ಹೊಸಿಲ ಒಳಗೆ-ಹೊರಗೆ | ಈಗ ನೀವೇ ಹೇಳಿ… ಟಕೂ ಬಾಯಿಯ ಮಗು ನಿಜಕ್ಕೂ ಯಾರದ್ದು?

Date:

Advertisements

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)
ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ‘ಅವಳ’ ಕೆಲಸ ಹೆಚ್ಚಾಗಿದ್ದರೂ, ಮಗು ‘ಅವನ’ ಸೊತ್ತು ಎಂದು ಒಡೆತನ ಸ್ಥಾಪಿತವಾದ ರೀತಿ, ಪುರುಷಪ್ರಧಾನ ವ್ಯವಸ್ಥೆ ಅದನ್ನು ಸಾಧಿಸಿಕೊಂಡ ಬಗೆ ಅಚ್ಚರಿದಾಯಕ. ವೀರ್ಯಾಣು ದಾಟಿಸಿಬಿಟ್ಟಲ್ಲಿಗೆ ಒಡೆತನ ಸ್ಥಾಪಿಸಲಾಗುವುದಿಲ್ಲ ಅಲ್ಲವೇ? ಟಕೂ ಬಾಯಿಯ ಪ್ರತಿಪಾದನೆ ಕೂಡ ಇದೇ ಆಗಿತ್ತು…

ಮಹಿಳೆಯರ ಗರ್ಭವು ಪುರುಷರಿಗೆ ಬೀಜ ಬಿತ್ತುವ ಕ್ಷೇತ್ರ ಎಂಬ ಮಾತು ಕೇಳಿಬರುತ್ತದೆ. ಅಂದರೆ ಬೀಜ ಯಾರದ್ದೋ ಫಲವೂ ಅವರದ್ದೇ ಎಂಬ ಧೋರಣೆ ಈ ಮಾತಿನ ಹಿಂದೆ ಬಿಂಬಿತವಾಗುತ್ತದೆ. ಮಗುವನ್ನು ಹೆತ್ತುಕೊಡುವುದು ಅವಳ ಧರ್ಮ ಅನ್ನುವ ಚಿಂತನೆಯೂ ಗಾಢವಾಗಿ ಇದೆ. ಒಟ್ಟಿನಲ್ಲಿ ಸಂತಾನದ ಮೇಲೆ ಒಡೆತನವನ್ನು ಸ್ಥಾಪಿಸುವ ಚಿಂತನೆ, ವ್ಯವಸ್ಥೆ ಇಲ್ಲಿ ಕಾಣಬಹುದು. “ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಯಾರ ಮಗು? ಯಾರಿಗೆ ಹುಟ್ಟಿದ್ದು? ಅಪ್ಪನ ಹೆಸರು ಇಲ್ಲದ ಮಗುವಿಗೆ ಎಲ್ಲಿದೆ ಮರ್ಯಾದೆ?” – ಇಂತಹ ಎಲ್ಲಾ ಮಾತುಗಳೂ ಮತ್ತೆ ಮತ್ತೆ “ಅವನ ಮಗು” ಅನ್ನುವ ಚಿಂತನೆಯನ್ನು ಪ್ರತಿಫಲಿಸುತ್ತದೆ. ನನ್ನ ಒಳಗೆ ಈ ಚಿಂತನೆಗಳ ಬಗ್ಗೆ ಮರುಚಿಂತನೆ ಹುಟ್ಟಿಕೊಂಡ ಪ್ರಕ್ರಿಯೆ ಬಗ್ಗೆ ನಾನು ಹೇಳಲೇ ಬೇಕು.

‘ರಿಹಾಯಿ’ ಒಂದು ವಿಶೇಷ ಹಿಂದಿ ಸಿನಿಮಾ. 1988 ರಲ್ಲಿ ಅರುಣಾ ರಾಜೆ ನಿರ್ದೇಶನ ಮಾಡಿದ ಈ ಸಿನಿಮಾ ಮಹಿಳೆಯರ ಲೈಂಗಿಕತೆ ಬಗ್ಗೆ ಮಹತ್ವದ ವಿಚಾರಗಳನ್ನು ಎತ್ತುತ್ತದೆ. ಗುಜರಾತಿನ ಒಂದು ಹಳ್ಳಿ. ದಿನನಿತ್ಯದ ಬದುಕು ನಡೆಸುವುದಕ್ಕೇ ದುಸ್ತರವಾಗಿರುವುದರಿಂದ ಊರಿನ ಗಂಡುಮಕ್ಕಳೆಲ್ಲಾ ಪಟ್ಟಣಕ್ಕೆ ವಲಸೆ ಹೋಗಿರುತ್ತಾರೆ. ಯಾವಾಗಲೋ ಒಮ್ಮೆ ಹಬ್ಬ- ಹರಿದಿನಗಳಿಗೆ ಊರಿಗೆ ಬರುತ್ತಾರೆ. ಊರಿನಲ್ಲಿ ವಯಸ್ಸಾದವರು, ಮಹಿಳೆಯರು ಮತ್ತು ಮಕ್ಕಳು ಇರುತ್ತಾರೆ. ಊರಿನಿಂದಲೇ ದುಡಿಮೆಗಾಗಿ ಹೊರ ಊರಿಗೆ ಹೋದ ಒಬ್ಬಾತ, ಒಬ್ಬಾತ ಅಂದರೆ ಸಾಲದು, ಒಬ್ಬ ಶೋಕಿಲಾಲ, ಮನ್‍ಸುಖ್ ಇಂತಹ ಹೊತ್ತಿನಲ್ಲಿ ಊರಿಗೆ ಬರುತ್ತಾನೆ. ಊರಿನ ಹೆಣ್ಣುಮಕ್ಕಳೆಲ್ಲಾ ಹಾಗೂ ಹೀಗೂ ಇವನ ಆಕರ್ಷಣೆಗೆ ಒಳಗಾಗುತ್ತಾರೆ, ಸಹಜವಾಗಿಯೇ ದೈಹಿಕ ಸಂಬಂಧಗಳೂ ನಡೆಯುತ್ತವೆ. ಅವರಲ್ಲಿ ಒಬ್ಬಾಕೆ ಟಕೂ ಬಾಯಿ. ಗಂಡನಿಗೆ ಅತೀವ ನಿಷ್ಠೆಯಿಂದ ಇರುವಾಕೆ. ಬಹಳ ಕಾಲ ಮನ್‍ಸುಖನ ಸೆಳೆತಕ್ಕೆ ಒಳಗಾಗುವುದಿಲ್ಲ, ಆದರೆ ಅವನೂ ಅವಳ ಹಿಂದೆ ಬಿದ್ದು, ಯಾವುದೋ ಒಂದು ಸಂದರ್ಭದಲ್ಲಿ ಅವಳೂ ಕೂಡಾ ಆತನ ಆಕರ್ಷಣೆಗೆ ಸಿಲುಕಿಬಿಡುತ್ತಾಳೆ.

