ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೃಷಿ ಭೂಮಿಯನ್ನು ಕೃಷಿಯೇತರ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಪ್ರತ್ಯೇಕ ಭೂ ಪರಿವರ್ತನೆಯ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ಭೂ ಕಂದಾಯ ಕಾಯಿದೆ-1964ರ ಸೆಕ್ಷನ್ 95, 96, 97ರ ಪ್ರಕಾರ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಜಮೀನುಗಳು ಕೃಷಿಯೇತರ ಚಟುವಟಿಕೆಗಳಿಗೆ ಒಳಪಡುತ್ತವೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ, ಆ ಜಮೀನನ್ನು ಪ್ರತ್ಯೇಕವಾಗಿ ವಾಣಿಜ್ಯ ಉದ್ದೇಶಕ್ಕೆಂದು ಪರಿವರ್ತಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪುರಸಭೆ ವ್ಯಾಪ್ತಿಯ ಉದ್ಯಮಿ ಶ್ರೀಶೈಲ್ ಎಂಬುವರು ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಪೆಟ್ರೋಲ್ ಬಂಕ್ ತೆರೆದಿದ್ದಾರೆ. ಆ ಸಮಯದಲ್ಲಿ ಜಮೀನನ್ನು ಕೃಷಿಯೇತರ ಚಟುವಟುಕೆಗಳಿಗೆ ಬಳಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪರಿಗಣಿಸಿದ್ದ ಜಿಲ್ಲಾಧಿಕಾರಿಗಳು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಅನುಮತಿ ನೀಡಿದ್ದರು.
ಪೆಟ್ರೋಲ್ ಬಂಕ್ ತೆರೆದು ಉಳಿದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಅದಕ್ಕಾಗಿ, ವಾಣಿಜ್ಯ ಕಟ್ಟಡಗಳಿಗೆ ನಕ್ಷೆ ಮಂಜೂರು ಮಾಡುವಂತೆ ಬೈಲಹೊಂಗಲ ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು 2022ರ ಅಕ್ಟೋಬರ್ 13ರಂದು ಪುರಸಭೆ ತಿರಸ್ಕರಿಸಿತ್ತು.
ಶ್ರೀಶೈಲ್ ಅವರು ಪುರಸಭೆಯ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ, “ಭೂ ಪರಿವರ್ತನೆಯ ಅಗತ್ಯವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಕೆಆರ್‌ಎಸ್ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ: ಹೈಕೋರ್ಟ್
ಕೃಷಿಯೇತರ ಉದ್ದೇಶಕ್ಕಾಗಿ (ಪೆಟ್ರೋಲ್ ಬಂಕ್) ಪರಿವರ್ತಿಸಲಾದ ಭೂಮಿಯು ಕೃಷಿಯೇತರ ವಾಣಿಜ್ಯ ಬಳಕೆಗೂ ಲಭ್ಯವಾಗುತ್ತದೆ. ಪೆಟ್ರೋಲ್ ಬಂಕ್‌ಗಾಗಿ ಭೂಮಿಯನ್ನು ಪರಿವರ್ತಿಸಿ ಜಿಲ್ಲಾಧಿಕಾರಿಗಳ ಆದೇಶಿಸಿದ್ದಾರೆ. ಆದರೆ, ಪರಿವರ್ತಿತ ಭೂಮಿಯನ್ನು ವಾಣಿಜ್ಯ ಕಟ್ಟಡ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣ ಸಂಬಂಧ ಪ್ರತ್ಯೇಕಿಸಿ ನೋಡಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
ಮುಂದಿನ 60 ದಿನಗಳ ಒಳಗಾಗಿ ಅರ್ಜಿದಾರರ ಆಸ್ತಿಗೆ ಸಂಬಂಧಿಸಿದಂತೆ ನಿಯಮಗಳ ಅನುಸಾರ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಂತೆ ಪುರಸಭೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.