ವಿಚಿತ್ರ ಮತ್ತು ದುರಂತ ಘಟನೆಯೊಂದು ಗುಜರಾತ್ನ ಅಹಮದಾಬಾದ್ನಿಂದ ವರದಿಯಾಗಿದೆ. ವ್ಯಕ್ತಿಯೋರ್ವ ಕುಟುಂಬದೊಂದಿಗೆ ಪ್ರಯಾಣಿಸುತ್ತಿರುವಾಗ ನಿದ್ರಾವಸ್ಥೆಯಲ್ಲಿರುವಾಗಲೇ ನಿಧನ ಹೊಂದಿದ್ದು, ಇದರ ಬಗ್ಗೆ ಮಾಹಿತಿಯೇ ಇಲ್ಲದ ಪತ್ನಿ ಹಾಗೂ ಕುಟುಂಬಸ್ಥರು ಸುಮಾರು 13 ಗಂಟೆಗಳ ಕಾಲ ಜೊತೆಗೇ ಪ್ರಯಾಣಿಸಿದ ಘಟನೆ ವರದಿಯಾಗಿದೆ.
ಗುಜರಾತ್ನ ರಾಜಧಾನಿ ಅಹ್ಮದಾಬಾದ್ನಿಂದ ತೆರಳುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ದಂಪತಿಗಳು ತಮ್ಮ ಮಕ್ಕಳೊಂದಿಗೆ ಸೂರತ್ನಿಂದ ಅಯೋಧ್ಯೆಗೆ ರೈಲು ಹತ್ತಿದ ನಂತರ ಈ ಘಟನೆ ನಡೆದಿದೆ ಎಂದು ಫ್ರೀ ಪ್ರೆಸ್ ಜರ್ನಲ್ (Free Press Journal) ವೆಬ್ಸೈಟ್ ವರದಿ ಮಾಡಿದೆ.
ಗಂಡ ಮಲಗಿದ್ದಲ್ಲಿ ಮೃತಪಟ್ಟಿದ್ದಾರೆ. ಆದರೆ ಪಕ್ಕದಲ್ಲೇ ಇದ್ದ ಪತ್ನಿ ಪತಿ ಮಲಗಿದ್ದಾರೆಂದು ತಿಳಿದು ಪ್ರಯಾಣ ಮುಂದುವರಿಸಿದ್ದರು. 13 ಗಂಟೆಗಳಿಂದಲೂ ಹೆಚ್ಚು ಮಲಗಿದ್ದರೂ ಕೂಡ, ಒಮ್ಮೆಯೂ ಎದ್ದಿರಲಿಲ್ಲ. ಇದರಿಂದ ಅನುಮಾನಗೊಂಡು ಎಬ್ಬಿಸಲು ಹೊರಟಾಗ ಮೃತಪಟ್ಟಿರುವುದು ತಿಳಿದುಬಂದಿದೆ.
ಮೃತಪಟ್ಟ ವ್ಯಕ್ತಿ ಕುಟುಂಬ ಸಮೇತ ಸೂರತ್ನಿಂದ ಅಯೋಧ್ಯೆಗೆ ಪ್ರಯಾಣಿಸುತ್ತಿದ್ದರು. ಸೂರತ್ನಲ್ಲಿ ರೈಲು ಹತ್ತಿದ ವ್ಯಕ್ತಿಯೊಂದಿಗೆ ಆತನ ಪತ್ನಿ, ಮಕ್ಕಳು ಮತ್ತು ಸಹಚರರು ಇದ್ದರು. ಆದರೆ, ರೈಲು ಹತ್ತಿದ ಸ್ವಲ್ಪ ಸಮಯದಲ್ಲೇ ಆ ವ್ಯಕ್ತಿ ತನ್ನ ಹೆಂಡತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಲಗಿದ್ದರು.
ಹಲವಾರು ಗಂಟೆಗಳ ನಂತರ, ವ್ಯಕ್ತಿ ಎಚ್ಚರಗೊಳ್ಳದಿದ್ದಾಗ, ಪ್ರಯಾಣಿಕರ ಕುಟುಂಬ ಮತ್ತು ಇತರರು ಅವನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ, ಪ್ರತಿಕ್ರಿಯಿಸಲಿಲ್ಲ. ಅಲ್ಲದೇ, ದೇಹದ ಉಷ್ಣಾಂಶ ಕೂಡ ತಣ್ಣಗಾಗಿತ್ತು. ಎಬ್ಬಿಸಲು ಎಷ್ಟೇ ಪ್ರಯತ್ನಪಟ್ಟರು ಕೂಡ ವಿಫಲವಾದಾಗ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕೆಪಿಎಸ್ಸಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ: ಒಂದು ಬಾರಿ ವಯೋಮಿತಿ ಸಡಿಲಿಕೆಗೆ ಅಸ್ತು
ಮಲಗಿದ್ದಲ್ಲೇ ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟ ನಂತರ ರೈಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿ, ಶವವನ್ನು ಝಾನ್ಸಿ ಜಂಕ್ಷನ್ನಲ್ಲಿ ಇಳಿಸಲಾಯಿತು. ಈ ವೇಳೆ ಝಾನ್ಸಿಯ ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ಈ ಘಟನೆಯು ರೈಲಿನಲ್ಲಿದ್ದ ಪ್ರಯಾಣಿಕರು ಹಾಗೂ ಜೊತೆಗೇ ಪ್ರಯಾಣಿಸುತ್ತಿದ್ದ ಕುಟುಂಬದವರನ್ನು ಆಘಾತಕ್ಕೊಳಪಡಿಸಿದೆ.