ಇಷ್ಟಾದ ಮೇಲೆ ಒಂದಷ್ಟು ಮಂದಿ ಮಹಿಳೆಯರು ಗರ್ಭ ಧರಿಸುತ್ತಾರೆ. ಇನ್ನೇನು ಹಬ್ಬ ಹತ್ತಿರ ಬರುತ್ತಿದೆ, ಗಂಡಂದಿರು ಮನೆಗೆ ಬರುವವರೇ ಇದ್ದಾರೆ. ಗಂಡಂದಿರ ಭಯ ಕಾಡುತ್ತದೆ, ಹೇಗೆ ಹೇಗೋ ಗರ್ಭ ತೆಗೆಸಿಬಿಡುತ್ತಾರೆ. ಟಕೂ ಬಾಯಿ ಕೂಡಾ ಗರ್ಭಿಣಿಯಾಗುತ್ತಾಳೆ. ಸಿನಿಮಾದ ಮಹತ್ವದ ಘಟ್ಟ ಇರುವುದು ಇಲ್ಲಿ. ತಪ್ಪು ಮಾಡಿದ ಭಾವ ಟಕೂ ಬಾಯಿಗೆ ಇದ್ದರೂ ಅವಳು ಗರ್ಭ ತೆಗೆಸುವ ಯೋಚನೆ ಮಾಡುವುದಿಲ್ಲ. ಹಬ್ಬಕ್ಕಾಗಿ ಮನೆಗೆ ಬಂದ ಗಂಡನ ಹತ್ತಿರ ತಪ್ಪಾಯಿತು ಎಂದು ಒಪ್ಪಿಕೊಳ್ಳುತ್ತಲೇ ಸತ್ಯವಾಗಿ ಮತ್ತು ದಿಟ್ಟವಾಗಿ ನಡೆದ ಘಟನೆಯನ್ನು ಹೇಳುತ್ತಾಳೆ. ಅವಳು ಗರ್ಭ ತೆಗೆಸಿಕೊಂಡು ಬಿಡುವುದಾದರೆ ದೊಡ್ಡ ವಿಷಯವೇ ಆಗುತ್ತಿರಲಿಲ್ಲ, ಗುಸುಗುಸು ಪಿಸು ಪಿಸು ಮಾತಗಳಲ್ಲಿ ವಿಷಯ ಆವರಿಸಿ ಅಲ್ಲಿಯೇ ಬತ್ತಿಯೂ ಹೋಗುತ್ತಿತ್ತು. ಆದರೆ ಅವಳು, ಆ ಗರ್ಭ ತನ್ನದು, ತನ್ನ ರಕ್ತ ಮಾಂಸ ಹಂಚಿಕೊಂಡು ಬೆಳೆದ ಜೀವ ಅದನ್ನು ತಾನು ಹೇಗೆ ತೆಗೆಸಲು ಸಾಧ್ಯ ಅಥವಾ ಯಾಕೆ ತೆಗೆಸಬೇಕು ಎಂದು ಸವಾಲು ಹಾಕುತ್ತಿರುವುದೇ ಈಗ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಕೊನೆಗೆ ಪಂಚಾಯತ್ ಕರೆಯುತ್ತಾರೆ. ಟಕೂ ಬಾಯಿ ತನ್ನ ಪರವಾಗಿ ಮತ್ತು ತನ್ನ ಗರ್ಭದಲ್ಲಿರುವ ಮಗುವಿನ ಪರವಾಗಿ ವಾದ ಮಂಡಿಸುತ್ತಾಳೆ. ಮುಖ್ಯವಾಗಿ ಈ ಮೊದಲು ಹುಟ್ಟಿದ ಇಬ್ಬರು ಮಕ್ಕಳಂತೆ ಈ ಮಗುವೂ ‘ತನ್ನದು’ ಅಂತ ಗಟ್ಟಿಯಾಗಿ ಹೇಳುತ್ತಾಳೆ. “ಅವನ ಮಗು, ಅವನಿಗೆ ಹುಟ್ಟಿದ ಮಗು” – ಎಂದು ನೋಡುವ ರೀತಿಯನ್ನು ಯಾವುದೇ ಆರ್ಭಟವಿಲ್ಲದೆ ಖಂಡಿಸುತ್ತಾಳೆ; ಒಂದು ಸಹಜ ಸತ್ಯವೆಂಬಂತೆ ಆಡುತ್ತಾಳೆ. ಅವಳ ಮೇಲೆ ಊರಿಂದ ಹೊರಗೆ ಹೋಗುವಂತೆ ಬಹಿಷ್ಕಾರ ಹಾಕಿದಾಗ ಉಳಿದ ಹೆಣ್ಣುಮಕ್ಕಳೂ ಸಿಡಿದೇಳುತ್ತಾರೆ. ಪಂಚಾಯತ್‍ನಲ್ಲಿ ನ್ಯಾಯ ನೀಡುವ ನೈತಿಕ ಶಕ್ತಿ ಇಲ್ಲಿ ಯಾರಿಗಿದೆ, ಹೆಂಡತಿಯರಿಂದ ಪರಮ ನಿಷ್ಠೆಯನ್ನು ನಿರೀಕ್ಷಿಸುವ ಗಂಡುಮಕ್ಕಳು ತಮ್ಮ ಲೈಂಗಿಕತೆಗೆ ಸಂಬಂಧಿಸಿದ ಹಾಗೆ ಹೆಂಡಂದಿರಿಗೆ ಎಷ್ಟು ನಿಷ್ಠರಾಗಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ. ಅಂತಿಮವಾಗಿ ಟಕೂ ಬಾಯಿಯ ಗಂಡ ಅವಳನ್ನು ಒಪ್ಪಿಕೊಳ್ಳುತ್ತಾನೆ.

