ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದ ವೃದ್ಧ ದಂಪತಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿ, ಮೃತರ ತಮ್ಮನ ಮಗ ಸುಕೇಶ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಾರವಾರದ ಉತ್ತರ ಕನ್ನಡ ಜಿಲ್ಲಾ ಸೆಷನ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದ ನಿವಾಸಿ ನಾರಾಯಣ ನಾಯಕ್ (78) ಮತ್ತು ಅವರ ಪತ್ನಿ ಸಾವಿತ್ರಿ ನಾಯಕ್ (74) ಎಂಬರನ್ನು 2019ರ ಡಿಸೆಂಬರ್ 20ರಂದು ಕೊಲೆ ಮಾಡಲಾಗಿತ್ತು. ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದ ದಂಪತಿಗಳು ಒಂದಷ್ಟು ಹಣ ಇಟ್ಟಿದ್ದರು. ಆಗಾಗ್ಗೆ ಅವರ ಮನೆಗೆ ಬರುತ್ತಿದ್ದ ಸುಕೇಶ್, ಅವರಲ್ಲಿ ಹಣ ಇರುವುದನ್ನು ಗಮನಿಸಿದ್ದ. ದುಶ್ಚಟಗಳಿಗೆ ಬಲಿಯಾಗಿದ್ದ ಸುಕೇಶ್, ಹಣಕ್ಕಾಗಿ ತನ್ನ ಸಂಗಡಿಗರಾದ ವೆಂಕಟ್ ರಾಜ್, ನಾಗರಾಜ್ ಮತ್ತು ಭರತ ಜೊತೆ ಸೇರಿ, ದಂಪತಿಗಳನ್ನು ಕೊಲೆ ಮಾಡಿದ್ದ.
ದಂಪತಿಗಳ ಮನೆಯಲ್ಲಿದ್ದ 2 ಲಕ್ಷ ರೂ. ನಗದು ಮತ್ತು 160 ಗ್ರಾಂ ಚಿನ್ನ ತೆಗೆದುಕೊಂಡು, ಸಾಕ್ಷ್ಯನಾಶಕ್ಕಾಗಿ ಮನೆ ಮತ್ತು ಸುತ್ತಮುತ್ತ ಮೆಣಸಿನಕಾಯಿ ಪುಡಿ ಹಾಕಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಭಾರೀ ಕಸರತ್ತು ನಡೆಸಿದ್ದರು.
ಪ್ರಕರಣ ಸಂಬಂಧ ಮೃತರ ಸಂಬಂಧಿಗಳ ಹೇಳಿಕೆ ಸಂಗ್ರಹಿಸಲು ಪೊಲೀಸರು ಸುಕೇಶ್ ಮನೆಗೆ ಹೊರಟಿದ್ದರು. ಈ ವಿಚಾರ ತಿಳಿದ ಸುಕೇಶ್ ಮನೆಯಿಂದ ಪರಾರಿಯಾಗಿದ್ದ. ಆತ ಕಾಣೆಯಾಗಿದ್ದಾನೆಂದು ಕುಟುಂಬಸ್ಥರು ದೂರು ದಾಖಲಿಸಿದ್ದರು. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಎರಡು ದಿನಗಳ ಬಳಿಕ ಆತ ಪೊಲೀಸರಿಗೆ ಸಿಕ್ಕಿದ್ದ. ಆತನ ಬಳಿ ಫೋನ್ ಇಲ್ಲದೇ ಇರುವುದು ಹಾಗೂ ಆತನ ಆವಭಾವಗಳನ್ನು ಗಮಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ, ತಾನೇ ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ಸುಕೇಶ್ ಒಪ್ಪಿಕೊಂಡಿದ್ದ.
ಪ್ರಕರಣದ ವಿಚಾರಣೆ ನಡೆಸಿರುವ ಉತ್ತರ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದಾರೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.