“ಸಾಲಮನ್ನಾ ಪ್ರಕ್ರಿಯೆಯಲ್ಲಿ ಏಕೆ ವಿಳಂಬವಾಗುತ್ತಿದೆ? ಸಾರ್ವಜನಿಕರ ಬಳಕೆಗೆ ಶೌಚಾಲಯಗಳು ಏಕಿಲ್ಲ?” ಎಂದು ಪ್ರಶ್ನಿಸಿದ ಪತ್ರಕರ್ತನ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿ ರೆಕಾರ್ಡ್ ಆದ ವಿಡಿಯೊವನ್ನು ಡಿಲಿಟ್ ಮಾಡಿರುವ ಘಟನೆ ಬಿಜೆಪಿ ಅಧಿಕಾರದಲ್ಲಿರುವ ಅಸ್ಸಾಂನಲ್ಲಿ ನಡೆದಿದೆ.
ಗುವಾಹಟಿ ಮೂಲದ ಪತ್ರಕರ್ತರೊಬ್ಬರು ನಾಗಾವ್ ಡೆಪ್ಯುಟಿ ಕಮಿಷನರ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಕೆಲವು ಗಂಟೆಗಳ ಕಾಲ ಬಂಧಿಸಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ಮೊಮೊರಿ ಕಾರ್ಡ್ ಕಿತ್ತುಕೊಂಡು ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿರುವ ಗಂಭೀರ ಆರೋಪ ಬಂದಿದೆ.
ಎನ್‌ಬಿ ನ್ಯೂಸ್‌ನ ಮುಖ್ಯ ವರದಿಗಾರ ದೀಪಂಕರ್ ಮೇಧಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಪೊಲೀಸರು ಎಳೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
“ನಾಗಾವ್ ಡೆಪ್ಯುಟಿ ಕಮಿಷನರ್ ನರೇಂದ್ರ ಕುಮಾರ್ ಶಾ ಅವರು ಸೂಚನೆ ನೀಡಿದ ಬಳಿಕ ನನ್ನನ್ನು ನರೇಂದ್ರ ಕುಮಾರ್ ಅವರ ಕಚೇರಿಯಿಂದ ಎಳೆದುಕೊಂಡು ಹೋದ ಪೊಲೀಸರು ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಬಂಧಿಸಿದ್ದರು” ಎಂದು ಪತ್ರಕರ್ತ ಮೇಧಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಮೇಧಿ ವಿರುದ್ಧ ಯಾವುದೇ ಎಫ್‌ಐಆರ್ ಇರಲಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಪತ್ರಕರ್ತ ಮೇಧಿ, “ನಾನು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ” ಎಂದು ಮಾಧ್ಯಮಗಳಿಗೆ ಹೇಳಿರುವುದನ್ನು ನೋಡಬಹುದು. ಆದರೆ ಅಧಿಕಾರಿಗಳು ಮೇಧಿಯವರ ಎದೆಯ ಮೇಲೆ ಕೈಹಾಕಿ ತಳ್ಳಿದ್ದಾರೆ.
ಎನ್‌ಬಿ ನ್ಯೂಸ್‌ನ ಸಂಪಾದಕ ಅತಾನು ಭುಯಾನ್ ಪ್ರತಿಕ್ರಿಯಿಸಿ, “ಪೊಲೀಸರು ಮೆಮೊರಿ ಕಾರ್ಡ್‌ನಲ್ಲಿದ್ದ ಎಲ್ಲ ವಿಡಿಯೊಗಳನ್ನು ಡಿಲೀಟ್ ಮಾಡಿದ ನಂತರ ಮೇಧಿ ಅವರ ಅಧಿಕೃತ ಕ್ಯಾಮೆರಾವನ್ನು ಹಿಂದಿರುಗಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಅಸ್ಸಾಂನ ಪತ್ರಕರ್ತ ಸಂಘಟನೆಗಳು ಈ ಘಟನೆಯನ್ನು ಖಂಡಿಸಿವೆ. “ಈ ಘಟನೆಯ ಹಿಂದೆ ಉನ್ನತ ಅಧಿಕಾರಿಗಳ ಕೈವಾಡವಿದೆ” ಎಂದು ದೂರಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಾಗಾವ್ ಡಿಸಿ ಶಾ, “ಘಟನೆ ದುರಾದೃಷ್ಟಕರ. ಮಾಧ್ಯಮ ಮತ್ತು ಪತ್ರಕರ್ತರ ಬಗ್ಗೆ ನನಗೆ ಗೌರವವಿದೆ. ತನ್ನ ಚೇಂಬರ್‌ಗೆ ಪ್ರವೇಶಿಸಿದ ಪತ್ರಕರ್ತ, ಮಹಿಳಾ ಕಾನ್‌ಸ್ಟೆಬಲ್ ಜೊತೆಗಿನ ವಾಗ್ವಾದದ ಬಗ್ಗೆ ದೂರು ನೀಡಲು ಮುಂದಾದರು. ನನ್ನ ಅನುಮತಿ ಇಲ್ಲದೆ ರೆಕಾರ್ಡ್ ಮಾಡಿಕೊಂಡರು” ಎಂದು ಆರೋಪಿಸಿದ್ದಾರೆ.
