ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಸಮೀಪ ಇರುವ ಕಂಚುಗಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿತಿಲಗೊಂಡಿದೆ. ಕುಸಿದು ಬೀಳುವ ಹಂತದಲ್ಲಿದೆ. ಆದರೂ, ಶಿಕ್ಷಕರು, ವಿದ್ಯಾರ್ಥಿಗಳು ಪ್ರಾಣ ಭೀತಿಯಲ್ಲಿಯೇ ಪ್ರತೀ ದಿನ ಶಾಲೆಗೆ ಬರುತ್ತಿದ್ದು, ಕಟ್ಟಡ ಕುಸಿರೆ ಭಾರೀ ಅನಾಹುತ ಸಂಭವಿಸುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.
ಈ ಶಾಲೆಯಲ್ಲಿ ಏಳು ತರಗತಿಗಳು ನಡೆಯುತ್ತಿದ್ದು, 185 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಂದು ಆರ್.ಸಿ.ಸಿ ಕಟ್ಟಡ ಸೇರಿದಂತೆ 6 ಕೊಠಡಿಗಳಿದ್ದು, ಇವು ಯಾವುದೇ ಹಂತದಲ್ಲಿ ನೆಲಕಚ್ಚುವ ಸ್ಥಿತಿಯಲ್ಲಿವೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಕೆ. ರವಿ, ಶಿಕ್ಷಣ ಇಲಾಖೆ ಉಪನಿರ್ದೇಶಕರು ಈ ಕಟ್ಟಡ ಶೈಕ್ಷಣಿಕ ಚಟುವಟಿಕೆಗೆ ಯೋಗ್ಯವಾಗಿಲ್ಲ. ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಿಬೇಕು ಎಂಬ ಆದೇಶ ನೀಡಿದ್ದಾರೆ. ಆದರೆ, ಕಟ್ಟಡ ಕೆಡವಿದರೆ ಪಾಠ ಮಾಡಲು ಸ್ಥಳವಿಲ್ಲದೇ ಇದೇ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದೇವೆ.
ಇತ್ತೀಚೆಗಷ್ಟೇ ನಿರ್ಮಿಸಿದ ಆರ್‌ಸಿಸಿ ಕಟ್ಟಡವೂ ಕಳಪೆ ಕಾಮಗಾರಿಯಿಂದ ಕೂಡಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಈ ಬಗ್ಗೆ ಮಾಯಕೊಂಡ ಶಾಸಕರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಮಾದ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.
ಶಾಲೆಯ ಈ ದುಃಸ್ಥಿತಿ ಕಂಡು ಅನೇಕ ಪಾಲಕರು ಮಕ್ಕಳನ್ನು ಸೇರಿಸದೇ ಇತರ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಶಾಲೆಯ ಪಕ್ಕದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವಿದೆ. ಅಲ್ಲಿ ಪ್ರಾಥಮಿಕ ಶಾಲೆಯ 15 ವಿದ್ಯಾರ್ಥಿಗಳು ಇದ್ದಾರೆ. ಒಂದುವೇಳೆ ನಮ್ಮ ಶಾಲೆಯ ಕಟ್ಟಡ ಉತ್ತಮವಾಗಿದ್ದಿದ್ದರೆ ಬೇರೆ ಗ್ರಾಮಗಳ ಬಡ ವಿದ್ಯಾರ್ಥಿಗಳೂ ಬಂದು ಇಲ್ಲಿ ಕಲಿಯುತ್ತಿದ್ದರು ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಹಿಂದುಳಿದ, ಪರಿಶಿಷ್ಠ ವರ್ಗದ, ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪಾಲಕರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಮಕ್ಕಳನ್ನು ಬೇರೆ ಕಡೆ ಸೇರಿಸಿ ಶಿಕ್ಷಣ ಕೊಡಿಸಲು ಅಸಾಧ್ಯವಾಗದೆ ಇದೇ ಶಾಲೆಯಲ್ಲಿ ಓದಿಸುತ್ತಿದ್ದಾರೆ.
ಶಾಲೆಯ ಕಟ್ಟಡವನ್ನು 1960ರಲ್ಲಿ ನಿರ್ಮಿಸಲಾಗಿದ್ದು, ಮಂಗಳೂರು ಹಂಚಿನ ಛಾವಣಿ ಹೊಂದಿದೆ. ಸುಮಾರು 60ವರ್ಷದ ಹಳೆಯ ಕಟ್ಟಡ ಇದಾಗಿದ್ದು, ಕೂಡಲೇ ಶಿಕ್ಷಣ ಇಲಾಖೆ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಶಾಲೆಯ ಶಿಥಿಲ ಕಟ್ಟಡದ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಿದ್ದೇವೆ. ಮೂಲ ಭೂತ ಸೌಲಭ್ಯದ ಕೊರತೆಯೂ ಇದೆ. ಕಟ್ಟಡ ಸೇರಿದಂತೆ ಉತ್ತಮ ವಾತಾವರಣ ಇದ್ದರೆ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಮಕ್ಕಳೂ ಸಂತಸದಿಂದ ಶಾಲೆಗೆ ಬರುತ್ತಾರೆ. ಈ ವರ್ಷ ಮಳೆ ಕಡಿಮೆ ಇರುವುದರಿಂದ ಶಾಲೆ ಕಟ್ಟಡ ಕುಸಿದು ಬಿದ್ದಿಲ್ಲ. ಇಂತಹ ಶಿಥಿಲ ಕಟ್ಟಡದಲ್ಲಿಯೇ ಪಾಠ ನಡೆಸುತ್ತಿದ್ದೇವೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಡಿ.ಕೆ. ರಾಜು.
ಒಟ್ಟಿನಲ್ಲಿ ಬಡವರ ಮಕ್ಕಳಿಗೆ ಆಸರೆಯಾಗಬೇಕಿದ್ದ ಶಾಲೆಯೊಂದರಲ್ಲಿ ಜೀವ ಕೈಯಲ್ಲಿ ಹಿಡಿದು ಮಕ್ಕಳು ಶಿಕ್ಷಕರು ಕಾಲ ಕಳೆಯುವಂತಾಗಿದೆ. ಆದಷ್ಟು ಬೇಗ ನಮ್ಮ ಊರ ಶಾಲೆಗೆ ಒಂದು ಕಟ್ಟಡದ ವ್ಯವಸ್ಥೆ ಮಾಡಿ ಮಕ್ಕಳನ್ನು ರಕ್ಷಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.