ಸಾಮಾನ್ಯವಾಗಿ ಜನರು ತುಂಬಾ ಬಿಜಿ ಸಮಯವೇ ಸಿಗುವುದಿಲ್ಲ ಅನ್ನುತ್ತಾರೆ. ಸಮಯವಿರುವುದು ಎಲ್ಲರಿಗೂ ಒಂದೇ. ಸಾಧಕರಿಗೆ ಹೆಚ್ಚು, ಸಾಮಾನ್ಯರಿಗೆ ಕಡಿಮೆ ಸಮಯವನ್ನು ಸೃಷ್ಟಿ ನೀಡಿಲ್ಲ. ಇದ್ದ ಸಮಯವನ್ನು ಸರಿಯಾಗಿ ಸದು ಉಪಯೋಗ ಪಡಿಸಿಕೊಳ್ಳುವ ಕ್ಷಮತೆ ಸಾಧಕರಲ್ಲಿ ಇರುತ್ತದೆ ಎಂದು ಡಾ. ಆನಂದ್ ಪಾಂಡುರಂಗಿ ಹೇಳಿದ್ದಾರೆ.
ಧಾರವಾಡದಲ್ಲಿ ಡಾ. ಎಂ.ಬಿ ದಿಲ್ ಶಾದ್ ಶಿಕ್ಷಣ ಮತ್ತು ಸೇವಾ ಸಮಿತಿ ಆಯೋಜಿಸಿದ್ದ ಡಾ. ಎಂ.ಬಿ ದಿಲ್ ಶಾದ್ ಅವರ 71ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಡಾ. ಎಂ.ಬಿ ದಿಲ್ ಶಾದ್, ಅವರು ನಾಡಿನ ಖ್ಯಾತ ವಾಗ್ಮಿ ಹಾಗೂ ಶ್ರೇಷ್ಠ ಶಿಕ್ಷಕರಾಗಿದ್ದರು. ಸತತ ಅಧ್ಯಯನದ ಮೂಲಕ ಹೊಸತನ್ನು ನಾಡಿಗೆ ಸಮರ್ಪಿಸಬೇಕೆಂಬ ಸದಭಿರುಚಿ ಉಳ್ಳುವರಾಗಿದ್ದರು. ಸಮಯದ ಸದುಪಯೋಗ ಪಡಿಸಿಕೊಳ್ಳುವ ಕುರಿತು ಇತರರಿಗೆ ಮಾದರಿ ವ್ಯಕ್ತಿಯಾಗಿ ದುಡಿದಿದ್ದರು” ಎಂದು ತಿಳಿಸಿದರು.
“ವಿದ್ಯಾರ್ಥಿಗಳು ಅವರ ಆದರ್ಶವನ್ನು ಪಾಲಿಸಬೇಕು. ಉಡುವ ರಂಗಿನ ಪ್ಯಾಂಟು ಹರಿದಿದ್ದರೂ ಸರಿ, ಕೈಯಲ್ಲಿ ಒಂದು ಪುಸ್ತಕವಿರಬೇಕು. ಆದರೆ, ಇಂದಿನ ಯುವ ಪೀಳಿಗೆ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಅಂಗಿ ಪ್ಯಾಂಟು ಹರಿದಿದ್ದರು ಸರಿ ಎನ್ನುತ್ತಾರೆ. ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು. ಸಮಯವನ್ನು ಹಾಳು ಮಾಡಿಕೊಳ್ಳಬಾರದು” ಎಂದರು.
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿವೃತ್ತ ಜಂಟಿ ನಿರ್ದೇಶಕ ಸದಾಶಿವು ಮರ್ಜಿ ಅವರು ಮಾತನಾಡಿ, “ದೀಲ್ ಶಾದ ಅವರು ಜಾತಿ ಧರ್ಮ ಭಾಷೆಯ ಸಂಕೋಲೆಗೆ ಬಂದಿಯಾಗದೆ ಮಾನವತಾವಾದಿಯಾಗಿ ಬದುಕಿದ್ದರು. ಅವರ ಬದುಕು ಓರ್ವ ಸಂತನ ಬದುಕಾಗಿತ್ತು. ನಾಡು ನುಡಿ ಪರಿಸರಕ್ಕಾಗಿ ತನ್ನ ಇಡೀ ಜೀವನವನ್ನು ಮುಡಪಾಗಿಟ್ಟಿದ್ದರು. ಮಾತು ಹೇಗೆ ಇರಬೇಕು ಎನ್ನುವುದಕ್ಕೆ ಅವರು ಮಾತು ಮಾದರಿಯಾಗಿತ್ತು” ಎಂದರು.
“ಅವರು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನೆಟ್ಟ ಲಕ್ಷಾಂತರ ಗಿಡ ಮರಗಳಲ್ಲಿ ಅವರ ನೆನಪುಗಳು ಇವೆ. ಸಾವಿರಾರು ಶಿಷ್ಯರನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ನಾಡಿನ ಸೇವೆಗಾಗಿ ಮನೆ ಮಠವನ್ನು ಮರೆತು ದುಡಿದ ಕಾಯಕ ಯೋಗಿಯಾಗಿದ್ದರು. ಅವರ ನೆನಪಿನಲ್ಲಿ ಸಂಸ್ಥೆಯನ್ನು ಕಟ್ಟಿಕೊಂಡು ಸಮಾಜಮುಖ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿರುವ ಅವರ ಸಹೋದರರು ಹಾಗೂ ಅವರ ಕುಟುಂಬದವರ ಕಾರ್ಯ ಪ್ರಶಂಸನೀಯ” ಎಂದರು.
ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಎನ್ ಸಿದ್ದಕ್ಕಲವರ, ಎಂ ಎಂ ಕಾಜಿ, ಜೆ ಡಿ ಶಿಂದೆ, ಡಾ ಎನ್ ಎಂ ಮಕಾಂದರ್, ಮೌಲಾನಾ ಮುಜೀಬ್, ವನಿತಾ, ಆರಿಫಾ ಎ ಶೇಕ್, ಕೆ.ಎಸ್ ಬಂಗಾರಿ, ಬರಮಗೌಡ, ಮುತ್ತಗಿ, ನಾಯಕ್, ಸೀತಮ್ಮ, ಜೆ ಕೆ ಸಾಮ್ರಾಣಿ, ಎಸ್ ಕೆ ಗಂಗಣ್ಣವರ್, ಬೀ ಶಕುಂತಲಾ, ಎಸ್ ಎ ಚನ್ನವೀರಗೌಡರ್, ಎಸ್‌ಡಿ ರೊಟ್ಟಿ, ಡಾ. ಮಹರ ಅಪ್ರೋಜ್ ಕಾಠೇವಾಡಿ, ಡಾ. ಪ್ರಕಾಶ್ ಸಿದ್ದಕ್ಕನವರ, ಡಾ. ಜ್ಯೋತಿ ದೊಡ್ಡಮನಿ ಹಾಗೂ ಡಾ. ಖಲೀಲ್ ಅಹಮದ್ ಜೆ ದಿಲ್ ಶಾದ್, ರಜಿಯಾ ಶೌಕತ ಅಲಿ ದರೂರು, ಮೊಹಮ್ಮದ್ ರಫೀಕ್ ಬಿ ದಿಲ್ ಶಾದ್, ಜರೀನಾ ಬೇಗಮ್ ಹುಂಡೆಕಾರ್, ಉಜ್ಮಾ ಆಫ್ರಿನ್ ಹಾಗೂ ಡಾ. ಏನ್ ಬಿ ನಾಲತವಾಡ ಇದ್ದರು.