ಡಾಲಿ ಧನಂಜಯ ನಟನೆಯ ʼಹೊಯ್ಸಳʼ ಚಿತ್ರದ ಬಳಿಕ ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಹೇಳಿಕೊಳ್ಳವಂತಹ ಚಿತ್ರಗಳು ತೆರೆಕಂಡಿಲ್ಲ. ಕಳೆದ ವಾರ ಬಿಡುಗಡೆಯಾದ ʼವೀರಂʼ ಮತ್ತು ʼಪೆಂಟಗನ್ʼ ಚಿತ್ರಗಳು ನಿರೀಕ್ಷಿತ ಮಟ್ಟಕ್ಕೆ ಪ್ರದರ್ಶನ ಕಂಡಿಲ್ಲ. ʼಐಪಿಎಲ್ʼ ಪಂದ್ಯಾವಳಿಗಳು ಮತ್ತು ರಾಜಕೀಯ ಪಕ್ಷಗಳ ಅಬ್ಬರದ ಚುನಾವಣಾ ಪ್ರಚಾರಗಳು ಏಕಕಾಲಕ್ಕೆ ನಡೆಯುತ್ತಿರುವುದರಿಂದ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಶಿವಾಜಿ ಸುರತ್ಕಲ್-2 ಕನ್ನಡದ ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿವೆ.
ಶಿವಾಜಿ ಸುರತ್ಕಲ್-2
ಈ ಹಿಂದೆ ಆಕಾಶ್ ಶ್ರೀವತ್ಸ ಮತ್ತು ರಮೇಶ್ ಅರವಿಂದ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ʼಶಿವಾಜಿ ಸುರತ್ಕಲ್ʼ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿತ್ತು. ಪತ್ತೆದಾರಿ ಕಥಾಹಂದರವನ್ನು ಹೊಂದಿದ್ದ ಈ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ʼಶಿವಾಜಿ ಸುರತ್ಕಲ್-2ʼ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತಾ ಶೃಂಗೇರಿ, ನಾಸರ್ ಸೇರಿದಂತೆ ಬಹುತಾರಾಗಣವನ್ನು ಹೊಂದಿರುವ ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಕಥಾಹಂದರವುಳ್ಳ ʼಶಿವಾಜಿ ಸುರತ್ಕಲ್-2ʼ ಚಿತ್ರಕ್ಕೆ ಅನೂಪ್ ಗೌಡ ಬಂಡವಾಳ ಹೂಡಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಟ್ರೈಲರ್ ಮೂಲಕ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದೆ.
ಉಂಡೆನಾಮ
ಕಳೆದ ಕೆಲ ವರ್ಷಗಳಿಂದ ಬೆಳ್ಳಿ ತೆರೆಯಿಂದ ಅಂತರ ಕಾಯ್ದುಕೊಂಡಿದ್ದ ಹಾಸ್ಯನಟ ಕೋಮಲ್ ʼಉಂಡೆನಾಮʼ ಚಿತ್ರದ ಮೂಲಕ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕೋಮಲ್ ಸಾಫ್ಟವೇರ್ ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿರ್ದೇಶಕ ಕೆಎಲ್ ರಾಜಶೇಖರ್ ಲಾಕ್‌ಡೌನ್ ಸಂದರ್ಭದ ಸುತ್ತ ಚಿತ್ರದ ಕತೆ ಹೆಣೆದಿದ್ದಾರೆ. ಧನ್ಯ ಬಾಲಕೃಷ್ಣ ಕೋಮಲ್‌ಗೆ ಜೊತೆಯಾಗಿ ನಟಿಸಿದ್ದು, ತಬಲಾ ನಾಣಿ, ಬ್ಯಾಂಕ್ ಜನಾರ್ಧನ್, ಹರೀಶ್ ರಾಜ್, ಅಪೂರ್ವ ಶ್ರೀ ತನಿಷಾ ಕುಪ್ಪಂದ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶ್ರೀಧರ್ ವಿ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಟಿ ಆರ್ ಚಂದ್ರಶೇಖರ್ ಬಂಡವಾಳ ಹೂಡಿರುವ ʼಉಂಡೆನಾಮʼ ಚಿತ್ರ ಈ ವಾರ ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.
ಮಾರಿಗುಡ್ಡದ ಗಡ್ಡಧಾರಿಗಳು
ಸಲಗ ಸೂರಿ ಅಣ್ಣ ಖ್ಯಾತಿಯ ದಿನೇಶ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼಮಾರಿಗುಡ್ಡದ ಗಡ್ಡಧಾರಿಗಳುʼ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಚಂದ್ರಕಾಂತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ಮತ್ತು ಟ್ರೈಲರ್ ಮೂಲಕ ಗಮನ ಸೆಳೆದಿರುವ ಈ ಚಿತ್ರದಲ್ಲಿ ಯುವ ಪ್ರತಿಭೆ ನಮ್ರತಾ ಅಗಸಿಮನಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವಿನಾಶ್, ಗಣೇಶ್ ರಾವ್, ಪ್ರವೀಣ್ ರಾಜ್, ಪ್ರಶಾಂತ್ ಸಿದ್ದಿ, ರಮೇಶ್ ಭಟ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ.ಎಮ್ ಇಂದ್ರ ಅವರ ಹಿನ್ನೆಲೆ ಸಂಗೀತವಿರುವ ಈ ಚಿತ್ರಕ್ಕೆ ನಾಯಕ ದಿನೇಶ್ ಮತ್ತು ವಿಜಯ್ ಎಂಬುವವರು ಬಂಡವಾಳ ಹೂಡಿದ್ದಾರೆ.
ಸುರಾರಿ
ಯುವ ಪ್ರತಿಭೆ ವಿಶಾಲ್ ಅಜಯ್ ತಾವೇ ಬಂಡವಾಳ ಹೂಡಿ ನಟಿಸಿ, ನಿರ್ದೇಶಿಸಿರುವ ʼಸುರಾರಿʼ ಚಿತ್ರ ಕೂಡ ಈ ವಾರ ತೆರೆಕಾಣುತ್ತಿದೆ. ಕೌಟುಂಬಿಕ ಕಥಾಹಂದರ ಮತ್ತು ಆ್ಯಕ್ಷನ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಅವಿನಾಶ್, ಮಿಮಿಕ್ರಿ ಗೋಪಿ, ಓಂ ಪ್ರಕಾಶ್ ರಾವ್, ಚಿತ್ರಾಲ್ ರಂಗಸ್ವಾಮಿ, ಅರ್ಚನಾ ಸಿಂಗ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಆರ್ಯನ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.
ಉಳಿದಂತೆ ತೆಲುಗಿನ ಸ್ಟಾರ್ ನಟಿ ಸಮಂತಾ ಮುಖ್ಯಭೂಮಿಕೆಯ ʼಶಾಕುಂತಲಂʼ, ರಾಘವ ಲಾರೆನ್ಸ್ ನಟನೆಯ ʼರುದ್ರುಡುʼ, ಐಶ್ವರ್ಯಾ ರಾಜೇಶ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ತಮಿಳಿನ ʼಸೊಪ್ಪನ ಸುಂದರಿʼ ಮುಂತಾದ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿವೆ.