ಸಾಲ ಭಾದೆ ಮತ್ತು ಇಬ್ಬರು ಮಕ್ಕಳು ಮಾನಸಿಕ ಅಸ್ವಸ್ಥ ಸ್ಥಿತಿಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಳಗಿ ತಾಲೂಕಿನ ರುಮ್ಮನಗೂಡ ಗ್ರಾಮದಲ್ಲಿ ನಡೆದಿದೆ.
ಹೈದರ್ ಪಟೇಲ್ ಲಾಡಲೆ ಪಟೇಲ್ (65) ಆತ್ಮಹತ್ಯೆಗೆ ಶರಣಾದ ರೈತ.
ಮೃತ ರೈತರಿಗೆ 8 ಎಕರೆ ಜಮೀನು ಇತ್ತು. ಮಳೆ ಕೊರತೆಯಿಂದಾಗಿ ಸಂಪೂರ್ಣ ಬೆಳೆ ಕೈಗೆ ಬರದೆ ನಷ್ಟವಾಗಿದೆ. ಚಿಂಚೊಳಿ ಕೃಷ್ಣ ಗ್ರಾಮೀಣ ಬ್ಯಾಂಕ್ ಹಾಗೂ ಕೋಡ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕ್ ನಲ್ಲಿ ಅಂದಾಜು 2 ಲಕ್ಷ ಸಾಲ ಇದೆ. ಇನ್ನು ಖಾಸಗಿ ವ್ಯಕ್ತಿಗಳ ಬಳಿಯೂ ಸಾಲ ಮಾಡಿದ್ದಾರೆ. ಸಾಲದ ಹೊರೆ ಹೆಚ್ಚಾಗಿ ಅದನ್ನು ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಕುಟುಂಬಸ್ಥರಿಂದ ತಿಳಿದು ಬಂದಿದೆ.
ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.