ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿ ವಿಶ್ವವಿದ್ಯಾಲಯಗಳು ಪೂರ್ಣಕಾಲಿಕ ಕುಲಪತಿಗಳು ಇಲ್ಲದೆ ಕಾರ್ಯನಿರ್ವಹಿಸುತ್ತಿವೆ.
ಮೂರು ತಿಂಗಳ ಹಿಂದೆಯೇ ಕುಲಪತಿ ಹುದ್ದೆಗಳಿಗೆ ಶೋಧ ಸಮಿತಿಗಳು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದರೂ, ಕುಲಪತಿಗಳ ನೇಮಕವಾಗಿಲ್ಲ ಎಂದು ಹೇಳಲಾಗಿದೆ. ಹಿಂದೆ ಇದ್ದ ಕುಲಪತಿಗಳು ನಿವೃತ್ತರಾದ ಬಳಿಕ, ತಾತ್ಕಾಲಿಕ ಅಥವಾ ಉಸ್ತುವಾರಿ ಕುಲಪತಿಗಳ ಅಡಿಯಲ್ಲಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಮೂಲಗಳ ಪ್ರಕಾರ, ಈ ನಾಲ್ಕು ವಿಶ್ವವಿದ್ಯಾಲಯಗಳಿಗೆ ಹೊಸ ಕುಲಪತಿಗಳ ಹೆಸರನ್ನು ರಾಜ್ಯಪಾಲರು ಘೋಷಿಸಲು ಅಗತ್ಯ ಔಪಚಾರಿಕ ಕ್ರಮಗಳನ್ನು ಸರ್ಕಾರ ಪೂರ್ಣಗೊಳಿಸಿಲ್ಲ. ಈ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಮತ್ತು ಇತರ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಉಸ್ತುವಾರಿ ಅಥವಾ ತಾತ್ಕಾಲಿಕ ಕುಲಪತಿಗಳಿಗೆ ಅಧಿಕಾರ ನೀಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಶ್ವವಿದ್ಯಾಲಯಗಳಲ್ಲಿನ ಪ್ರಮುಖ ಯೋಜನೆಗಳನ್ನು ಉಸ್ತುವಾರಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ರಾಜ್ಯದಲ್ಲಿ ಎನ್‌ಇಪಿ ಸೃಷ್ಟಿಸಿದ ಸವಾಲುಗಳು ಬಹಿರಂಗ; ಸಮೀಕ್ಷೆ ಹೇಳುವುದೇನು?
“ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಮತ್ತು ಹೆಚ್ಚಿನ ಇಲಾಖೆಗಳು ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ಸುಗಮ ಕಾರ್ಯಾಚರಣೆಗೆ ಕುಲಪತಿಗಳ ನೇಮಕ ಪ್ರಕ್ರಿಯೆಯನ್ನು ಸರ್ಕಾರ ತ್ವರಿತಗೊಳಿಸಬೇಕು” ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರೊ. ನಾಗನ್ನವರ್ ಅವರು ಕಳೆದ ಹಲವಾರು ತಿಂಗಳುಗಳಿಂದ ಉಸ್ತುವಾರಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿನ ಕುಲಪತಿಗೆ ಹುದ್ದೆಗೆ ಪ್ರಾಧ್ಯಾಪಕ ಎಚ್.ವೈ ಕಾಂಬಲ್, ಸಿಎಮ್ ಥೈಗರಾಜ್ ಮತ್ತು ಎಚ್‌ಟಿ ಪೋಟೆ ಅವರ ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಆದರೆ, ಅಂತಿಮ ಘೋಷಣೆ ಬಾಕಿ ಇದೆ.