ಯಾದಗಿರಿ ನಗರದ ಭಾರತೀಯ ರೆಡ್ ಕ್ರಾಸ್ ಸಹಯೋಗದೊಂದಿಗೆ ಹಳೆಯ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತನಿಧಿ ಕೇಂದ್ರಕ್ಕೆ ಏಳೆಂಟು ತಿಂಗಳುಗಳಿಂದ ಬೀಗ ಬಿದ್ದಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ಹೊಂದಿರುವ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲೊಂದಾದ ಯಾದಗಿರಿಯಲ್ಲಿ ತುರ್ತು ಚಿಕಿತ್ಸೆ ವೇಳೆ ರಕ್ತ ಸಿಗದೆ ಅನೇಕ ರೋಗಿಗಳು ಸಾವು-ಬದುಕಿನ ಮಧ್ಯೆ ಹೋರಾಡಿದ ಪ್ರಸಂಗಗಳು ಎದುರಾಗಿವೆ.
ಅಪಘಾತ, ಹೆರಿಗೆ ಸೇರಿದಂತೆ ಇನ್ನಿತರ ತುರ್ತು ಸಂದರ್ಭಗಳಲ್ಲಿ ಇಲ್ಲಿನ ರೋಗಿಗಳಲ್ಲಿ ಕಂಡುಬರುವ ರಕ್ತದ ಕೊರತೆ ನೀಗಿಸಬೇಕೆಂದರೆ ನೆರೆಯ ಕಲಬುರಗಿ, ರಾಯಚೂರು, ತೆಲಂಗಾಣದ ಹೈದರಾಬಾದ್ ಮಹಾರಾಷ್ಟ್ರದ ಸೋಲಾಪುರದ ಕಡೆಗೆ ಹೋಗುವ ಅನಿವಾರ್ಯತೆ ಉಂಟಾಗಿದೆ.
ಕೆಲವೊಮ್ಮೆ ಇಲ್ಲಿನ ಖಾಸಗಿ ರಕ್ತ ಶೇಖರಣಾ ಕೇಂದ್ರಗಳು ಕಲಬುರಗಿ, ರಾಯಚೂರು ಜಿಲ್ಲೆಗಳಿಂದ ತರಿಸುವ ಪರಿಸ್ಥಿತಿ ಎದುರಾಗಿದ್ದು, ಬಡ-ಮಧ್ಯಮ ವರ್ಗದ ರೋಗಿಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ರಕ್ತ ಕೊಂಡುಕೊಳ್ಳಲು ಆಗದೆ ಪರದಾಡಿರುವ ಪ್ರಸಂಗಗಳೂ ಇವೆ. ಪ್ರಸ್ತುತ ದಿನಗಳಲ್ಲಿ ರೋಗಿಗಳ ಸ್ಥಿತಿ ಮತ್ತಷ್ಟು ಚಿಂತೆಗೀಡಾಗಿದೆ. ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಹೋಗುವಂತಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ, ಸುಮಾರು 98 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಕ್ತನಿಧಿ ಕೇಂದ್ರ ಬಡ ರೋಗಿಗಳಿಗೆ ಆಸರೆಯಾಗದೆ ರಕ್ತನಿಧಿ ಕೇಂದ್ರ ಇಂದು ಬಾಗಿಲು ಮುಚ್ಚಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಯಶ್ ಅಭಿಮಾನಿಗಳ ಸಾವು: ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಸಚಿವ ಪಾಟೀಲ್
ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರೆಡ್ ಕ್ರಾಸ್ ರಕ್ತನಿಧಿ ಕೇಂದ್ರದಲ್ಲಿ ವೈದ್ಯರ ಸಲಹೆ ಮೇರೆಗೆ ರಕ್ತದ ಸಂಗ್ರಹ 150 ಎಂಎಲ್‌ನ ಒಂದು ಪ್ಯಾಕೆಟ್‌ಗೆ ₹700 ರಿಂದ ₹800ಕ್ಕೆ ದೊರೆಯುತ್ತಿತ್ತು. ರೋಗಿಗಳಿಗೆ ರಕ್ತ ನೀಡಲು ಬಂದ ದಾನಿಗಳಿಂದ ರಕ್ತ ತೆಗೆದುಕೊಂಡು ರಕ್ತನಿಧಿ ಕೇಂದ್ರದಲ್ಲಿನ ರಕ್ತವನ್ನು ಕಡಿಮೆ ವೆಚ್ಚದಲ್ಲಿ ಪಡೆದುಕೊಳ್ಳುತ್ತಿದ್ದರು. ಆದರೆ ಖಾಸಗಿ ರಕ್ತನಿಧಿ ಕೇಂದ್ರದಲ್ಲಿ ಸುಮಾರು ₹2500ರಿಂದ ₹3,000 ಪಾವತಿ ಮಾಡಿ ರಕ್ತ ಪಡೆದುಕೊಳ್ಳಬೇಕಾಗುತ್ತದೆ. ಇದರಿಂದ ಬಡ ರೋಗಿಗಳಿಗೆ ಕಷ್ಟವಾಗುತ್ತಿದ್ದು, ನಲುಗುವಂತಾಗಿದೆ” ಎಂದು ತಿಳಿಸಿದರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.