ಕಲಾವಿದರನ್ನು ಉಳಿಸಿ ಬೆಳೆಸುವ ಸಲುವಾಗಿ ಜನಪರ ಉತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತದೆ ಎಂದು ವಿಧಾನ ಪರಿಷತ್ ಶಾಸಕ ಅರವಿಂದಕುಮಾರ ಅರಳಿ ಹೇಳಿದರು.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರ ಬೀದರನಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ, ಕರ್ನಾಟಕ ಸಂಭ್ರಮ-50 ಅಂಗವಾಗಿ ಹಮ್ಮಿಕೊಂಡಿದ್ದ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಜನಪದ ಕಲೆಯು ಗ್ರಾಮೀಣ ಭಾಗದ ಬಡವರು, ಹಿಂದುಳಿದವರು ಮತ್ತು ದಲಿತರಲ್ಲಿ ಉಳಿದಿದೆ. ಹಾಗಾಗಿ ಈ ಕಲೆಯನ್ನು ತಮ್ಮ ಯುವ ಪೀಳಿಗೆಗೆ ಮುಂದುವರೆಸಿಕೊಂಡು ಹೋಗಲು ಅವರಿಗೂ ಕಲಿಸಬೇಕೆಂದರು. ಇಂದಿನ ಕಲೆಯಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ, ಹಿಂದೆ ನಮ್ಮ ತಾತ, ಅಜ್ಜಿಯರು ನಮಗೆ ಹಲವಾರು ಜನಪದ ಹಾಡುಗಳನ್ನು ಕಲಿಸುತ್ತಿದ್ದರು. ಹಳ್ಳಿಗಳಲ್ಲಿ ನಾಟಕ ಕೋಲಾಟ, ಭಜನೆ ಪದಗಳನ್ನು ನಾವು ಹಿಂದೆ ಕುಳಿತು ಕೇಳುತ್ತಿದ್ದೇವು. ಈಗ ಇಂಥಹ ಕಲೆಗಳು ನಶಿಸುತ್ತಿದ್ದು ಅದನ್ನು ಕಲಾವಿದರಾದ ತಾವುಗಳು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಹಿಂದೆ ಕಲಾವಿದರಿಗೆ ನೀಡುತ್ತಿದ್ದ ಎರಡು ಸಾವಿರ ಮಾಶಾಸನವನ್ನು ಮೂರು ಸಾವಿರ ಮಾಡಲಾಗಿದೆ” ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, “ಕಲ್ಯಾಣ ಕರ್ನಾಟಕ ಕಲಾವಿದರಲ್ಲಿ ನಿಜವಾದ ಕಲೆಯಿದ್ದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಕೌಶಲ್ಯ ಅವರಲ್ಲಿ ಇಲ್ಲ, ಹಾಗಾಗಿ ನಮ್ಮ ಭಾಗದ ಏಳು ಜಿಲ್ಲೆಗಳ ಕಲಾವಿದರಿಗೆ ಹತ್ತು ದಿನಗಳ ತರಬೇತಿ ಕೊಡುವಂತಾಗಬೇಕು. ಈ ಭಾಗದಲ್ಲಿ 75 ಸಾವಿರ ಜನ ಕಲಾವಿದರಿದ್ದಾರೆ” ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿ, “ಕರ್ನಾಟಕ ಸಂಭ್ರಮ-50 ರ ಅಂಗವಾಗಿ ಜನಪರ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡುವದರ ಜೊತೆಗೆ ಪ್ರತಿಭಾವಂತ ಕಲಾವಿದರನ್ನು ಗುರುತಿಸಲು ಅನುಕೂಲವಾಗುತ್ತದೆ” ಎಂದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ವಿವಿಧ ಕಲಾ ತಂಡಗಳ ಮೆರವಣಿಗೆಗೆ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್. ದಿಲೀಪ್ ಬದೋಲೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಚಾಲನೆ ನೀಡಿದರು. ಡೊಳ್ಳು ಕುಣಿತ, ಹೆಜ್ಜೆಮೇಳ, ಲಂಬಾಣಿ ನೃತ್ಯ, ತಮಟೆವಾದನ ಹಾಗೂ ಪೋತರಾಜ ವೇಷದಾರಿಗಳು ನೋಡುಗರ ಗಮನ ಸೆಳೆದವು.
ಈ ಸುದ್ದಿ ಓದಿದ್ದೀರಾ? ಬಸವಣ್ಣರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಲು ಸಿಎಂಗೆ ಸ್ವಾಮೀಜಿಗಳ, ಚಿಂತಕರ ಒತ್ತಾಯ
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಶಂಬುಲಿಂಗ ವಾಲದೊಡ್ಡಿ, ಬೀದರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಮ್.ಎಸ್.ಮನೋಹರ, ಹಿರಿಯರಾದ ಮಾರುತಿ ಕಂಟೆ, ಸಾಹಿತಿ ಎಸ್.ಬಿ.ಕುಚಬಾಳ ಸೇರಿದಂತೆ ಬೀದರ ಜಿಲ್ಲೆ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಂದ ಆಗಮಿಸಿದ ವಿವಿಧ ಕಲಾವಿದರು ಭಾಗವಹಿಸಿದ್ದರು.