Advertisements

ನಾನು ಈ ಸಿನಿಮಾ ನೋಡಿದಾಗ ಸ್ತ್ರೀವಾದವನ್ನು ಅರ್ಥಮಾಡಿಕೊಳ್ಳುವ ಮೊದಲೇ ಮೆಟ್ಟಲಿನಲ್ಲಿ ಇದ್ದೆ. ನನಗೆ ಅದ್ಭುತ ಅನಿಸಿದ್ದೇ ಇದರಲ್ಲಿ ಅವಳು ತನ್ನ ಗರ್ಭದಲ್ಲಿ ಇರುವ ಮಗುವನ್ನು ತನ್ನ ಮಗು ಅಂತ ಪ್ರತಿಪಾದಿಸಿದ ರೀತಿ. ಸಂತಾನೋತ್ಪತ್ತಿಯ ಪ್ರಕ್ರಿಯೆಯಲ್ಲಿ ‘ಅವಳ’ ಕೆಲಸ ಗಮನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ ಅದು ‘ಅವನ’ ಸೊತ್ತು ಎಂದು ಒಡೆತನ ಸ್ಥಾಪಿತವಾದ ರೀತಿ, ಪುರುಷಪ್ರಧಾನ ವ್ಯವಸ್ಥೆ ಅದನ್ನು ಸಾಧಿಸಿಕೊಂಡ ಬಗೆಯ ಬಗ್ಗೆಯೂ ಅಚ್ಚರಿಯಿತ್ತು. ಹಾಗೆ ನೋಡಿದರೆ ಮಗು ಯಾರ ಸೊತ್ತೂ ಆಗಬೇಕಾಗಿಲ್ಲ; ಅದರಲ್ಲೂ ‘ಅವನ’ ಸೊತ್ತು ಆಗಬೇಕಾದರೆ ಒಂದು ಹನಿ ವೀರ್ಯಾಣುವನ್ನು ದಾಟಿಸಿಬಿಟ್ಟಲ್ಲಿಗೆ ಒಡೆತನ ಸ್ಥಾಪಿಸಲಾಗುವುದಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು.

