವರನ್ನು ಬೆದರಿಸಲು ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಹೇಳಿದರು.
“ಕರಸೇವಕ ಶ್ರೀಕಾಂತ ಪೂಜಾರಿ ಅವರ ವಿರುದ್ಧ ಬೇರೆ ಪ್ರಕರಣಗಳಿವೆ ಎಂದು ಹೇಳುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಾಯಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾರೆ. ಬೇರೆ ಪ್ರಕರಣಗಳಲ್ಲಿ ಯಾರೂ ಸಿಗದಿದ್ದಾಗ ಶ್ರೀಕಾಂತ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶ್ರೀಕಾಂತ ಅವರು ಗಾಯಗೊಂಡಿದ್ದು, ಬದುಕು-ಸಾವಿನ ನಡುವೆ ಹೋರಾಡುತ್ತಿದ್ದಾರೆ. ಅವರನ್ನು ಬಂಧಿಸುವ ಅವಶ್ಯಕತೆ ಏನಿತ್ತು? ರಾಜ್ಯದಲ್ಲಿ ದೀರ್ಘಾವಧಿಯಿಂದ ಬಾಕಿ ಇರುವ ಸುಮಾರು 50-60 ಸಾವಿರ ಹಾಗೂ ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಪ್ರಕರಣಗಳಿವೆ. ಎಲ್ಲರನ್ನೂ ಬಂಧಿಸಿದರೆ ಜೈಲಿನಲ್ಲಿರಿಸಲು ಜಾಗ ಇರುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲುಗಳಲ್ಲಿ ಜಾತಿಭೂತ- ಸುಪ್ರೀಮ್ ಕೋರ್ಟ್ ಕಳವಳ
ಕಾಂಗ್ರೆಸ್‌ನವರು ಬೇಕಾದವರಿಗೆ ಕಾಫಿ ಕೊಟ್ಟು ಕಳಿಸುತ್ತಾರೆ. ಅವರು ಕ್ರಿಮಿನಲ್ ಎಂದು ಹೇಳುವ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಇಲ್ಲ. ಅವರು ಕ್ರಿಮಿನಲ್ ಎನ್ನುವುದಾದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಶಶಿ ತರೂರ್ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ” ಎಂದು ಪ್ರಶ್ನಿಸಿದರು.
ಅದ್ದೂರಿ ಸ್ವಾಗತ ಕೋರಿದ್ದ ಕಾಂಗ್ರೆಸ್
“ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದವರನ್ನು ಕಾಂಗ್ರೆಸ್ ಬಿಟ್ಟುಬಿಟ್ಟಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರೇ ಆರೋಪಿಗಳಾಗಿದ್ದಾರೆ. ಶ್ರೀಕಾಂತ ಪೂಜಾರಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ಇತರರು ಅಪರಾಧಿ ಅಲ್ಲ, ದಾಖಲೆ ಇಲ್ಲ ಎಂದು ಆದೇಶ ಬಂದಿದೆ. ಶ್ರೀಕಾಂತರಿಗೆ ಕಾನೂನು ನೆರವು ಪಡೆಯಲು ಕೂಡ ಅವಕಾಶ ನೀಡಿಲ್ಲ. ತಲೆಮರೆಸಿಕೊಂಡಿದ್ದಾನೆಂದು ಮನೆಯ ಬಾಗಿಲಿಗೆ ಅಂಟಿಸಿದ ನೋಟಿಸ್ ತೋರಿಸಿ ಅಥವಾ ಎಫ್‌ಐಆರ್ ಪ್ರತಿ ತೋರಿಸಿ” ಎಂದು ಸವಾಲು ಹಾಕಿದರು.
“ಶ್ರೀಕಾಂತ ಪೂಜಾರಿ ತಲೆಮರೆಸಿಕೊಂಡಿದ್ದಾನೆ ಎಂದಿದ್ದಾರೆ. ಆದರೆ ನೋಟಿಸ್ ಏಕೆ ನೀಡಿಲ್ಲ? ಕೋರ್ಟ್‌ಗೆ ರಜೆ ಇರುವಾಗ ಬಂಧನ ಮಾಡಿದ್ದೇಕೆ? ಎಫ್‌ಐಆರ್ ಪ್ರತಿ ಏಕೆ ನೀಡಿಲ್ಲ? ಇದಕ್ಕೆಲ್ಲ ಕಾಂಗ್ರೆಸ್ ಉತ್ತರಿಸಲಿ” ಎಂದು ಆಗ್ರಹಿಸಿದ್ದಾರೆ.