ಬೆಳಗಾವಿ ಜಿಲ್ಲೆಯ ತಿಗಡಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ಒಳಗೊಂಡ ಗುಂಪು ತನ್ನನ್ನು ಅರೆಬೆತ್ತಲೆಗೊಳಿಸಿ ಥಳಿಸಿದ್ದಾರೆ ಮಹಿಳೆಯೊಬ್ಬರು ಆರೋಪಿಸಿದ್ದರು. ಆದರೆ, ಘಟನೆ ನಡೆದಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ, ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ ಗುಳೇದ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2023ರ ನವೆಂಬರ್ 21 ರಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಇದ್ದ ಗುಂಪು ತನ್ನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದೆ ಮತ್ತು ಅನುಚಿತವಾಗಿ ವರ್ತಿಸಿದೆ ಎಂದು ಮಹಿಳೆ ಆರೋಪಿಸಿದ್ದರು. ಡಿಸೆಂಬರ್ 29ರಂದು ಅವರು ನೀಡಿದ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗಿದೆ. ಆದರೆ, ಇಲ್ಲಿಯವರೆಗೆ, ಮಹಿಳೆಯ ಆರೋಪಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳು ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
“ತನ್ನ ಮೊಬೈಲ್ ಫೋನ್‌ನಲ್ಲಿರುವ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ, ಸಾಕ್ಷ್ಯವನ್ನು ಮರುಪಡೆಯಲು ಅವರ ಫೋನ್‌ಅನ್ನು ನಮಗೆ ನೀಡಿಲ್ಲ” ಎಂದು ಅವರು ತಿಳಿಸಿದ್ದಾರೆ.
“ಮೇಲ್ನೋಟಕ್ಕೆ, ಘಟನೆ ನಡೆದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿರಬಹುದು. ಮಹಿಳೆಯು ಗ್ರಾಮ ಪಂಚಾಯತಿಗೆ ಹೋಗಿ ತನ್ನ ಅಸ್ತಿ ವಿಚಾರವಾಗಿ ದೂರು ದಾಕಲಿಸಿರುವುದಕ್ಕೆ ಬಲವಾದ ಪುರಾವೆಗಳಿವೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿಯಲ್ಲಿ ಮತ್ತೊಂದು ಅಮಾನುಷ ಘಟನೆ; ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ – ಆರೋಪ
“ಗ್ರಾಮ ಪಂಚಾಯತಿ ಕಚೇರಿಯಲ್ಲಿ ಏನಾಯಿತು ಎಂದು ತನಿಖೆ ನಡೆಸುತ್ತಿದ್ದೇವೆ. ನವೆಂಬರ್ 21 ರಂದು ದೂರುದಾರರು ಮತ್ತು ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಾಗ ಮಹಿಳಾ ಅಧಿಕಾರಿಯೊಬ್ಬರು ಕಚೇರಿಯಲ್ಲಿದ್ದರು. ಅಲ್ಲಿ, ದೂರುದಾರರನ್ನು ವಿವಸ್ತ್ರಗೊಳಿಸಲಾಗಿಲ್ಲ ಅಥವಾ ಥಳಿಸಲಾಗಿಲ್ಲ ಎಂದು ಆ ಅಧಿಕಾರಿ ಪೊಲೀಸರಿಗೆ ತಿಳಿಸಿದ್ದಾರೆ” ಎಂದು ವಿವರಿಸಿದ್ದಾರೆ.
“ಹಗಲು ಹೊತ್ತಿನಲ್ಲಿ ಮಹಿಳಾ ಅಧಿಕಾರಿಯ ಎದುರೇ ಇಂತಹ ಘಟನೆ ನಡೆದಿದೆ ಎಂದು ಭಾವಿಸುವುದು ಕಷ್ಟ. ನವೆಂಬರ್ 21ರಂದು ಆಕೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ, ಬೈಲಹೊಂಗಲ ಪೊಲೀಸರು ಮಹಿಳೆಯ ವೈದ್ಯಕೀಯ ವರದಿಯನ್ನು ಪಡೆದಿದ್ದಾರೆ. ವರದಿಯ ಪ್ರಕಾರ, ಆಕೆಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಅಲ್ಲದೆ, ಅಂದು ಪೊಲೀಸರು ಆಕೆಯ ಹೇಳಿಕೆ ಪಡೆಯಲು ಹೋದಾಗ ಆಕೆ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.