“ನಾನು ಅವರೊಂದಿಗೆ ಮಾತನಾಡುವಾಗ ಅವರು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಅವರು ಸ್ವಲ್ಪ ಉದ್ರೇಕಗೊಂಡರು. ನಾನು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಬಯಸಿದ್ದರು. ಹಾಗೆ ಮಾಡಲು ಸಾಧ್ಯವಾಗಲಿಲ್ಲ. ರೆಕಾರ್ಡ್ ಮಾಡಿಕೊಳ್ಳದಂತೆ ನಯವಾಗಿ ವಿನಂತಿಸಿಕೊಂಡರೂ ಅವರು ಕೇಳಲಿಲ್ಲ. ನಂತರ ಆತನನ್ನು ಎಳೆದುಕೊಂಡು ಹೋಗಲು ಆದೇಶಿಸಿದೆ. ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿಲ್ಲ” ಎಂದು ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ ಪತ್ರಕರ್ತ ಮೇಧಿ ಪ್ರತಿಕ್ರಿಯಿಸಿ, “62 ವರ್ಷದ ಮಹಿಳೆಯ ಸಹಾಯಕ್ಕಾಗಿ ನಾನು ಧಾವಿಸಿದ್ದೆ. ಸಾಲಮನ್ನಾದ ದಾಖಲೆಗಳನ್ನು ಅನುಮೋದಿಸುವಂತೆ ಕೋರಿದ್ದೆ. ಅದಕ್ಕಾಗಿ ಅಪಾಯ್ಮೆಂಟ್ ಕೊಟ್ಟಿದ್ದರು. ಅಸ್ಸಾಂ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆಯ ಪತಿ ಎರಡು ದಶಕಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು” ಎಂದು ವಿವರಿಸಿದ್ದಾರೆ.
“ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಕೆಲವು ದಾಖಲೆಗಳಿಗೆ ಸಹಿ ಮಾಡುವವರೆಗೆ ಸಾಲಮನ್ನಾ ಸಾಧ್ಯವಿಲ್ಲ ಎಂದು ಇಲಾಖೆ ಹೇಳಿತ್ತು. ಆದರೆ ಸುಮಾರು ಆರು ತಿಂಗಳಿನಿಂದ, ದಾಖಲೆಗಳಿಗೆ ಸಹಿ ಮಾಡದೆ ಕಚೇರಿಯಿಂದ ಕಚೇರಿಗೆ ಆ ಮಹಿಳೆಯನ್ನು ಅಲೆದಾಡಿಸುತ್ತಿದ್ದರು. ನೊಂದ ಮಹಿಳೆ ನನ್ನನ್ನು ಸಂಪರ್ಕಿಸಿದ್ದರು. ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದೆ” ಎಂದು ಮೇಧಿ ತಿಳಿಸಿರುವುದಾಗಿ ’ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ.
“ಅನುಮತಿ ಪಡೆದುಕೊಂಡೇ ಅವರ ಕಚೇರಿಗೆ ಹೋಗಿದ್ದೆ. ಬೈಟ್ ನೀಡುವುದಾಗಿ ಹೇಳಿದ್ದರು. ಆದರೆ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಿದ್ದಂತೆ, ಇದನ್ನೆಲ್ಲ ಕೇಳಲು ನೀನ್ಯಾರು ಎಂದು ಹಲ್ಲೆ ನಡೆಸಿದ್ದಾರೆ” ಎಂದು ಎನ್‌ಬಿ ನ್ಯೂಸ್ ಸಂಪಾದಕ ಭುಯಾನ್ ಹೇಳಿದ್ದಾರೆ.
ಡಿಸಿ ಕಚೇರಿಯಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಪ್ರವೇಶ ನಿರಾಕರಣೆ ಮಾಡಿರುವ ಬಗ್ಗೆಯೂ ಮೇಧಿ ಪ್ರಶ್ನೆಯನ್ನು ಕೇಳಿದ್ದರು. “ಒಬ್ಬ ಮಹಿಳಾ ಕಾನ್ಸ್‌ಟೇಬಲ್ ಕೆಟ್ಟ ಪದಗಳನ್ನು ಬಳಸಿ ಮಹಿಳೆಯನ್ನು ನಿಂದಿಸಿದ್ದಾರೆ. ನಿನ್ನ ತಲೆಯನ್ನು ಬಳಸಿ ಮೂತ್ರ ವಿಸರ್ಜನೆ ಮಾಡು ಎಂದಿದ್ದಾರೆ” ಎಂದು ವರದಿಯಾಗಿದೆ.
ಇದನ್ನೂ ಓದಿರಿ: ನಮ್ಮ ದ್ವೀಪವನ್ನು ಭಾರತ ಗುರಿಯಾಗಿಸಿದೆ: ಮಾಲ್ಡಿವ್ಸ್ ಸಚಿವ ಆರೋಪ