ಟ್ರಕ್ ಹಾಗೂ ಟ್ರೇಲರ್‌ಗಳು ಒಳಗೊಂಡ ಭಾರೀ ಸರಕು ಸಾಗಣೆ ಡೀಸೆಲ್ ವಾಹನಗಳಿಗೆ ಆರು ತಿಂಗಳೊಳಗೆ ವಾಯುಮಾಲಿನ್ಯ ಕಡಿಮೆಗೊಳಿಸಿ ಶುದ್ಧ ಇಂಧನದಿಂದ ಚಲಿಸುವ ಬಿಎಸ್ 6 ಅಳವಡಿಸುವಂತೆ ನೀತಿ ರೂಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ವಾಯುಮಾಲಿನ್ಯ ದೃಷ್ಟಿಯಿಂದ ಇದು ಪ್ರತಿಯೊಬ್ಬ ಪ್ರಜೆಗೂ ಮುಖ್ಯವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಅಭಯ್ ಎಸ್ ಓಕಾ ಹಾಗೂ ಪಂಕಜ್ ಮಿಟ್ಟಲ್ ಒಳಗೊಂಡ ಪೀಠವು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಇಲಾಖೆ ಹಾಗೂ ರಸ್ತೆ ಸಾರಿಗೆ ಹೆದ್ದಾರಿ ಇಲಾಖೆಗೆ ಭಾರೀ ಸರಕು ಸಾಗಣೆ ಡೀಸೆಲ್ ವಾಹನ ಬಳಸುವವರಿಗೆ ಸಿಎನ್‌ಜಿ, ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಒಳಗೊಂಡಂತೆ ಉತ್ತಮ ಮೂಲಗಳನ್ನು ಹುಡುಕುವ ಸಾಧ್ಯತೆಗಳನ್ನು ಅನ್ವೇಷಿಸುವಂತೆ ತಿಳಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ದೆಹಲಿ ಎನ್‌ಸಿಟಿ ಹಾಗೂ ದೆಹಲಿ ಎನ್‌ಸಿಆರ್ ಪ್ರದೇಶಗಳಲ್ಲಿ ಮಿತಿಮೀರಿದ ವಾಯುಮಾಲಿನ್ಯ ಅನುಭವಿಸುತ್ತಿರುವ ದೃಷ್ಟಿಯಿಂದ ಈ ವಿಷಯ ಹೆಚ್ಚು ಮಹತ್ವದ್ದಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
“ಕಳೆದ ಕೆಲವು ತಿಂಗಳುಗಳಲ್ಲಿ ಈ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ಅನಾರೋಗ್ಯಕರ ಹಾಗೂ ಅಪಾಯಕಾರಿ ವರ್ಗದಲ್ಲಿದೆ” ಎಂದು ಪೀಠ ಹೇಳಿದೆ.
ಡೀಸೆಲ್ ವಾಹನಗಳು ದೆಹಲಿಯ ತುಘಲಕಾಬಾದ್‌ನಲ್ಲಿರುವ ಇನ್‌ಲ್ಯಾಂಡ್ ಕಂಟೈನರ್ ಡಿಪೋಗೆ (ಐಸಿಡಿ) ಭೇಟಿ ನೀಡುವುದನ್ನು ನಿಲ್ಲಿಸಿ ಹಂತಹಂತವಾಗಿ ಸಿಎನ್‌ಜಿ ವಾಹನಗಳನ್ನು ಒಳಗೊಂಡು ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಹೈಬ್ರಿಡ್‌ಗೆ ಬದಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಮಾರ್ಚ್ 8, 2019 ರ ನೀಡಿದ ಆದೇಶದ ವಿರುದ್ಧ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾಡಿದ ಮೇಲ್ಮನವಿಯನ್ನು ನ್ಯಾಯಾಲಯವು ಅಂಗೀಕರಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಲ್ದೀವ್ಸ್ ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ
ಎನ್‌ಜಿಟಿ ಆದೇಶವು ಸಂಪೂರ್ಣ ನ್ಯಾಯಸಮ್ಮತವಲ್ಲದ ಹಾಗೂ ಅನಗತ್ಯವಾದ ಅವಲೋಕನಗಳನ್ನು ಒಳಗೊಂಡಿರುವುದರ ಬಗ್ಗೆ ಪೀಠವು ತನ್ನ ತೀರ್ಪಿನಲ್ಲಿ ತಿಳಿಸಿತು.
ಕೋರ್ಟ್ ತನ್ನ ತೀರ್ಪಿನಲ್ಲಿ, ಎನ್‌ಜಿಟಿಯ ಆದೇಶಗಳು ವಾಯುಮಾಲಿನ್ಯವನ್ನು ನಿಯಂತ್ರಿಸಲು ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ವಾಹನಗಳನ್ನು ನಿರ್ಬಂಧಿಸುವಲ್ಲಿ “ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲದ ಮತ್ತು ಅನಗತ್ಯವಾದ ಅವಲೋಕನಗಳು” ಒಳಗೊಂಡಿದೆ ಎಂದು ಪೀಠವು ಗಮನಿಸಿತು.
ಕಳೆದ ಕೆಲವು ದಶಕಗಳಿಂದ ಮಾಲಿನ್ಯದ ಸಮಸ್ಯೆ ವಿಶೇಷವಾಗಿ ವಾಯುಮಾಲಿನ್ಯವು ಕಳವಳಕ್ಕೆ ಕಾರಣವಾಗಿದೆ. ವಾಯುಮಾಲಿನ್ಯವು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅನುಚ್ಛೇದ 21 ರ ಖಾತರಿಪಡಿಸುವ ಜೀವನ ಹಕ್ಕು ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕನ್ನು ಒಳಗೊಂಡಿದೆ. ವಾಯುಮಾಲಿನ್ಯದ ವಿಷಯವು ಪ್ರತಿಯೊಬ್ಬ ನಾಗರಿಕನಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ವಾಯುಮಾಲಿನ್ಯವು ನಾಗರಿಕರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ” ಎಂದು ಕೋರ್ಟ್ ತಿಳಿಸಿದೆ.
ಕೇಂದ್ರ ಸರ್ಕಾರವೂ ತಾತ್ವಿಕವಾಗಿ ವರದಿಗೆ ಒಪ್ಪಿಗೆ ಸೂಚಿಸಿದ್ದರಿಂದ ಪೀಠ ತನ್ನ ಶಿಫಾರಸುಗಳನ್ನು ಅಂಗೀಕರಿಸಿತು. ನ್ಯಾಯಾಲಯವು ತನ್ನ ಆದೇಶದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ನಿರ್ಧರಿಸಿ ಜುಲೈ 31, 2024 ರಂದು ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಲು ನಿರ್ಧರಿಸಿತು.