ಕೋಲಾರ-ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟದಲ್ಲಿ(ಕೋಚಿಮುಲ್) ಹೊಸದಾಗಿ ನೇಮಕಾತಿ ಪಡೆದಿರುವ ಅಭ್ಯರ್ಥಿಗಳ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಪರಿಶೀಲನೆ ಮಾಡುವ ಮೂಲಕ ಅಕ್ರಮ ಬಯಲಿಗೆಳೆಯಲು ಮುಂದಾಗಿದೆ.
ಅಭ್ಯರ್ಥಿಗಳ ಸಂದರ್ಶನದ ಅಂಕಗಳನ್ನು ತಿದ್ದಲಾಗಿದ್ದು, ಒಂದು ಹುದ್ದೆಗೆ 20ರಿಂದ 30ಲಕ್ಷ ಹಣ ಪಡೆದಿರುವುದಾಗಿ ಕೋಚಿಮುಲ್ ನಿರ್ದೇಶಕರು, ನೇಮಕಾತಿ ಸಮಿತಿ ಸದಸ್ಯರು ತನಿಖೆ ವೇಳೆ ಒಪ್ಪಿಕೊಂಡಿರುವುದಾಗಿ ಇಡಿ ಪ್ರಕಟಣೆಯಲ್ಲಿ ತಿಳಿಸಿತ್ತು.
ಈ ಹಿನ್ನೆಲೆ ಹೊಸದಾಗಿ ನೇಮಕಗೊಂಡಿರುವ ಅಭ್ಯರ್ಥಿಗಳ ಪೈಕಿ ಈಗಾಗಲೇ 10 ಮಂದಿಯನ್ನು ತನಿಖೆಗೊಳಪಡಿಸಲಾಗಿದೆ. ಉಳಿದವರ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮದ ಆರೋಪ ನಡೆದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಸೇರಿದಂತೆ ಕೆಲ ನಿರ್ದೇಶಕರ ಮನೆಯಲ್ಲಿ ಎರಡು ದಿನಗಳ ಕಾಲ ಶೋಧ ನಡೆಸಿದ್ದರು. ಇದೀಗ ಹೊಸದಾಗಿ ನೇಮಕಾತಿ ಪಡೆದಿರುವ ಅಭ್ಯರ್ಥಿಗಳ ಬ್ಯಾಂಕ್ ಖಾತೆ ತನಿಖೆಗೆ ಮುಂದಾಗಿದ್ದು, ಬಿಗ್ ಶಾಕ್ ನೀಡಿದೆ.