ಇದೇ ವಿಚಾರಕ್ಕೆ ಪೂರಕವಾಗಿ ಇದೊಂದು ಜನಪದ ಕಥೆ. ಕೂಲಿನಾಲಿ ಮಾಡಿ ಬದುಕುವ ಮಹಿಳೆಯೊಬ್ಬಳ ಕಥೆ. ಮದುವೆ ಆಗುತ್ತದೆ. ಮಗು ಹುಟ್ಟಿದ ಮೆಲೆ ಅವಳ ಗಂಡ ಅವಳನ್ನ ಬಿಟ್ಟು ಇನ್ನೆಲ್ಲೋ ಹೋಗಿ ಬಿಡುತ್ತಾನೆ. ಎಳೆಮಗುವನ್ನು ಒಂಟಿಯಾಗಿ ಕಷ್ಟಪಟ್ಟು ಸಾಕಿ ಬೆಳೆಸುತ್ತಾಳೆ. ಮಗನಿಗೆ ಸುಮಾರು 13-14 ರ ವಯಸ್ಸು, ಆ ಸಮುದಾಯದ ಪ್ರಕಾರ, ದುಡಿಯುವ ವಯಸ್ಸು.. ಗಂಡ ತಿರುಗಿ ಬರುತ್ತಾನೆ. ‘ಈ ಮಗು ನನ್ನದು ನನಗೆ ಕೊಡು’ ಅನ್ನುತ್ತಾನೆ. ಅವಳು ಒಪ್ಪುವುದಿಲ್ಲ. ಪಂಚಾಯತಿ ಕರೆಯುತ್ತಾನೆ. ಮಗನ ನಿಜವಾದ ವಾರಸುದಾರ ಅಪ್ಪ, ಅಪ್ಪನಿಂದಲೇ ಅವನಿಗೆ ಹೆಸರು, ಮರ್ಯಾದೆ ಸಿಗುವುದು – ಅಂತ ಪಂಚಾಯತಿಯಲ್ಲಿ ಅಪ್ಪನ ಕಡೆಗೆ ತೀರ್ಮಾನ ಸಿಗುತ್ತದೆ. ಆಗ ಈ ಮಹಿಳೆ ಒಂದು ಪ್ರಶ್ನೆ ಕೇಳುತ್ತಾಳೆ. “ನಿಮ್ಮ ಮನೆಯಲ್ಲಿ ಒಂದಿಷ್ಟು ಹಾಲು ಇದೆ. ಪಕ್ಕದ ಮನೆಯಿಂದ ಒಂದು ಹನಿ ಹೆಪ್ಪು ತಂದು ಈ ಹಾಲಿಗೆ ಹಾಕುತ್ತೀರ. ಮರುದಿನ ಮೊಸರು ತಯಾರಾಗುತ್ತದೆ. ಪಕ್ಕದ ಮನೆಯವರು ಈ ಮೊಸರು ನಮ್ಮದು, ನಮಗೆ ಕೊಡಿ..ಅಂತ ಕೇಳಿದರೆ ಕೊಟ್ಟು ಬಿಡುತ್ತೀರಾ?” ಪಂಚಾಯತಿ ನಡೆಸುವವರು ಉತ್ತರ ಕೊಡಲಾರದೆ ಮಗುವನ್ನು ಅವಳಿಗೇ ಒಪ್ಪಿಸುತ್ತಾರೆ. ಈ ಉಪಮೆ ಎಲ್ಲಾ ಹೊತ್ತಿಗೆ ಸರಿ ಅಂತ ಹೇಳಲಾಗುವುದಿಲ್ಲ..ಮಕ್ಕಳನ್ನು ಸಾಕುವ ಜವಾಬ್ದಾರಿ ತೆಗೆದುಕೊಳ್ಳಲು ಮನಸ್ಸಿಲ್ಲದ ಗಂಡಸರು, ಎಂಟೋ ಹತ್ತೋ ಹೆರಿಸಿ, ‘ನೀನಾಯಿತು ನಿನ್ನ ಮಕ್ಕಳಾಯಿತು’ ಅಂತ ಆರಾಮವಾಗಿ ನಡೆದುಬಿಡುವ ಸಂದರ್ಭಗಳೂ ಇವೆಯಲ್ಲಾ. ಏನೇ ಇರಲಿ ಈ ಕಥೆ ಮಗುವಿಗೆ ಸಂಬಂಧಿಸಿದಂತೆ ಇರುವ ಒಡೆತನದ ನಂಬಿಕೆಯನ್ನು ಪ್ರಶ್ನಿಸುತ್ತದೆ.

