ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕೊಪ್ಪಳದಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಎಐಸಿಸಿ ಮೂಲಗಳು ಸ್ಥಳೀಯ ಕಾಂಗ್ರೆಸ್ ಘಟಕಕ್ಕೆ ಮಾಹಿತಿ ನೀಡದೆ ಎನ್ನಲಾಗಿದೆ. ಪ್ರಿಯಾಂಕಾ ಸ್ಪರ್ಧೆಗೆ ಕೊಪ್ಪಳವನ್ನು ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಕೊಪ್ಪಳ ಇಲ್ಲದಿದ್ದಾರೆ ತೆಲಂಗಾಣದ ಯಾವುದಾದರೂ ಕ್ಷೇತ್ರದಲ್ಲಿ ಪ್ರಿಯಾಂಕ ಸ್ಪರ್ಧಿಸಬಹುದು ಎಂಬ ಮಾತುಗಳೂ ಇವೆ. ‘ದಯವಿಟ್ಟು ಕೊಪ್ಪಳಕ್ಕೆ ಬನ್ನಿ’ ಎಂಬ ಹ್ಯಾಷ್‌ಟ್ಯಾಗ್ ಜೊತೆ ಕೆಲವರು ಟ್ವಿಟರ್‌ನಲ್ಲಿ ಪ್ರಿಯಾಂಕಾ ಅವರಿಗೆ ಆಹ್ವಾನ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ಯಾವೊಬ್ಬ ಹಿರಿಯ ನಾಯಕರೂ ಇದನ್ನು ಖಚಿತಪಡಿಸಿಲ್ಲ.
ಕೊಪ್ಪಳದ ಹಾಲಿ ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯವಾಗಿ ಸಂಸದರ ಮೇಲೆ ಅಸಮಧಾನ ಮತ್ತು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಲಾಭ ನೀಡಲಿವೆ ಎಂದು ಕಾಂಗ್ರೆಸ್ಸಿಗರು ನಂಬಿದ್ದಾರೆ.
ನಮ್ಮ ನಾಯಕಿ ಪ್ರಿಯಾಂಕಾ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ಸ್ಥಳೀಯ ಕಾರ್ಯಕರ್ತರು ಹೇಳುತ್ತಿದ್ದಾರೆ. ಕೊಪ್ಪಳ ಕಾಂಗ್ರೆಸ್‌ನ ಭದ್ರ ಬುನಾದಿಯಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ, ಕಾಂಗ್ರೆಸ್ 6 ಕ್ಷೇತ್ರಗಳನ್ನು ಗೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಅವರಿಗೆ ಸುರಕ್ಷಿತ ಕ್ಷೇತ್ರವೆಂದು ಹೇಳಲಾಗಿದೆ.
ಈ ಹಿಂದೆ ಇಂದಿರಾ ಗಾಂಧಿಯವರು ಕರ್ನಾಟಕದಿಂದ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆದಿದ್ದರು. 1999ರಲ್ಲಿ ಸೋನಿಯಾ ಗಾಂಧಿ ಕೂಡ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಹೀಗಾಗಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ಕೊಪ್ಪಳ ಉತ್ತಮ ಸ್ಥಳವಾಗಿದೆ. ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೂ ಅಭಿಮಾನಿಗಳ ದಂಡೇ ಇದೆ.
ಪ್ರಿಯಾಂಕಾ ಗಾಂಧಿ ಕೊಪ್ಪಳದಿಂದ ಸ್ಪರ್ಧಿಸಿದರೆ ಕರ್ನಾಟಕಕ್ಕೆ ವರದಾನವಾಗಲಿದೆ. ಅವರ ಸ್ಪರ್ಧೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಕೊಪ್ಪಳ ಕಾಂಗ್ರೆಸ್ ಸದಸ್ಯರು ಹೇಳುತ್ತಾರೆ. .
ಪ್ರಿಯಾಂಕಾ ಗಾಂಧಿ ಸ್ಪರ್ಧೆಯ ಸುದ್ದಿ ನಿಜವಲ್ಲ. ಕೊಪ್ಪಳದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.