ರಾಜ್ಯ ರಾಜಧಾನಿ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಜನವರಿ 7ರಂದು 21ನೇ ಚಿತ್ರಸಂತೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ, ಬೆಂಗಳೂರು ಸಂಚಾರ ಪೊಲೀಸ್ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ತಿಳಿಸಿದೆ.
ದೇಶದ ಎಲ್ಲೆಡೆಯಿಂದ ಕಲಾವಿದರು ತಮ್ಮ ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ತಿನ ಆವರಣ ಮತ್ತು ಕುಮಾರ ಕೃಪಾ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗದಲ್ಲಿ ಹಾಗೂ ಹರೇ ಕೃಷ್ಣಾ ರಸ್ತೆಯ ಉಕ್ಕಿನ ಕೆಳಸೇತುವೆ ಭಾಗದ ಶಿವಾನಂದ ವೃತ್ತದಿಂದ ಗುರುರಾಜ ಜಂಕ್ಷನ್ ಬಳಿ ಇರುವ ನವ ಕರ್ನಾಟಕ ಪಬ್ಲಿಕೇಷನ್ ಕಟ್ಟಡದವರೆಗಿನ ಉತ್ತರ ಭಾಗದ ರಸ್ತೆಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇದನ್ನು ವೀಕ್ಷಿಸಲು ಮತ್ತು ಕಲಾಕೃತಿಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಆಗಮಿಸುತ್ತಾರೆ.
ಜನವರಿ 7ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕುಮಾರ ಕೃಪಾ ರಸ್ತೆಯಲ್ಲಿ ಹಾಗೂ ಹರೇ ಕೃಷ್ಣಾ ರಸ್ತೆಯ ಉಕ್ಕಿನ ಕೆಳಸೇತುವೆ ಭಾಗದ ಶಿವಾನಂದ ವೃತ್ತದಿಂದ ಗುರುರಾಜ ಜಂಕ್ಷನ್ ಬಳಿ ಇರುವ ನವ ಕರ್ನಾಟಕ ಪಬ್ಲಿಕೇಷನ್ ಕಟ್ಟಡದವರೆಗಿನ ಉತ್ತರ ಭಾಗದ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಹಾಗೂ ವಾಹನ ನಿಲುಗಡೆಗೆ ಬೆಂಗಳೂರು ಸಂಚಾರ ಪೊಲೀಸ್ ವ್ಯವಸ್ಥೆ ಮಾಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ವಾಹನಗಳ ಮಾರ್ಗ ಬದಲಾವಣೆ
ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನ ಸಂಚಾರವನ್ನು ರೇಸ್ ವ್ಯೂ ಜಂಕ್ಷನ್ ಮೂಲಕ ಕೆ.ಕೆ.ರಸ್ತೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್ – ಬಸವೇಶ್ವರ ವೃತ್ತ – ಹಳೆ ಹೈಗ್ರೌಂಡ್ಸ್ ಜಂಕ್ಷನ್, ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಮುಂದೆ ಸಾಗಬಹುದಾಗಿದೆ.
@CPBlr @Jointcptraffic @DCPTrWestBCP @acpcentraltrf @blrcitytraffic @BlrCityPolice
“ಸಂಚಾರ ಸಲಹೆ”
“Traffic Advisory” pic.twitter.com/y8ngu04COi— HIGH GROUND TRAFFIC BTP (@highgroundtrfps) January 5, 2024
ಟಿ.ಚೌಡಯ್ಯ ರಸ್ತೆಯಿಂದ ಬಂದು ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕೆ.ಕೆ.ರಸ್ತೆ ಪ್ರವೇಶಿಸುವ ವಾಹನಗಳನ್ನು ವಿಂಡ್ಸರ್ ಮ್ಯಾನರ್ ಬಳಿ ನಿರ್ಬಂಧಿಸಿದ್ದು, ಸದರಿ ವಾಹನಗಳು ಟಿ.ಚೌಡಯ್ಯ ರಸ್ತೆ – ಹಳೆ ಹೈಗ್ರೌಂಡ್ಸ್ ಜಂಕ್ಷನ್- ಎಲ್.ಆರ್.ಡಿ.ಇ – ಬಸವೇಶ್ವರ ವೃತ್ತ – ರೇಸ್ ಕೋರ್ಸ್ ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ.
ವಾಹನ ನಿಲುಗಡೆ ಸ್ಥಳ
- ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನಗಳು
- ಕ್ರೆಸೆಂಟ್ ರಸ್ತೆಯಲ್ಲಿ, ಗುರುರಾಜ ಕಲ್ಯಾಣ ಮಂಟಪದಿಂದ ಹೋಟೆಲ್ ಜನಾರ್ದನವರೆಗೆ ರಸ್ತೆಯ ಪಶ್ಚಿಮಕ್ಕೆ, ನಾಲ್ಕು ಚಕ್ರ ವಾಹನಗಳು
- ಸರ್ಕಾರಿ ವಸತಿ ಗೃಹ ಕ್ರೆಸೆಂಟ್ ರಸ್ತೆ, ಇಲ್ಲಿ ದ್ವಿಚಕ್ರ ವಾಹನಗಳು
- ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ, ರಸ್ತೆಯ ಪೂರ್ವ ಭಾಗಕ್ಕೆ, ನಾಲ್ಕು ಚಕ್ರ ವಾಹನಗಳು
- ಸೇವಾದಳ ಶಾಲೆ ಆವರಣ, ಕ್ರಸೆಂಟ್ ಕ್ರಾಸ್ ರಸ್ತೆ, ನಾಲ್ಕು ಚಕ್ರದ ವಾಹನಗಳು
- ಬಿಡಿಎ ಆವರಣ ನಿಲುಗಡೆ ಸ್ಥಳದಲ್ಲಿ ನಾಲ್ಕು ಚಕ್ರ ವಾಹನಗಳು
ವಿಶೇಷ ಮನವಿ
ವಾಹನಗಳ ನಿಲುಗಡೆಗೆ ಕೆ.ಕೆ.ರಸ್ತೆಯ ಸುತ್ತಮುತ್ತ ಸ್ಥಳಾವಕಾಶ ಕೊರತೆ ಇರುವುದರಿಂದ ಕಾರ್ಯಕ್ರಮಕ್ಕೆ ಬರುವವರು ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಬಳಸಲು ಬೆಂಗಳೂರು ಸಂಚಾರ ಪೊಲೀಸ್ ಕೋರಿದೆ.