ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಪ್ರಾರಂಭಗೊಂಡ ಇಂದಿರಾ ಕ್ಯಾಂಟೀನ್ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಬಂದಿದ್ದ ಗ್ರಾಹಕರಿಂದ ಉತ್ತಮವಾದ ಸ್ಪಂದನೆ ಸಿಕ್ಕಿದೆ.
ಬೆಳಿಗ್ಗೆ ಐದು ರೂ. ದರದಲ್ಲಿ 300 ಜನರಿಗೆ ಶಿರಾ, ಉಪ್ಪಿಟ್ಟು ವಿತರಿಸಲಾಯಿತು. ಸುದ್ದಿ ಹರಡುತ್ತಿದ್ದಂತೆ ಮಧ್ಯಾಹ್ನದ ಊಟದ ಹೊತ್ತಿಗೆ ಬೇರೆ ಬೇರೆ ಗ್ರಾಮಗಳಿಂದ ಬಂದಿದ್ದ ಜನರು ಹತ್ತು ರೂ. ಕೊಟ್ಟು ಅನ್ನ, ತರಕಾರಿ ಸಾಂಬಾರು ಮತ್ತು ಮೊಸರನ್ನು ಸವಿದರು.
ಎಸ್.ಕೆ. ಪಿಯು ಕಾಲೇಜಿನ ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್ ಊಟ ಮಾಡಿ, ಇದೇ ಊಟ ಹೊಟೇಲುಗಳಲ್ಲಿ ತೆಗೆದುಕೊಂಡಿದ್ದರೇ 40ರೂ. ಕೊಡಬೇಕಿತ್ತು. ಇಂದಿರಾ ಕ್ಯಾಂಟೀನ್‌ನಲ್ಲಿ ಹತ್ತು ರೂ. ದರದಲ್ಲಿ ಉತ್ತಮ ಊಟ ಸಿಕ್ಕಿತು. ನಮಗೆ 30ರೂ. ಉಳಿಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಅವರಗೋಳ ಸೇರಿದಂತೆ ಇತರೇ ಗ್ರಾಮದಿಂದ ಬಂದಿದ್ದ ಜನರು ಮಧ್ಯಾಹ್ನದ ಊಟ ಸವಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದರು.
ಗೋಕಾಕದಲ್ಲಿ ನಾಲ್ಕು ವರ್ಷದ ಮತ್ತು ಸವದತ್ತಿಯಲ್ಲಿ ಒಂದು ವರ್ಷ ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಗೋಪಾಲ ಕೋಟೂರ್, ಸೋಮವಾರದಿಂದ ಪ್ರಾರಂಭಗೊಂಡ ಕ್ಯಾಂಟಿನಿಗೆ ಜನರು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ಸೆಲ್ಪ್ ಸ್ಟ್ಯಾಂಡಿಂಗ್ ವ್ಯವಸ್ಥೆ, ಕೈತೊಳೆಯುವ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದುರು.
ನಿಯಮಾನುಸಾರ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟಕ್ಕೆ ತಲಾ 300 ಪ್ಲೇಟ್ ಕೊಡಲಾಗುವುದು. ವಾರದಲ್ಲಿ ಯಾವ ದಿನ ಯಾವ ಆಹಾರ ಕೊಡಲಾಗುವುದು ಎಂಬ ಮಾಹಿತಿ ಅಂಟಿಸಲಾಗಿದೆ. ಸಾರ್ವಜನಿಕರಿಂದ ಹಳೆಯ ದರದಂತೆ ಹಣ ಪಡೆಯಲಾಗುವುದು ಎಂದರು.