ಹದಿ ಹರೆಯದ ಮಕ್ಕಳ ನಡವಳಿಕೆಯ ಮೇಲೆ ಮನೆಗಳಲ್ಲಿ ನಿಗಾ ಇಡುವುದು ಪೋಷಕರ ಕೆಲಸವಾದರೆ, ಮನೆಯಿಂದಾಚೆ ಶಾಲೆ, ಕಾಲೇಜುಗಳಲ್ಲಿ ಇಡೀ ದಿನ ಕಳೆಯುವ ಮಕ್ಕಳ ಬಗ್ಗೆ ಶಿಕ್ಷಣ ಸಂಸ್ಥೆಗಳು ನಿಗಾ ವಹಿಸಬೇಕಿರುವುದು ಅತ್ಯಂತ ಅಗತ್ಯ.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಸ್, ಕ್ಯಾಬ್, ವ್ಯಾನ್‌ನಂತಹ ಶಾಲಾ ವಾಹನಗಳಲ್ಲಿ ಮಹಿಳಾ ಸಹಾಯಕಿಯರನ್ನೇ ನೇಮಿಸಿಕೊಳ್ಳಬೇಕು. ಜತೆಗೆ, ಶಾಲಾ ಮಕ್ಕಳನ್ನು ಕರೆತರುವ ಎಲ್ಲ ಬಗೆಯ ವಾಹನಗಳ ಚಾಲಕರು ಎರಡು ವರ್ಷಗಳಿಗೊಮ್ಮೆ ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವೆಂದು ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಗೆ ಕಾರಣವಾಗಿದ್ದು ಹೊಸವರ್ಷದ ಮೊದಲ ದಿನ ಶಿಕ್ಷಣ ಸಚಿವರ ಪಕ್ಕದ ಜಿಲ್ಲೆಯಿಂದ ಬಂದ ಆಘಾತಕಾರಿ ಸುದ್ದಿ.
2024 ಜನವರಿ 1ರ ಮುಂಜಾನೆ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಮತ್ತು ಆಕೆಯ ಶಾಲಾ ಬಸ್ ಡ್ರೈವರ್ ಮೃತದೇಹ ಬಂಕನಕಟ್ಟೆ ಬಳಿ ರೈಲು ಹಳಿಗಳ ಮೇಲೆ ಬಿದ್ದಿತ್ತು. ಡಿಸೆಂಬರ್ 31ರ ಸಂಜೆ ಗೆಳೆಯರ ಭೇಟಿಗೆಂದು ತಮ್ಮನಿಗೆ ತಿಳಿಸಿ ಹೋದ ಬಾಲಕಿ ರಾತ್ರಿ ಮನೆಗೆ ಬಂದಿಲ್ಲ. ಬೇರೆ ಊರಿಗೆ ಹೋಗಿದ್ದ ಪೋಷಕರು ರಾತ್ರಿ ಮನೆಗೆ ಬಂದಾಗ ಮಗಳು ಕಾಣಿಸಿಲ್ಲ. ನಂತರ ಊರೆಲ್ಲ ಹುಡುಕಾಡಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ಬೆಳಕು ಹರಿಯುವುದರಲ್ಲಿ ಬಾಲಕಿಯ ಪೋಷಕರಿಗೆ ಆಘಾತ ಕಾದಿತ್ತು. ಆಕೆ ಓದುತ್ತಿದ್ದ ಶಾಲಾ ಬಸ್ ಡ್ರೈವರ್ ಸಂತೋಷ್ ಬಾಲಕಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಕೆಲ ತಿಂಗಳ ಹಿಂದೆ ಸೋದರ ಮಾವನ ಮನೆಗೆ ಹೋಗಿದ್ದ ಬಾಲಕಿ ಅವರ ಫೋನ್‌ನಿಂದ ಆಗಾಗ ಕರೆ ಮಾಡಿ ಮಾತನಾಡಿದ್ದು ಗಮನಿಸಿದ್ದಾರೆ. ವಿಚಾರಿಸಿದಾಗ ಅದು ಬಸ್ ಡ್ರೈವರ್ ಅಂಕಲ್ ಎಂದು ಹೇಳಿದ್ದಾಳೆ. ಈ ವಿಚಾರದಲ್ಲಿ ಆಕೆಯ ಪೋಷಕರು ಇಬ್ಬರಿಗೂ ಎಚ್ಚರಿಕೆ ನೀಡಿ, ಶಾಲಾ ಆಡಳಿತ ಮಂಡಳಿಯ ಗಮನಕ್ಕೂ ತಂದ ಕಾರಣ ಆತನನ್ನು ಬೇರೆ ‘ರೂಟ್’ ಗೆ ವರ್ಗಾಯಿಸಲಾಗಿತ್ತು. ಎಲ್ಲ ಸರಿಯಿದೆ ಎಂದುಕೊಳ್ಳುವ ವೇಳೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ವರ್ಷಗಳಿಂದ ಡ್ರೈವರ್ ಸಂತೋಷ್ ಆಕೆಯನ್ನು ಪೀಡಿಸುತ್ತಿದ್ದ ಎಂದು ವರದಿಯಾಗಿದೆ. ಅಂದರೆ ಬಾಲಕಿಗೆ ಕೇವಲ 11 ವರ್ಷವಿದ್ದಾಗ, ಐದನೇ ತರಗತಿಯ ಪುಟ್ಟ ಬಾಲಕಿಯನ್ನು 35 ವರ್ಷ ಮೀರಿದ ವಿವಾಹಿತನೊಬ್ಬ ಪ್ರೀತಿಸುತ್ತಾನೆ, ಪೀಡಿಸುತ್ತಾನೆ, ಆಕೆಯ ಬಗ್ಗೆ ಹೆಚ್ಚಾಗಿ ಆಸಕ್ತಿ ವಹಿಸಿದ್ದಾನೆ ಅಂದರೆ ಆತನ ನಡವಳಿಕೆಯ ಬಗ್ಗೆ ಶಾಲಾ ಆಡಳಿತ ಮಂಡಳಿ, ಪೋಷಕರು ನಿಗಾ ವಹಿಸಬೇಕಿತ್ತು.
ಹದಿ ಹರೆಯದ ಮಕ್ಕಳ ನಡವಳಿಕೆಯ ಮೇಲೆ ನಿಗಾ ಇಡುವುದು ಪೋಷಕರ ಕೆಲಸವಾದರೆ ಮನೆಯಿಂದಾಚೆ ಶಾಲೆ, ಕಾಲೇಜುಗಳಲ್ಲಿ ಕಳೆಯುವ ಮಕ್ಕಳ ಬಗ್ಗೆ ಶಿಕ್ಷಣ ಸಂಸ್ಥೆಗಳು ನಿಗಾ ವಹಿಸಬೇಕಿರುವುದು ಅತ್ಯಂತ ಅಗತ್ಯ. ಈಗ ಗಿರಿಯಾಪುರದ ಆ ಖಾಸಗಿ ಶಾಲೆಯ ಮೇಲೆ ‘ಪೋಕ್ಸೋ’ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನೇನು ಅಂತಿಮ ಪರೀಕ್ಷೆ ಬರೆಯಲು ತಯಾರಿ ನಡೆಯುತ್ತಿರುವ ಈ ಹೊತ್ತಿನಲ್ಲಿ ಆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಮನಸ್ಥಿತಿ ಹೇಗಿರುತ್ತದೆ? ಪೋಷಕರ ಸಂಕಟ ಎಂಥದ್ದು? ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ದುರಂತವೊಂದನ್ನು, ಕಾಯಂ ಕಳಂಕವನ್ನೂ ತಪ್ಪಿಸಬಹುದಿತ್ತು.
ಶಾಲೆಗಳಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದು ಇದೇ ಮೊದಲೇನಲ್ಲ. ಎಲ್‌ಕೆಜಿ ಮಗುವನ್ನೂ ಶಾಲಾ ಸಿಬ್ಬಂದಿ, ಡ್ರೈವರ್, ವಾಚ್‌ಮನ್‌ಗಳು ತಮ್ಮ ವಿಕೃತ ಕಾಮವಾಂಛೆಗೆ ಬಲಿ ಪಡೆದಿರುವ ಘಟನೆಗಳು ನಮ್ಮ ರಾಜ್ಯದಲ್ಲೇ ಈ ಮೊದಲೂ ನಡೆದಿವೆ. ಟ್ಯೂಷನ್ ಸೆಂಟರ್, ವಸತಿ ಶಾಲೆ, ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ಗಡಿಗಳಿಲ್ಲ. ಎಲ್ಲೆಂದರಲ್ಲಿ ಹೆಣ್ಣುಮಕ್ಕಳ ಮೇಲೆ ಕಾಮಪಿಶಾಚಿಗಳು ದಾಳಿ ನಡೆಸುತ್ತಿವೆ. ಲಕ್ಷಗಟ್ಟಲೆ ಡೊನೇಷನ್ ಲೂಟಿ ಮಾಡುವ ಖಾಸಗಿ ಶಾಲಾ ಆಡಳಿತ ಮಂಡಳಿಯು ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಶೂನ್ಯ ದೌರ್ಜನ್ಯದ ಖಾತ್ರಿ ನೀಡುತ್ತಿಲ್ಲ. ಹೆಣ್ಣುಮಕ್ಕಳ ಹೆತ್ತವರ ಪಾಲಿಗಿದು ಅತ್ಯಂತ ಕಳವಳಕಾರಿ ಬೆಳವಣಿಗೆ.
ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಹೊರಡಿಸಿರುವ ಸುತ್ತೋಲೆಯಲ್ಲಿ, “ಶಾಲಾ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು ಮತ್ತು ಸಹಾಯಕರು ಪೊಲೀಸ್ ವೆರಿಫಿಕೇಷನ್ ಮಾಡಿಸುವಂತೆ ಎಲ್ಲ ಶಾಲಾ ಆಡಳಿತ ಮಂಡಳಿಗಳು ಕ್ರಮವಹಿಸಬೇಕು. ಹಾಗೆಯೇ, ಕರ್ನಾಟಕ ಮೋಟಾರು ವಾಹನಗಳ 1989 ನಿಯಮದಂತೆ ವಾಹನಗಳಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ‘ಶಾಲಾ ವಾಹನ ಸುರಕ್ಷತಾ ಸಮಿತಿ’ ರಚಿಸಬೇಕು. ಖಾಸಗಿ ಶಾಲಾ ವಾಹನಗಳಲ್ಲಿ, ಬಸ್, ವ್ಯಾನ್, ಆಟೋ ರಿಕ್ಷಾಗಳಲ್ಲಿ ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆತರುವ ಕೆಲಸ ನಿರ್ವಹಿಸುವ ಚಾಲಕರು ಮತ್ತು ಸಹಾಯಕರ ನಡವಳಿಕೆ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯುವುದು ಹಾಗೂ ಪ್ರತಿ ಎರಡು ವರ್ಷಗಳಿಗೊಮ್ಮೆ ನವೀಕರಿಸುವುದು ಕಡ್ಡಾಯ” ಎಂದು ಹೇಳಲಾಗಿದೆ.
ನಿಯಮವೇನೋ ಓದಲು ಚೆನ್ನಾಗಿದೆ. ಆದರೆ ಈ ನಿಯಮ ಪಾಲನೆಯ ಮೇಲೆ ನಿಗಾ ಇಡುವವರು ಯಾರು? ಸುತ್ತೋಲೆ ಹೊರಡಿಸಿದ ಅಧಿಕಾರಿಗಳು ಮತ್ತೆ ಅತ್ತ ದೃಷ್ಟಿ ಹರಿಸುವರೇ? ಶಾಲಾ ಬಸ್ ಚಾಲಕ ಸಹಾಯಕರಿಗೆ ನಡತೆ ಸರ್ಟಿಫಿಕೆಟ್ ಕೊಡುವಷ್ಟು ದಕ್ಷರೇ ನಮ್ಮ ಪೊಲೀಸರು ಎಂದು ಅನುಮಾನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಶಾಲಾ ಬಸ್ ಡ್ರೈವರ್, ಸಹಾಯಕರ ನಡತೆ ಬಗ್ಗೆ ನಿಜವಾದ ಪ್ರಮಾಣ ಪತ್ರ ಕೊಡಬೇಕಿರುವುದು ಆ ಬಸ್‌ನಲ್ಲಿ ದಿನವೂ ಪ್ರಯಾಣಿಸುವ ಮಕ್ಕಳು. ಮಕ್ಕಳು ಮುಕ್ತವಾಗಿ, ಧೈರ್ಯದಿಂದ ಸಿಬ್ಬಂದಿಯ ನಡತೆ ಬಗ್ಗೆ ಹೇಳುವಂತಹ ವಾತಾವರಣ ಶಾಲೆಗಳಲ್ಲಿ ಸೃಷ್ಟಿಯಾಗಬೇಕು. ಆಗಷ್ಟೇ ಸುಧಾರಣೆ ಸಾಧ್ಯ.
