ರಾಯಚೂರು ನಗರಸಭೆಯ ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಯ 3 ಕೋಟಿ 74 ಲಕ್ಷ ರೂ ಅನುದಾನವನ್ನು ಎಸ್‌ಸಿ ಸಮುದಾಯದ ಜನರೇ ಇಲ್ಲದಿರುವ ಕಡೆ ನಿರ್ವಹಿಸಿರುವ ಜನಪ್ರತಿನಿಧಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ದಿ ಇಲಾಖೆ ಸೂಚನೆ ನೀಡಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜುಪಟ್ಟಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನದ ನಿಯಮಗಳನ್ನು ಉಲ್ಲಂಘಿಸಿರುವ ಕುರಿತು ಜಾರಿ ನಿರ್ದೇಶನಾಲಯ ಮತ್ತು ಎಸ್‌ಇಪಿ ಮತ್ತು ಟಿಎಸ್‌ಪಿ ಕೋಶಕೆ ದೂರು ನೀಡಲಾಗಿತ್ತು. ದೂರಿನ ವಿಚಾರಣೆ ನಡೆಸಿ ತನಿಖಾ ವರದಿಯನ್ನು ಇಲಾಖೆಗೆ ಸಲ್ಲಿಸಲಾಗಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧ್ಯಕ್ಷತೆಯ ಸಮಿತಿಯೂ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕೆ ಸೂಚಿಸಿದೆ” ಎಂದರು.
“2016-17ನೇ ಸಾಲಿನ ಎಸ್‌ಇಪಿ ಅನುದಾನದಲ್ಲಿ ನಗರದ ಗೋಶಾಲಾದಿಂದ ಹಿಂದಿ ವರ್ಧಮಾನ್ ಶಾಲೆ ಮೂಲಕ ಜಮುನಾ ಹೋಟೆಲ್‌ವರೆಗೆ ರಸ್ತೆ ಹಾಗೂ ಬೀದಿದೀಪ ಅಳವಡಿಕೆಗೆ ₹80 ಲಕ್ಷ, ಸರಾಫ್ ಬಜಾರನಿಂದ ಮೋಚಿವಾಡದವರೆಗೆ ಬಿಟಿ ರಸ್ತೆಗೆ ₹80 ಲಕ್ಷ, ಎಂ.ಈರಣ್ಣನವರ ಮನೆಯಿಂದ ತೀನ್ ಕಂದೀಲ್‌ವರೆಗೆ ಬಿಟಿ ರಸ್ತೆ ನಿರ್ಮಾಣಕ್ಕೆ ₹70 ಲಕ್ಷ ಅನುದಾನ ನೀಡಲಾಗಿತ್ತು. ಅದೇ ರೀತಿ ಟಿಎಸ್‌ಪಿ ಅನುದಾನದಲ್ಲಿ ಮಂಗಳವಾರಪೇಟೆ ಸೂಗಮ್ಮ ಟೀಚರ್ ಮನೆಯಿಂದ ಡಾ.ಸಿನ್ಹಾ ಮನೆ, ಸತ್ಯನಾರಾಯಣ ಮನೆಯವರಿಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ₹50 ಲಕ್ಷ, ಎಸ್‌ಆರ್‌ಎಸ್ ಹೋಟೆಲ್‌ನಿಂದ ಸಿಯಾತಲಾಬ್‌ವರೆಗೆ ₹60 ಲಕ್ಷ, ಎಸ್‌ಬಿಎಚ್ ಕಾಲೋನಿಯಿಂದ ಆಮತಲಾಬ್‌ವರೆಗೆ ರಾಜ್ ಕಾಲುವೆ ನಿರ್ಮಾಣಕ್ಕೆ ₹54 ಲಕ್ಷದ ಯೋಜನೆ ರೂಪಿಸಿದ್ದು, ನಿಯಮಗಳನ್ನ ಉಲ್ಲಂಘಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು” ಎಂದರು.
“ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ 28.94 ಕೋಟಿ ರೂ ಅನುದಾನ ಕೆಕೆಆರ್‌ಡಿಪಿ ನೀಡಿರುವುದನ್ನು ಆಕ್ಷೇಪಿಸಿ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಕೆಕೆಆರ್‌ಡಿಬಿಯಿಂದ ನೀಡಲಾಗಿದ್ದ 28.94 ಕೋಟಿ ರೂ. ಅನುದಾನದಲ್ಲಿ ಬಿಡುಗಡೆಗೊಳಿಸಲಾಗಿದ್ದ 11.41 ಕೋಟಿ ರೂ. ಅನುದಾನವನ್ನು ಹಿಂಪಡೆಯಲಾಗಿದೆ. ಕಳೆದ ಐದಾರು ವರ್ಷಗಳಿಂದ ನಡೆದಿರುವ ನೀಡಿರುವ ದೂರುಗಳು ಇತ್ಯರ್ಥವಾಗಿದೆ. ಆದರೆ ವಿಳಂಬದಿಂದ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆಗೆ ಅಡ್ಡಿಯಾಗುವಂತಾಗಿದೆ. ಕೂಡಲೇ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಭ್ರೂಣಹತ್ಯೆ ಮಹಾ ಅಪರಾಧ, ಭ್ರೂಣಹತ್ಯೆ ನಿಲ್ಲಿಸಿ; ಸೀಮಂತ ಕಾರ್ಯಕ್ರಮದಲ್ಲಿ ಜಾಗೃತಿ
“ನಗರಸಭೆ ಪೌರಾಯುಕ್ತ ರಮೇಶ ನಾಯಕ, ಅಂದಿನ ನಗರಸಭೆ ಅಧ್ಯಕ್ಷ ಹೇಮಲತಾ ಬೂದೆಪ್ಪ ಹಾಗೂ ಅಭಿಯಂತರರುಗಳಾದ ಶರಣಪ್ಪ ಇತ್ಲಿ, ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ ಗೋಪಿಶೆಟ್ಟ, ಜಿಲ್ಲಾ ನಗರಾಭಿವೃದ್ದಿ ಕೋಶ ಹಿಂದಿನ ಯೋಜನಾಧಿಕಾರಿ ಈರಪ್ಪ ಬಿರಾದಾರ ಸೇರಿದಂತೆ ಎಂಟು ಮಂದಿ ವಿರುದ್ಧ ಆರೋಪ ಸಾಬೀತಾಗಿದ್ದು, ಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ನಗರಾಭಿವೃದ್ದಿ ಇಲಾಖೆ ಸೂಚನೆ ನೀಡಿದೆ” ಎಂದು ಹೇಳಿದರು.
ಈ ಸಂರ್ಬದಲ್ಲಿ ಮಹಿಬೂಬ್, ಮೌನೇಶ ಕೋರಿ, ಗಂಗಾಧರ, ಪರಶುರಾಮ, ಜಗದೀಶ, ಬಸವರಾಜ ಗಟ್ಟು ಇದ್ದರು.
ವರದಿ : ಹಫೀಜುಲ್ಲ