ಈ ಸಂದರ್ಭದಲ್ಲಿ ಒಂದು ವೈಜ್ಞಾನಿಕ ಸತ್ಯವನ್ನೂ ಗಮನಿಸಲೇ ಬೇಕು. ಗಂಡಸಿನ ವೀರ್ಯಾಣು ಎಂಬುದು ಭೂಮಿ ಮೇಲೆ ಬಿತ್ತುವ ಬೀಜದ ಹಾಗೆ ಪರಿಪೂರ್ಣವಲ್ಲ. ವೀರ್ಯಾಣು ಮತ್ತು ಹೆಣ್ಣಿನ ದೇಹದ ಅಂಡಾಣು ಸೇರಿದಾಗ ಮಾತ್ರ ಒಂದು ಜೀವಕಣದ ಸೃಷ್ಟಿಯಾಗುತ್ತದೆ. ಅಲ್ಲಿಗೆ ಹೆಣ್ಣಿನ ದೇಹ ಬರೇ ಒಂದು ಕ್ಷೇತ್ರ ಅಲ್ಲ. ಮಗುವಾಗಿ ರೂಪುಗೊಳ್ಳುವ ಜೀವಕಣದ ಒಂದು ಭಾಗವೂ ಹೌದು. ಆಮೇಲೆ ಎಲ್ಲಾ ಪ್ರಕ್ರಿಯೆ ನಡೆಯುವುದು ಹೆಣ್ಣಿನ ದೇಹದ ಒಳಗೇ ತಾನೇ. ಅಂದರೆ ಪ್ರಜನನ ಕ್ರಿಯೆಯಲ್ಲಿ ಅವಳ ಪಾತ್ರ ಬಹು ದೊಡ್ಡದು; ಮತ್ತು ಪುರಾವೆಯೇ ಬೇಕಿಲ್ಲದ ಸತ್ಯವೂ ಹೌದು. ಅದೇ ತಂದೆ ಯಾರು ಎಂಬುದು ಯಾವಾಗಲೂ ಅನುಮಾನಾಸ್ಪದಕವೇ? ಈ ಅನುಮಾನ ಇರುವುದಕ್ಕೇ ಪುರುಷ ಜಗತ್ತಿನ ಎದೆಯೊಳಗೆ ಒಂದು ರೀತಿಯ ಆತಂಕ, ಭೀತಿ; ಅದಕ್ಕೇ ಒಡೆತನ ಸ್ಥಾಪಿಸುವ ತರಾತುರಿ.

ಚೊಚ್ಚಲ ಗರ್ಭಿಣಿಯ
ಆತಂಕ ಮತ್ತು ಆನಂದವ
ಊಹಿಸಲು ಕೂಡಾ ಆಗದ
ಗಂಡಸರು ಎಷ್ಟು ಬಂಜೆ – ಲಂಕೇಶ್ ತಮ್ಮ ‘ನೀಲು’ ಮೂಲಕ ಅದೆಷ್ಟು ಚೆನ್ನಾಗಿ ಹೇಳಿದ್ದಾರೆ!

ಪ್ರಜನನ ಕ್ರಿಯೆಯಲ್ಲಿ ದೈಹಿಕವಾಗಿ ಇರುವಂತಹ ಯಾವುದೇ ಪ್ರಕ್ರಿಯೆಯನ್ನು ಪುರುಷರು ಹಂಚಿಕೊಳ್ಳಲು ಸಾಧ್ಯವಾಗದು ನಿಜ, ಆದರೆ ಆ ಹೊತ್ತಿನಲ್ಲಿ ಕಾಳಜಿಯಿಂದ, ಪ್ರೀತಿಯಿಂದ ಜೊತೆಗಿದ್ದು, ಆರೈಕೆ ಮಾಡುತ್ತಾ, ಆಪ್ತವಾದ ಸಾಂಗತ್ಯ ನೀಡಿದರೆ ನಿಜವಾದ ತಂದೆತನವನ್ನು ಹೊಂದಬಹುದು. ಇಲ್ಲಿ ಬೇಕಾಗಿರುವುದು ಒಡೆತನ ಅಲ್ಲ ತಮ್ಮದು ಎಂಬ ಅಕ್ಕರೆ ಮತ್ತು ಬದ್ಧತೆ ಅಷ್ಟೇ. ‘ರಿಹಾಯಿ’ ಅಂದರೆ ಬಿಡುಗಡೆ ಅಂತ ಅರ್ಥ. ನನಗೆ ಹಳೆಯ ಚಿಂತನೆಯೊಂದರಿಂದ ಬಿಡುಗಡೆ ಸಿಕ್ಕ ಹಾಗೆ ಅನಿಸಿತ್ತು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X